ಕೊರೋನಾ ಲಸಿಕೆಯಿಂದ ಪ್ರಾಣ ರಕ್ಷಣೆ, ಶುಕ್ರವಾರ ರಾಜ್ಯದ ಕೊರೋನಾ ನಿಯಮ ಭವಿಷ್ಯ ನಿರ್ಧಾರ: ಡಾ ಕೆ ಸುಧಾಕರ್
ಬೆಂಗಳೂರು: ನಮ್ಮ ಸರ್ಕಾರದ ಮೊದಲ ಆದ್ಯತೆ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜನರ ಜೀವವನ್ನು ಉಳಿಸುವುದು, ಜನರ ಜೀವನಕ್ಕೆ ಕುಂದುಕೊರತೆಗಳು ಆಗದಂತೆ ನೋಡಿಕೊಳ್ಳುವುದು, ಎರಡನೆಯದಾಗಿ ಸರ್ಕಾರದ ನಿರ್ಧಾರಗಳಿಂದ ಜನರ ಜೀವನಕ್ಕೆ ಸಮಸ್ಯೆಯಾಗಬಾರದು ಎಂಬುದು. ಹೀಗಾಗಿ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಜನರಿಗೆ ತೊಂದರೆಯಾಗುವ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ತಮ್ಮ ನಿವಾಸದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇನ್ನು ಎರಡು ಮೂರು ದಿವಸಗಳಲ್ಲಿ ರಾಜ್ಯದಲ್ಲಿನ ಕೋವಿಡ್ ಸೋಂಕಿನ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಶುಕ್ರವಾರ ಬೆಳಗ್ಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅದರಲ್ಲಿ ಎಲ್ಲ ವರ್ಗದ ಜನರು, ತಜ್ಞರು, ತಾಂತ್ರಿಕ ಸಮಿತಿ ಸಲಹೆಗಾರರು ಎಲ್ಲರೂ ನೀಡಿದ ಅಭಿಪ್ರಾಯಗಳು, ಸಲಹೆಗಳನ್ನು ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೊರೋನಾ ಕರ್ಫ್ಯೂ, ನಿರ್ಬಂಧಗಳ ಬಗ್ಗೆ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಡಲಿದೆ. ಶುಕ್ರವಾರ ರಾತ್ರಿಯಿಂದ ಸರ್ಕಾರದ ನಿರ್ಧಾರ ಹೊರಬೀಳಲಿದೆ ಎಂದರು.
ಲಸಿಕೆಯೊಂದೇ ರಾಮಬಾಣ: ಕೊರೋನಾ ಲಸಿಕೆ ನೀಡಿದರೆ ಸೋಂಕಿನಿಂದ ಯಾವ ರೀತಿ ಬಚಾವಾಗಬಹುದು, ರೋಗ ಉಲ್ಭಣವಾಗದಂತೆ ತಡೆಯಬಹುದು ಎಂದು ನಮಗೆ ಸ್ಪಷ್ಟವಾಗಿ ಗೊತ್ತಾಗಿದೆ, ಲಸಿಕೆ ಪರಿಣಾಮ ಬೀರುತ್ತಿದೆ. ಹಾಗಾಗಿ ಫಲಾನುಭವಿಗಳೆಲ್ಲರೂ ತಪ್ಪದೆ ಕೊರೋನಾ ಸೋಂಕಿಗೆ ಲಸಿಕೆ ಹಾಕಿಸಿಕೊಳ್ಳುವುದು ಅತ್ಯಗತ್ಯ. 15 ವರ್ಷಕ್ಕೆ ಮೇಲ್ಪಟ್ಟ ಮಕ್ಕಳೆಲ್ಲರೂ ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ ಎಂದು ಮತ್ತೊಮ್ಮೆ ಆರೋಗ್ಯ ಸಚಿವರು ಪುನರುಚ್ಛರಿಸಿದರು.