ಶೇ.39ರಷ್ಟು ಮಂದಿಗೆ ಮಾತ್ರ 3ನೇ ಡೋಸ್ ಲಸಿಕೆ: ಸಚಿವ ಸುಧಾಕರ್ ಅಸಮಾಧಾನ
ಬೆಂಗಳೂರು: ರಾಜ್ಯದಲ್ಲಿ ಮುಂಚೂಣಿ ಕಾರ್ಯಕರ್ತರ ಮುನ್ನೆಚ್ಚರಿಕೆ ಲಸಿಕೆ ಅಭಿಯಾನಕ್ಕೆ ನಿರೀಕ್ಷೆಯಂತೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿಲ್ಲ. ಮುಂಚೂಣಿ ಕಾರ್ಯಕರ್ತರು ತಪ್ಪದೇ ಈ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಅವರು ಮನವಿ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ಸಭೆ ಬಳಿಕ ಮಾತನಾಡಿದ ಅವರು, ಮುನ್ನೆಚ್ಚರಿಕೆ ಲಸಿಕೆ ಡೋಸ್ ಅನ್ನು ಮುಂಚೂಣಿ ಕಾರ್ಯಕರ್ತರು ಎಲ್ಲರೂ ಪಡೆಯಬೇಕು. ಸದ್ಯ ರಾಜ್ಯದಲ್ಲಿ ಶೇ.39ರಷ್ಟು ಮಾತ್ರ ಗುರಿ ಸಾಧನೆಯಾಗಿದೆ. ಆದ್ದರಿಂದ ಮುನ್ನೆಚ್ಚರಿಕೆ ಡೋಸ್ ಲಸಿಕಾರಣವನ್ನು ದೊಡ್ಡ ಅಭಿಯಾನದಂತೆ ಮಾಡಲು ತೀರ್ಮಾನಿಸಲಾಗಿದ್ದು, ಅರ್ಹ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ ಹೊಂದಿರುವವರು ಲಸಿಕೆ ಪಡೆಯಬೇಕು ಎಂದು ಹೇಳಿದರು.
ಕೊರೋನಾ ಲಸಿಕೆ ನೀಡಿಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಪರೀಕ್ಷೆಯನ್ನು ಇದೇ ರೀತಿ ಮುಂದುವರಿಸಬೇಕು. 60 ವರ್ಷ ಮೇಲ್ಪಟ್ಟವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಜೊತೆಗೆ ಅವರಿಗೆ ಹೆಚ್ಚು ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಎಲ್ಲಾ ಜಿಲ್ಲೆ, ಗ್ರಾಮೀಣ ಪ್ರದೇಶಗಳಲ್ಲಿ ವಾರ್ ರೂಮ್ ನಿರ್ಮಿಸಿ, ಅದರ ಮೂಲಕ ಟೆಲಿಟ್ರಯಾಜಿಂಗ್ ಮಾಡಬೇಕು.
ಪಾಸಿಟಿವ್ ಆದವರು ನೇರವಾಗಿ ಆಸ್ಪತ್ರೆಗೆ ಹೋಗವಂತಾಗಬಾರದು, ಚಿಕಿತ್ಸೆ ಅಗತ್ಯವಿಲ್ಲದಿದ್ದರೂ ಆತಂಕದಿಂದ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಬೇಕು. ಅಗತ್ಯವಿರುವವರಿಗೆ ಮಾತ್ರ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಹೋಮ್ ಐಸೋಲೇಷನ್ ಕಿಟ್ ಗಳನ್ನು ಪ್ರತಿ ರೋಗಿಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ. ಜಿಲ್ಲೆಗಳಿಗೆ ಕಿಟ್ ಗಳನ್ನು ಕಳುಹಿಸಲಿದ್ದು, ಅಲ್ಲಿಂದ ಪ್ಯಾಕ್ ಮಾಡಿ ಮನೆಗೆ ಕಳುಹಿಸಲಾಗುವುದು ಎಂದರು.
ರಾಜ್ಯದಲ್ಲಿ ಆ್ಯಕ್ಸಿಜನ್ ಗೂ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಸದ್ಯ 264 ಆಕ್ಸಿಜನ್ ಘಟಕಗಳಿದ್ದು, ಈ ಪೈಕಿ 222 ಘಟಕ ಕಾರ್ಯಾರಂಭವಾಗಿದೆ. ಇನ್ನೂ 17 ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಸ್ಥಾಪಿಸುವ ಪ್ರಸ್ತಾಪವಿದೆ ಎಂದು ಮಾಹಿತಿ ನೀಡಿದರು.