ಸಿಎಂ ನಿವಾಸದ ಬಳಿಯೇ ಪೆಡ್ಲರ್ ಗಳ ಜೊತೆ ಗಾಂಜಾ ದಂಧೆಗಿಳಿದಿದ್ದ ಇಬ್ಬರು ಪೊಲೀಸರ ಬಂಧನ!
ಬೆಂಗಳೂರು: ಮುಖ್ಯಮಂತ್ರಿ ನಿವಾಸದಲ್ಲಿದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾಗದಲೇ ಮಾದಕ ದ್ರವ್ಯ ದಂಧೆಕೋರರ ಜತೆ ಡೀಲ್ ಕುದುರಿಸಲು ಯತ್ನಿಸಿದ್ದ ಇಬ್ಬರು ಪೊಲೀಸರನ್ನು ಆರ್‌ಟಿ ನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಕೋರಮಂಗಲ ಪೊಲೀಸ್ ಠಾಣೆಯ ಇಬ್ಬರು ಪೊಲೀಸರು ಮಾದಕ ದ್ರವ್ಯ ದಂಧೆಕೋರನೊಬ್ಬನ ಬಳಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಇಬ್ಬರನ್ನೂ ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಬಂಧಿತ ಪೊಲೀಸರನ್ನು ಮುಖ್ಯ ಪೇದೆ ಶಿವಕುಮಾರ್ ಹಾಗೂ ಪೇದೆ ಸಂತೋಷ್ ಎಂದು ಗುರ್ತಿಸಲಾಗಿದೆ. ಜನವರಿ 13 ರಂದು ಮುಖ್ಯಮಂತ್ರಿಗಳ ಖಾಸಗಿ ನಿವಾಸದ ಬಳಿಯೇ ಘಟನೆ ನಡೆದಿದ್ದು, ಈ ವೇಳೆ ಇಬ್ಬರನ್ನೂ ಬಂಧಿಸಲಾಗಿದೆ ಎನ್ನಲಾಗುತ್ತಿದೆ.
ಸಂಜೆ 6.30ರ ಸುಮಾರಿಗೆ ಸಿಎಂ ನಿವಾಸದ ಬಳಿ ನಿಂತಿದ್ದ ಆಟೋರಿಕ್ಷಾದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸ್ಥಳೀಯರೊಬ್ಬರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಈ ವೇಳೆ ಹೊಯ್ಸಳ ಗಸ್ತು ತಿರುಗುವ ವಾಹನವು ಸ್ಥಳಕ್ಕೆ ಧಾವಿಸಿದ್ದು, ರಿಕ್ಷಾದಲ್ಲಿ ಕುಳಿತಿದ್ದ ಇಬ್ಬರು ಮತ್ತು ಪೊಲೀಸ್ ಸಮವಸ್ತ್ರದಲ್ಲಿ ಇಬ್ಬರು ವ್ಯಕ್ತಿಗಳು ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿತ್ತು. ಬಳಿಕ ಹೊಯ್ಸಳ ಸಿಬ್ಬಂದಿ ಅವರನ್ನು ವಿಚಾರಿಸಿದಾಗ ನಾಲ್ವರಲ್ಲಿ ಇಬ್ಬರು ಡ್ರಗ್ಸ್ ದಂಧೆಕೋರರು ಎಂಬ ಮಾಹಿತಿ ಸಿಕ್ಕಿತ್ತು. ಪ್ರಕರಣ ಸಂಬಂಧ ವಿಚಾರಣೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
400 ಗ್ರಾಂ ಗಾಂಜಾ ವಶಕ್ಕೆ
ವಿಚಾರಣೆ ವೇಳೆ ಇಬ್ಬರು ಗಾಂಜಾ ಮಾರಾಟಗಾರರು ಇಬ್ಬರು ಪೊಲೀಸರು ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ ಎಂದು ಹೇಳಿದ್ದರು. ಇದೀಗ ಇಬ್ಬರು ಪೊಲೀಸರನ್ನು ಕರೆತರಲು ತಂಡವನ್ನು ಕಳುಹಿಸಲಾಗಿತ್ತು. ಆರಂಭದಲ್ಲಿ ಇಬ್ಬರೂ ಠಾಣೆಗೆ ಬರಲು ನಿರಾಕರಿಸಿದರು, ಇಬ್ಬರು ಸಿಎಂ ನಿವಾಸದ ಬಳಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ವಿಚಾರಣೆ ವೇಳೆ ಇಬ್ಬರು ತಪ್ಪು ಒಪ್ಪಿಕೊಂಡಿದ್ದಾರೆ. ಡ್ರಗ್ ಪೆಡ್ಲರ್‌ಗಳನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದರು ಎಂಬುದು ಸ್ಪಷ್ಟವಾಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಒಂದು ತಿಂಗಳ ಹಿಂದೆ ಕೂಡ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ತಪಾಸಣೆಗೆ ನಿಯೋಜನೆಗೊಂಡಿದ್ದ ಶಿವಕುಮಾರ್ ಮತ್ತು ಸಂತೋಷ್ ಡಂಜೊ ಡೆಲಿವರಿ ಬಾಯ್ ವೊಬ್ಬನನ್ನು ತಡೆದು ನಿಲ್ಲಿಸಿ, ಡ್ರಗ್ಸ್ ಪಾರ್ಸೆಲ್ ಗಳು ಬಂದಿದ್ದೇ ಆದರೆ, ಈ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಮಾಹಿತಿ ನೀಡಲು ನಿರಾಕರಿಸಿದರೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ಡೆಲಿವರಿ ಬಾಯ್ ಒಪ್ಪಿದಾಗ ಆತನನ್ನು ಬಿಟ್ಟಿದ್ದಾರೆ. ಕೆಲ ದಿನಗಳ ಬಳಿಕ ಡೆಲಿವರಿ ಬಾಯ್ ಪೊಲೀಸರಿಗೆ ಕರೆ ಮಾಡಿದ್ದು, ಯುವತಿಯೊಬ್ಬಳಿಗೆ ಗಾಂಜಾ ಇರುವ ಪಾರ್ಸೆಲ್ ಒಂದು ಬಂದಿದ್ದು, ಯುವತಿಗೆ ನೀಡಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಸಂಗ್ರಹಿಸಿ ನಂತರ ಯುವತಿಯಿದ್ದ ವಿಳಾಸಕ್ಕೆ ಹೋಕಿದ್ದಾರೆ. ಬಳಿಕ ಯುವತಿಗೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿ ಗಾಂಜಾ ಪೂರೈಕೆ ಮಾಡುತ್ತಿದ್ದ ವ್ಯಕ್ತಿಯ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ಬಿಟಿಎಂ ಲೇ ಔಟ್ ನಲ್ಲಿದ್ದ ಡ್ರಗ್ಸ್ ಪೆಡ್ಲರ್ ಮನೆಗೆ ಜನವರಿ 13ರ ಬೆಳಿಗ್ಗೆ ಹೋಗಿದ್ದು, ಆತನ ಬಳಿಯಿದ್ದ 400 ಗ್ರಾಂ ಗಾಂಜಾ ಪಡೆದುಕೊಂಡಿದ್ದಾರೆ. ಅಲ್ಲದೆ, ಆಟೋರಿಕ್ಷಾದಲ್ಲಿ ಪೆಡ್ಲರ್ ಗಳನ್ನು ಕರೆದುಕೊಂಡು ಬಂದಿದ್ದಾರೆ.
ಮುಖ್ಯಮಂತ್ರಿಗಳ ನಿವಾಸದ ಬಳಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಹಿನ್ನೆಲೆಯಲ್ಲಿ ಅಲ್ಲಿಯೇ ಬಂದು ಆಟೋರಿಕ್ಷಾದಲ್ಲಿ ಇಬ್ಬರಿಗೆ ಬೆದರಿಕೆ ಹಾಕಿದ್ದಾರೆ. ಸುಮಾರು 5 ಗಂಟೆಗಳಾದರೂ ಇಬ್ಬರ ನಡುವೆ ಒಪ್ಪಂದಗಳಾಗಿಲ್ಲ. ಈ ಕುರಿತ ಚಟುವಟಿಕೆಗಳನ್ನು ಗಮನಿಸುತ್ತಿದ್ದ ಸ್ಥಲೀಯ ನಿವಾಸಿಯೊಬ್ಬರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆ ಸಂಬಂಧ ಇದೀಗ ಪೊಲೀಸರು, ಇಬ್ಬರು ಪೊಲೀಸರನ್ನು ಬಂಧನಕ್ಕೊಳಪಡಿಸಿದ್ದು, 400 ಗ್ರಾಂ ಗಾಂಜಾ, ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.