ಸಿಎಂ ನಿವಾಸದ ಬಳಿ ಗಾಂಜಾ ಮಾರಾಟ ಕೇಸ್: ಈ ಹಿಂದೆಯೂ ಇಬ್ಬರೂ ಕಾನ್ಸ್ಟೇಬಲ್ ಪಾರ್ಟ್ನರ್ಸ್ ಇನ್ ಕ್ರೈಂ!
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಮುಂದೆಯೇ ಗಾಂಜಾ ಮಾರಾಟ ಮಾಡ್ತಿದ್ದ ಇಬ್ಬರು ಯುವ ಪೊಲೀಸ್ ಕಾನ್ಸ್ಟೇಬಲ್ಗಳ ಮೇಲೆ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಪ್ರಕರಣ ಹಳೆಯದೇ ಆದರೂ ಮಾದಕ ವಸ್ತು ಅಪರಾಧದಲ್ಲಿ ಈ ಹಿಂದೆಯೂ ಇವರ ಹಸ್ತಕ್ಷೇಪ ಇರುವುದು ಪ್ರಧಾನವಾಗಿ ಬೆಳಕಿಗೆ ಬಂದಿದೆ. ಸಿಎಂ ನಿವಾಸದ ಬಳಿ ಗಾಂಜಾ ಡೀಲ್ ಕುದುರಿಸುವ ಕೇಸ್ ನಲ್ಲಿ ಜಾಮೀನು ಪಡೆದಿದ್ದ ಆರೋಪಿಗಳಾದ ಶಿವಕುಮಾರ ಹಾಗೂ ಸಂತೋಷ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಇವರಿಬ್ಬರ ವಿರುದ್ಧ ಇದೀಗ ಬೆದರಿಕೆ ಪ್ರಕರಣ ದಾಖಲಾಗಿದೆ. ಆರ್ ಟಿ ನಗರ ಠಾಣೆಯಲ್ಲಿ ಬಂಧನವಾಗಿದ್ದ ಪೊಲೀಸ್ ಕಾನ್ಸ್ಟೇಬಲ್ಗಳಾದ ಶಿವಕುಮಾರ್ ಹಾಗೂ ಸಂತೋಷ್ ನೋವ್ಕಾರ್ ಕೋರಮಂಗಲ ಠಾಣೆಯ ಪೊಲೀಸ್ ಸಿಬ್ಬಂದಿ. ಗಾಂಜಾ ಪ್ರಕರಣದಲ್ಲಿ ಅಖಿಲ್ ರಾಜ್ ಹಾಗೂ ಅಮ್ಜದ್ ಜೊತೆ ಈ ಇಬ್ಬರು ಪೊಲೀಸ್ ಸಿಬ್ಬಂದಿ ಅರೆಸ್ಟ್ ಆಗಿದ್ದರು. ಇದೀಗ ಇದೇ ಪೊಲೀಸ್ ಸಿಬ್ಬಂದಿಯ ಹಳೇ ಕ್ರಿಮಿನಲ್ ಕರಾಳ ಚರಿತ್ರೆ ಕೂಡ ಬಯಲಿಗೆ ಬಂದಿದೆ.
ಮಾದಕ ಅಪರಾಧದಲ್ಲಿ ಈ ಹಿಂದೆಯೂ ಕಾನ್ಸ್ಟೇಬಲ್ಗಳ ಹಸ್ತಕ್ಷೇಪ ಪತ್ತೆ!: ಆಡುಗೋಡಿ ನಿವಾಸಿ ಆಟೋ ಚಾಲಕ ಇಲಿಯಾಸ್ ರಿಂದ ಕೋರಮಂಗಲ ಠಾಣೆಯಲ್ಲಿ ಇವರಿಬ್ಬರ ವಿರುದ್ಧ ದೂರು ನೀಡಲಾಗಿದೆ. ಕಳೆದ ಅಕ್ಟೋಬರ್ 25 ನೇ ತಾರೀಕು ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಬಳಿ ಇಲಿಯಾಸ್ ಹಾಗೂ ಆತನ ಸ್ನೇಹಿತ ಸೈಯದ್ ಗಾಂಜಾ ಸೇವನೆ ಮಾಡ್ತಿದ್ದರು. ಆ ವೇಳೆ ಕೋರಮಂಗಲ ಪೊಲೀಸ್ ಸಿಬ್ಬಂದಿಯಾದ ಶಿವಕುಮಾರ್ ಹಾಗೂ ಸಂತೋಷ್ ಅವರಿಬ್ಬರೂ ಆಟೋ ಚಾಲಕ ಇಲಿಯಾಸ್ ನನ್ನು ಹಿಡಿದಿದ್ದರು. ಗಾಂಜಾ ತುಂಬಿದ್ದ ಮೂರು ಸಿಗರೇಟನ್ನ ವಶಕ್ಕೆ ತೆಗೆದುಕೊಂಡಿದ್ದ ಇವರಿಬ್ಬರೂ ಬರೋಬ್ಬರಿ ಒಂದು ಲಕ್ಷ ರೂಪಾಯಿ ಲಂಚಕ್ಕೆ ಡಿಮಾಂಡ್ ಮಾಡಿದ್ದರು. ಇಲ್ಲದಿದ್ದರೆ ಗಾಂಜಾ ಮಾರಾಟದ ಕೇಸ್ ದಾಖಲಿಸೋದಾಗಿ ಬೆದರಿಕೆ ಒಡ್ಡಿದ್ದರು!
ಪ್ರಕರಣದಲ್ಲಿ ಬೆದರಿದ ಆಟೋ ಚಾಲಕ ಇಲಿಯಾಸ್, ನನ್ನ ಕೈಲಿ ಒಂದು ಲಕ್ಷ ಕೊಡುವುದಕ್ಕೆ ಆಗಲಿಲ್ಲ. ಹಾಗಾಗಿ 5 ಸಾವಿರ ರೂ ಕೊಟ್ಟು ಸುಮ್ಮನಾಗಿದ್ದೆ. ಇದೀಗ ಶಿವಕುಮಾರ್ ಹಾಗೂ ಸಂತೋಷ್ ಅರೆಸ್ಟ್ ಆಗಿರೋ ವಿಚಾರ ಮಾಧ್ಯಮಗಳ ಮೂಲಕ ತಿಳಿದುಬಂತು ಎಂದು ಹೇಳಿದ್ದಾರೆ. ಸದ್ಯ ಇಲಿಯಾಸ್ ಗಾಂಜಾ ಸಿಗರೇಟ್ ಪ್ರಕರಣ ಸಂಬಂಧ ಕೋರಮಂಗಲ ಠಾಣೆಯಲ್ಲಿ FIR ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.