Kannada NewsNewsBengaluru CityBengaluru : Dr Anil Kumar Opinion On Mandatory Covid Vaccine For Childreans ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕುವುದು ಸರಿಯಲ್ಲ : ಖ್ಯಾತ ವೈದ್ಯ ಡಾ.ಅನಿಲ್‌ಕುಮಾರ್‌ ಅಭಿಮತ

ಹೈಲೈಟ್ಸ್‌:

  • ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕುವುದು ಸರಿಯಲ್ಲ
  • ಖ್ಯಾತ ವೈದ್ಯ ಡಾ.ಅನಿಲ್‌ಕುಮಾರ್‌ ಅವುಲಪ್ಪ ಅಭಿಮತ
  • ರೋಗ ನಿರೋಧಕ ಶಕ್ತಿ ಪ್ರಕೃತಿ ಸಹಜವಾಗಿಯೇ ಹೆಚ್ಚಿರುತ್ತದೆ ಎಂದ ವೈದ್ಯ

ಬೆಂಗಳೂರು : ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕುವುದು ಸರಿಯಲ್ಲ ಎಂದು ಖ್ಯಾತ ವೈದ್ಯ ಹಾಗೂ ಕೋವಿಡ್‌ ನಿಗ್ರಹ ಕಾರ್ಯದಿಂದ ರಾಷ್ಟ್ರದ ಗಮನ ಸೆಳೆದ ಡಾ. ಅನಿಲ್‌ ಕುಮಾರ್‌ ಅವುಲಪ್ಪ ಅಭಿಪ್ರಾಯಪಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಕೋವಿಡ್‌ ಸಂದರ್ಭದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಜ್ಞ ವೈದ್ಯರ ಜೊತೆಗಿನ ಸಂವಾದ ಸರಣಿಯಲ್ಲಿ ಮೂರನೇ ಅಲೆಯ ಆತಂಕದ ಬಗ್ಗೆ ಡಾ.ಅನಿಲ್‌ಕುಮಾರ್‌ ಮಾತನಾಡಿದರು.

”ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಪ್ರಕೃತಿ ಸಹಜವಾಗಿಯೇ ಹೆಚ್ಚಿರುತ್ತದೆ. ಮಕ್ಕಳಿಗೆ ಲಸಿಕೆ ಹಾಕುವುದನ್ನು ಸರ್ವೋಚ್ಚ ನ್ಯಾಯಾಲಯ ಸಹ ಕಡ್ಡಾಯ ಮಾಡಿಲ್ಲ. ಪೋಷಕರೇ ಈ ಬಗ್ಗೆ ನಿರ್ಧರಿಸಲು ಅನುಮತಿ ನೀಡಿದೆ. ಹೀಗಿರುವಾಗ ರಾಜ್ಯದ ಎಲ್ಲೆಡೆ ಶಾಲೆಗಳು ಲಸಿಕೆಯನ್ನು ಕಡ್ಡಾಯವಾಗಿ ಹೇರುತ್ತಿರುವುದು ತಪ್ಪು” ಎಂದು ಅಭಿಪ್ರಾಯಪಟ್ಟರು.

”ಮೂರನೇ ಅಲೆಯನ್ನು ಎದುರಿಸಲು ಬೂಸ್ಟರ್‌ ಡೋಸ್‌ (ಮುನ್ನೆಚ್ಚರಿಕೆ ಲಸಿಕೆ)ಅಗತ್ಯವೆಂದು ಮಾಡಿರುವ ಪ್ರಚಾರದ ಬಗ್ಗೆ ಮಾತನಾಡಿದ ಅವರು ”ಬೂಸ್ಟರ್‌ಡೋಸ್‌ ಕಡ್ಡಾಯವೇನಲ್ಲ. ಮೂರನೆ ಅಲೆ ಪ್ರಾಣಾಪಕಾರಿಯಾಗಿ ಪರಿವರ್ತನೆಯಾಗಿಲ್ಲ. ಎರಡನೆಯ ಅಲೆಯಂತಹ ಆತಂಕ ಇದರಲ್ಲಿ ಕಾಣಿಸಿಲ್ಲ. ಮೂರನೆ ಅಲೆ ಅತಿ ವೇಗವಾಗಿ ಹರಡುವ ಗುಣ ಹೊಂದಿದೆ. ಆದರೆ ಪ್ರಾಣಕ್ಕೆ ಕುತ್ತು ತರುವುದಿಲ್ಲ. ಸಾಂಕ್ರಾಮಿಕ ರೋಗಗಳು ಹೊಸ ರೂಪ ಪಡೆಯುತ್ತಾ ಹೋಗುತ್ತವೆ. ಆದರೆ ಕ್ರಮೇಣ ಅದರ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ” ಎಂದರು.

ಆಹಾರ ಪದ್ಧತಿ ಬಹಳ ಮುಖ್ಯ
”ಕೋವಿಡ್‌ ಮೂರನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಬೇಡ. ಆದರೆ ಆ ಬಗ್ಗೆ ಅತಿ ಆತಂಕವೂ ಬೇಡ. ಅತಿ ಆತಂಕದಿಂದಾಗಿಯೇ ಹಲವರು ಸಾವನ್ನಪ್ಪಿದ್ದಾರೆ. ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರ ಪದ್ಧತಿ ಹಾಗೂ ಒಳ್ಳೆಯ ನಿದ್ದೆ ಅಗತ್ಯ. ಇವು ದೇಹವನ್ನು ಸಧೃಡವಾಗಿಸುತ್ತದೆ. ದೇಸಿ ಆಹಾರ ಪದ್ಧತಿ ಕೂಡಾ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತಿ ಮುಖ್ಯ” ಎಂದರು.

ಲಸಿಕೆ ಹಾಕಿಸಿಕೊಳ್ಳುವುದು ಒಳ್ಳೆಯದು
”ದೇಶದಲ್ಲಿ ಶೇ 85 ರಷ್ಟು ಮಂದಿಗೆ ಈಗಾಗಲೇ ಕೋವಿಡ್‌ ಬಂದು ಹೋಗಿರುವ ಸಾಧ್ಯತೆಯೇ ಹೆಚ್ಚಿದೆ. ಹಾಗಿದ್ದಲ್ಲಿಅವರು ಸಹಜವಾಗಿ ರೋಗ ನಿರೋಧಕ ಶಕ್ತಿ ಹೊಂದಿರುತ್ತಾರೆ. ಈ ಕಾರಣದಿಂದ ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಒಳ್ಳೆಯದು. ಆಗ ಕೋವಿಡ್‌ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಇದಕ್ಕೆ ಸಹಕಾರ ಅಗತ್ಯ. ನಮ್ಮ ಆರೋಗ್ಯದ ವಿಚಾರದಲ್ಲಿ ನಾವೇ ಮೊದಲ ವೈದ್ಯರು” ಎಂದರು.

ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸಂವಾದ ನಡೆಸಿಕೊಟ್ಟರು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *