ಅಧಿಕಾರದ ಅಮಲು ಬೇಡ, ಅಭಿವೃದ್ಧಿ ಕಡೆ ಗಮನ ಹರಿಸಿ; ಜಿಲ್ಲಾಧಿಕಾರಿಗಳಿಗೆ ನರೇಂದ್ರ ಮೋದಿ ಕಿವಿಮಾತು

ಹೊಸದಿಲ್ಲಿ: ಕೇಂದ್ರ ಸರಕಾರ ರೂಪಿಸಿದ ಪ್ರಮುಖ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಜಿಲ್ಲಾಧಿಕಾರಿಗಳ ಜತೆ ಸಂವಾದ ನಡೆಸಿದರು. ‘ಉತ್ತಮ ಆಡಳಿತ ನೀಡುವ ವಿಷಯದಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಪ್ರಧಾನ. ಸರಕಾರ ಅಭಿವೃದ್ಧಿಯ ಕನಸಿನೊಂದಿಗೆ ರೂಪಿಸುವ ಯಾವುದೇ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಾದದ್ದು ಮುಖ್ಯ. ಆ ಕೆಲಸ ಜಿಲ್ಲಾಧಿಕಾರಿಗಳಿಂದ ಮಾತ್ರವೇ ಸಾಧ್ಯವಾಗುತ್ತದೆ’ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

‘ಆಡಳಿತ ವ್ಯವಸ್ಥೆ ಮತ್ತು ಜನರ ನಡುವೆ ತಡೆಗೋಡೆ ಇರಬಾರದು. ಅಧಿಕಾರದ ಅಮಲಿಲ್ಲದೇ ಅಭಿವೃದ್ಧಿಯ ನಡೆ ಗಮನಿಸಬೇಕು. ವಿಚಾರ ವಿನಿಮಯದ ಸೇತುವೆ ಸದಾ ಮುಕ್ತವಾಗಿರಬೇಕು’ ಎಂದು ಅಧಿಕಾರಿಗಳಿಗೆ ಪ್ರಧಾನಿ ಸಲಹೆ ನೀಡಿದರು. ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ನಡೆಸಿದ ಸಮಾಲೋಚನೆ ಕಾರ್ಯಕ್ರಮದಲ್ಲಿ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳೂ ಪಾಲ್ಗೊಂಡಿದ್ದರು. ‘ಅಭಿವೃದ್ಧಿ ಯೋಜನೆಗಳ ಜಾರಿಗೆ ಪ್ರತಿ ರಾಜ್ಯವೂ ಸ್ವಯಂ ಮಾನದಂಡಗಳನ್ನು ನಿಗದಿಪಡಿಸಿಕೊಳ್ಳಬೇಕು. ಅತ್ಯುತ್ತಮ ಸಾಧನೆ ಮಾಡಿದ ರಾಜ್ಯದ ಯಶಸ್ಸಿನ ಸೂತ್ರವನ್ನು ಉಳಿದ ರಾಜ್ಯಗಳು ಪಾಲಿಸಬೇಕು. ತಮ್ಮ ಮುಂದಿರುವ ಸವಾಲುಗಳ ಮರು ಪರಿಶೀಲನೆಯನ್ನು ಸದಾ ನಡೆಸುತ್ತಲೇ ಇರಬೇಕು’ ಎಂದು ಕಿವಿಮಾತು ಹೇಳಿದರು.

ಪ್ರಧಾನಿ ಜೊತೆ ಯಾದಗಿರಿ ಡಿ.ಸಿ ಸಂವಾದ
ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಜಿಲ್ಲಾಧಿಕಾರಿಗಳ ಜತೆ ನಡೆಸಿದ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್‌. ಅವರು ಭಾಗವಹಿಸಿ ಜಿಲ್ಲೆಯ ಪ್ರಗತಿ ಕುರಿತು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಸಣ್ಣ ರೈತರ ಆದಾಯ ಹೆಚ್ಚಿಸಲು ಒಳನಾಡು ಮೀನುಗಾರಿಕೆಯನ್ನು ಕೈಗೊಳ್ಳಲು ಪ್ರೋತ್ಸಾಹಿಸಿದ್ದೇವೆ ಮತ್ತು ಈ ವರ್ಷ 7,416 ಮೆಟ್ರಿಕ್‌ ಟನ್‌ ಮೀನು ಮತ್ತು ಸಿಗಡಿಗಳನ್ನು ಉತ್ಪಾದಿಸಿ ವಾರ್ಷಿಕ 180 ಕೋಟಿ ರೂ. ವಹಿವಾಟು ನಡೆಸಿದ್ದೇವೆ. ಇದು ಹಿಂದಿನ ವರ್ಷಗಳಿಗಿಂತ ಶೇ.50 ರಷ್ಟು ಹೆಚ್ಚಾಗಿದೆ. ಜಿಲ್ಲೆಯಲ್ಲಿ ರಕ್ತಹೀನತೆಯ ನಿರಂತರ ಸಮಸ್ಯೆಗಳಿದ್ದು, ಎಲ್ಲಾ ಪಿಎಚ್‌ಸಿಗಳಲ್ಲಿ ಕಡ್ಡಾಯವಾಗಿ ಹಿಮೋಗ್ಲೋಬಿನ್‌ ಪರೀಕ್ಷೆಯನ್ನು ಮಾಡಲು ಎಲ್ಲಾ ಆಶಾ ಕಾರ್ಯಕರ್ತೆಯರು ಮತ್ತು ಎಎನ್‌ಎಂಗಳಿಹೆ ತರಬೇತಿ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ವಿವರಿಸಿದರು.

‘ಜಿಲ್ಲೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಾಡಿದ ಪ್ರಯತ್ನಗಳು ಶ್ಲಾಘನೀಯವಾಗಿದೆ’ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *