ಬೆಳಗಾವಿ ಆಸ್ಪತ್ರೆಯ 20 ವೈದ್ಯರು, 45 ಸಿಬ್ಬಂದಿಗೆ ಕೋವಿಡ್ 19 ಪಾಸಿಟಿವ್
ಬೆಳಗಾವಿ: ಬೆಳಗಾವಿ ಜಿಲ್ಲಾ ಆಸ್ಪತ್ರೆ (ಬೆಳಗಾವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಮತ್ತು ನರ್ಸಿಂಗ್ ಕಾಲೇಜಿನ 20 ವೈದ್ಯರು ಮತ್ತು 45 ಸಿಬ್ಬಂದಿಗಳಿಗೆ ಕೋವಿಡ್-ಪಾಸಿಟಿವ್ ಕಂಡು ಬಂದಿದೆ.
ಬೆಳಗಾವಿಯಲ್ಲಿ ಕೋವಿಡ್ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ, ಸರ್ಕಾರಿ ಕಚೇರಿಗಳು ಮತ್ತು ಆಸ್ಪತ್ರೆಗಳ ಎಲ್ಲಾ ಉದ್ಯೋಗಿಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ಸರ್ಕಾರ ಸೂಚಿಸಿತ್ತು. ಪರೀಕ್ಷೆ ನಡೆಸಿದ ಹಲವರಿಗೆ ಕೋವಿಡ್ ಪಾಸಿಟಿವ್ ಬಂದಿದೆ.
ಕೋವಿಡ್ ಪಾಸಿಟಿವ್ ಬಂದಿರುವ ವೈದ್ಯರು ಮತ್ತುಸಿಬ್ಬಂದಿಯನ್ನು ಹೋಮ್ ಐಸೋಲೇಷನ್ ಗೆ ಕಳುಹಿಸಲಾಗಿದೆ ಎಂದು ಬಿಮ್ಸ್ ಮೂಲಗಳು ತಿಳಿಸಿವೆ. ನೆಗೆಟಿವ್ ಇರುವ ಕಾಲೇಜಿನ ಸಿಬ್ಬಂದಿ ರೋಗಿಗಳ ನಿರ್ವಹಣೆ ಮಾಡುತ್ತಿದ್ದಾರೆ.
ಇದೇ ವೇಳೆ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ರೇಣುಕಾದೇವಿ ದೇವಸ್ಥಾನದ ಎದುರು ಶಾಸಕ ಸತೀಶ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ನೇತೃತ್ವದ ತಂಡ ಕೋವಿಡ್ ಜಾಗೃತಿ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಭಾನುವಾರ ಹಮ್ಮಿಕೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.