‘ನಮ್ಮ ತಪ್ಪು ನಮಗೆ ಅರಿವಾಗಿದೆ’ ಓಡಿಐ ಸರಣಿ ಸೋಲಿನ ಬಳಿಕ ರಾಹುಲ್‌ ಬೇಸರ!

ಹೈಲೈಟ್ಸ್‌:

  • ನಾವು ಎಲ್ಲಿ ತಪ್ಪು ಮಾಡಿದ್ದೇವೆಂದು ಸ್ಪಷ್ಟತೆ ಇದೆ ಎಂದ ಕೆ.ಎಲ್‌ ರಾಹುಲ್‌.
  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಓಡಿಐ ಸರಣಿ.
  • ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಓಡಿಐನಲ್ಲಿಯೂ ಸೋತ ಟೀಮ್‌ ಇಂಡಿಯಾ.

ಕೇಪ್‌ ಟೌನ್‌(ದಕ್ಷಿಣ ಆಫ್ರಿಕಾ): ಅಲ್‌ರೌಂಡರ್‌ ದೀಪಕ್‌ ಚಹರ್ ನಿರ್ಣಾಯಕ ಅರ್ಧಶತಕ ಸಿಡಿಸುವ ಮೂಲಕ ನಮಗೆ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ ಅಂತಿಮವಾಗಿ ಸೋಲಿನ ತಂಡವಾಗಿ ಉಳಿದಿರುವುದಕ್ಕೆ ನಮಗೆ ನಿರಾಶೆಯಾಗಿದೆ ಎಂದು ಟೀಮ್‌ ಇಂಡಿಯಾ ನಾಯಕ ಕೆ.ಎಲ್‌ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಭಾನುವಾರ ಇಲ್ಲಿನ ನ್ಯೂಲೆಂಡ್ಸ್‌ ಸ್ಟೇಡಿಯಂನಲ್ಲಿ ಶಿಖರ್‌ ಧವನ್‌(61), ವಿರಾಟ್‌ ಕೊಹ್ಲಿ(65) ಹಾಗೂ ದೀಪಕ್‌ ಚಹರ್‌(54) ಅವರ ಅರ್ಧಶತಕಗಳ ಹೊರತಾಗಿಯೂ ಭಾರತ ತಂಡ ಮೂರನೇ ಓಡಿಐನಲ್ಲಿ ಕೇವಲ 4 ರನ್‌ನಿಂದ ಸೋಲು ಅನುಭವಿಸಿತು. ಆ ಮೂಲಕ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಟೀಮ್‌ ಇಂಡಿಯಾ 0-3 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿತು.

ಸೋಲಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಕೆ.ಎಲ್ ರಾಹುಲ್, “ದೀಪಕ್ ಚಹರ್‌ ಪಂದ್ಯ ಗೆಲ್ಲುವ ಅವಕಾಶವನ್ನು ನಮಗೆ ತಂದುಕೊಟ್ಟಿದ್ದರು. ತೀವ್ರ ಕುತೂಹಲದಿಂದ ಕೂಡಿದ್ದ ಪಂದ್ಯದಲ್ಲಿ ಅಂತಿಮವಾಗಿ ಸೋಲಿನ ತಂಡವಾಗಿ ಉಳಿದಿರುವುದಕ್ಕೆ ತುಂಬಾ ಬೇಸರವಾಗುತ್ತಿದೆ. ಪಂದ್ಯದ ಗೆಲುವಿಗಾಗಿ ನಾವೆಲ್ಲರೂ ಸಾಕಷ್ಟು ಪ್ರಯತ್ನ ನಡೆಸಿದ್ದೆವು, ಆದರೆ ಇದು ಸಕಾರವಾಗಲಿಲ್ಲ. ಇದರಿಂದ ನಾವು ಕಲಿಯಬೇಕಾದ ಅಗತ್ಯವಿದೆ. ನಾವು ಎಲ್ಲಿ ತಪ್ಪು ಮಾಡಿದ್ದೇವೆಂದು ನಮಗೆ ಸ್ಪಷ್ಟವಾಗಿದೆ. ಇದನ್ನು ಹೇಳಲು ನಾವು ನಾಚಿಕೆ ಪಡಬೇಕಾದ ಅಗತ್ಯವಿಲ್ಲ,” ಎಂದು ಹೇಳಿದರು.

“ಹಲವು ಸಂದರ್ಭಗಳಲ್ಲಿ ನಮ್ಮ ಶಾಟ್ ಸೆಲೆಕ್ಷನ್‌ ಕಳಪೆಯಾಗಿತ್ತು. ಮತ್ತೊಂದೆಡೆ ಬೌಲಿಂಗ್‌ನಲ್ಲಿಯೂ ನಾವು ಸರಿಯಾದ ಜಾಗದಲ್ಲಿ ಸ್ಥಿರವಾಗಿ ಪಿಚ್‌ ಮಾಡಿರಲಿಲ್ಲ. ನಾವು ಚೆನ್ನಾಗಿ ಆಡಿದ್ದೇವೆ ಆದರೆ ದೀರ್ಘ ಅವಧಿ ಎದುರಾಳಿ ತಂಡದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದೇವೆ. ಉತ್ಸಾಹ ಹಾಗೂ ಪ್ರಯತ್ನದಲ್ಲಿ ನಮ್ಮ ಹುಡುಗರು ಯಾವುದೇ ತಪ್ಪು ಮಾಡಿದ್ದಾರೆಂದು ನಾನು ಭಾವಿಸುವುದಿಲ್ಲ,” ಎಂದರು.

“ಕೌಶಲ ಹಾಗೂ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳುವ ವಿಷಯದಲ್ಲಿ ನಾವು ಎಡವಿದ್ದೇವೆ. ತಂಡದಲ್ಲಿ ಹೊಸ ಆಟಗಾರರಿದ್ದಾಗ ಇಂಥಾ ಘಟನೆಗಳು ನಡೆಸುವುದು ಸಾಮಾನ್ಯ. ಓಡಿಐ ಸರಣಿಯಲ್ಲಿ ನಾವು ಒಂದೇ ರೀತಿಯ ತಪ್ಪನ್ನು ಪದೇ-ಪದೆ ಮಾಡುತ್ತಿದ್ದೇವೆ. ವಿಶ್ವಕಪ್ ಟೂರ್ನಿಯ ಪಯಣದ ಆರಂಭದಲ್ಲಿ ನಾವು ಇದ್ದೇವೆ. ನಾವು ಡ್ರೆಸ್ಸಿಂಗ್‌ ಕೊಠಡಿಗೆ ಮರಳಿ ಇನ್ನಷ್ಟು ಹೆಚ್ಚಿನ ಸಂಭಾಷಣೆ ನಡೆಸಬೇಕಾದ ಅಗತ್ಯವಿದೆ,” ಎಂದು ಕೆ.ಎಲ್‌ ರಾಹುಲ್ ತಿಳಿಸಿದ್ದಾರೆ.

ಕೆ.ಎಲ್‌ ರಾಹುಲ್‌ಗೆ ಹೆಡ್‌ ಕೋಚ್‌ ದ್ರಾವಿಡ್‌ ಬೆಂಬಲ:ದಕ್ಷಿಣ ಆಫ್ರಿಕಾ ವಿರುದ್ದ ಮೂರು ಪಂದ್ಯಗಳ ಓಡಿಐ ಸರಣಿ ಸೋಲಿನ ಹೊರತಾಗಿಯೂ ನಾಯಕನಾಗಿ ಕೆ.ಎಲ್‌ ರಾಹುಲ್ ಉತ್ತಮ ಕಾರ್ಯ ನಿರ್ವಹಿಸಿದ್ದಾರೆಂದು ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಂದ್ಯದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್‌ ದ್ರಾವಿಡ್, “ನನಗೆ ಅನಿಸಿದ ಹಾಗೆ ಕೆ.ಎಲ್‌ ರಾಹುಲ್‌ ನಾಯಕನಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಪಾಲಿಗೆ ನಾಯಕತ್ವ ಸುಲಭವಾಗಿರಲಿಲ್ಲ. ಇದೇ ಮೊದಲ ಬಾರಿ ಅವರು ನಾಯಕತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ. ಆದ್ದರಿಂದ ತಮ್ಮ ಆಟಗಾರರಿಂದ ಕೌಶಲವನ್ನು ಬಳಿಸಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಅವರು ಸ್ವಲ್ಪ ಎಡವಿದ್ದಾರೆ,” ಎಂದು ಹೇಳಿದರು.

“ಪ್ರವಾಸಿ ತಂಡದ ನಾಯಕನಾಗಿ ಕೆ.ಎಲ್‌ ರಾಹುಲ್ ಯೋಗ್ಯ ಕೆಲಸವನ್ನು ಮಾಡಿದ್ದಾರೆ. ಆದರೆ ಖಚಿತವಾಗಿಯೂ ಅವರು ಮುಂದೊಂದು ದಿನ ಉತ್ತಮ ನಾಯಕರಾಗಲಿದ್ದಾರೆ. ಸ್ಪಿನ್ನರ್‌ಗಳ ಕಡಗೆ ಬೆಟ್ಟು ತೋರಿಸುವ ಬದಲು ನಾವು ವಿಕೆಟ್‌ ಪಡೆಯಬೇಕಾದ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ಸ್ಪಿನ್ನರ್‌ಗಳು ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ ಪಡೆಯುವ ಮೂಲಕ ಪಂದ್ಯದ ದಿಕ್ಕು ಬದಲಿಸಬೇಕು. ಇದು ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ಈ ಪ್ರವಾಸದಿಂದ ನಾವು ಸಾಕಷ್ಟು ಕಲಿತಿದ್ದೇವೆ,” ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *