ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ, ಮೂರೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ವೈದ್ಯೆ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (bs yediyurappa) ಅವರ ಮೊಮ್ಮಗಳು (granddaughter) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಎಸ್‌ವೈ ಮೊಮ್ಮಗಳು ಇಂದು ಬೆಳಗ್ಗೆ ಸುಮಾರು 10 ಗಂಟೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ (suicide) ಮಾಡಿಕೊಂಡಿದ್ದಾರೆ. ಪದ್ಮಾವತಿ ಪುತ್ರಿ ಸೌಂದರ್ಯ(30) ಆತ್ಮಹತ್ಯೆ ಮಾಡಿಕೊಂಡ ಯುವತಿ. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.
ಬಿಎಸ್ ಯಡಿಯೂರಪ್ಪ ಅವರ ದ್ವಿತೀಯ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ಅವರು ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು ಬಳಿಯ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದರು. 2018ರಲ್ಲಿ ವೈದ್ಯ ಡಾ. ನೀರಜ್ ಅವರನ್ನು ಸೌಂದರ್ಯ ಮದುವೆಯಾಗಿದ್ದರು. ಮೃತ ಸೌಂದರ್ಯಗೆ ಒಂದು ಮಗು ಇದೆ. ಸೌಂದರ್ಯ ಪತಿ ನೀರಜ್ ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗಿದ್ದರು. ಇತ್ತ ಸೌಂದರ್ಯ 10 ಗಂಟೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆ ಕೆಲಸದವರು ಬಂದಾಗ ಬಾಗಿಲು ತೆಗೆಯದಿದ್ದಾಗ ಸೌಂದರ್ಯ ಪತಿ ಡಾ. ನೀರಜ್‌ಗೆ ಕೆಲಸದವರು ಕರೆ ಮಾಡಿದ್ದರು. ಮನೆ ಕೆಲಸದವರು ಫೋನ್ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಸಿಎಂ ಬೊಮ್ಮಾಯಿ ತಮ್ಮ ಹುಟ್ಟುಹಬ್ಬ ಸಂಭ್ರಮ ಬದಿಗಿಟ್ಟು, ಯಡಿಯೂರಪ್ಪ ನಿವಾಸಕ್ಕೆ ದೌಡು: ಇನ್ನು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ ಸುದ್ದಿ ಕೇಳಿಬರುತ್ತಿದ್ದಂತೆ ಬೆಂಗಳೂರಿನ ಕೆಕೆ ರಸ್ತೆಯಲ್ಲಿರುವ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ದೌಡಾಯಿಸಿದ್ದಾರೆ.