ಕರ್ತವ್ಯನಿರತ ಪತಿ ಸಾವು.. ಮಹಿಳೆಗೆ ಎರಡೇ ದಿನದಲ್ಲಿ ನೌಕರಿ ನೀಡಿದ ಕಲಬುರಗಿ ಜಿಲ್ಲಾಧಿಕಾರಿ!

ಕಲಬುರಗಿಗೆ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಜ. 25ರಂದು ತಮ್ಮ ಕಚೇರಿ ಮುಂದೆ ಇಬ್ಬರು ಮಕ್ಕಳೊಂದಿಗೆ ಮಹಿಳೆ ಕಾದು ಕುಳಿತಿರುವುದನ್ನು ಕಂಡಿದ್ದಾರೆ. ಬಳಿಕ ಸ್ವತಃ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರೇ ಮಹಿಳೆಯ ಬಳಿ ತೆರಳಿ ಸಮಸ್ಯೆ ವಿಚಾರಿಸಿದ್ದರು.

 

ಕಲಬುರಗಿ: ತನ್ನ ಪತಿ ಮೃತರಾದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಕೇವಲ ಎರಡೇ ದಿನದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಉದ್ಯೋಗ ನೀಡಿ, ಕುಟುಂಬದ ನೆರವಿಗೆ ನಿಂತಿದ್ದಾರೆ.

ಕಲಬುರಗಿ ತಾಲೂಕಿನ ಕುಸನೂರಿನ ಶಿವಲಿಂಗಮ್ಮ ದಿ. ಮಾಳಿಂಗರಾಯ ನೌಕರಿ ಪಡೆದವರು. ನೂತನ ಜಿಲ್ಲಾಧಿಕಾರಿಯಾಗಿ ಜನವರಿ 25ರಂದು ಯಶವಂತ ಗುರುಕರ್ ಅವರು ಅಧಿಕಾರ ಸ್ವಿಕಾರ ಮಾಡಿದ್ದಾರೆ. ಅಂದು ಕಚೇರಿ ಮುಂದೆ ಇಬ್ಬರು ಮಕ್ಕಳೊಂದಿಗೆ ಕಾದು ಕುಳಿತಿದ್ದ ಮಹಿಳೆಯನ್ನು ಗಮನಿಸಿದ ಜಿಲ್ಲಾಧಿಕಾರಿ ಗುರುಕರ್, ಸ್ವತಃ ತಾವೇ ಮಹಿಳೆಯ ಬಳಿ ತೆರಳಿ ಸಮಸ್ಯೆ ಆಲಿಸಿದ್ದರು.

kalaburagi-district-collector-gives-appointment-order-to-window

ಮಹಿಳೆಗೆ ಉದ್ಯೋಗ ನೇಮಕಾತಿ ಆದೇಶ ಪತ್ರ ನೀಡುತ್ತಿರುವ ಡಿಸಿ

ತನ್ನ ಗಂಡ ಆಳಂದ ತಾಲೂಕಿನ ಖಜೂರಿ ನಾಡಾ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಕರ್ತವ್ಯದಲ್ಲಿದ್ದಾಗ 2021ರ ಮಾರ್ಚ್ 16ರಂದು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅನುಕಂಪ ಆಧಾರದ ಮೇಲೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದು ಅವಲತ್ತುಕೊಂಡಿದ್ದರು.

ಇದನ್ನರಿತ ಕೂಡಲೇ ಜಿಲ್ಲಾಧಿಕಾರಿ ಈ ಮಹಿಳೆಗೆ 2 ದಿನದಲ್ಲಿ ನೌಕರಿ ನೀಡಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಸ್ಥಳದಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.

ಶುಕ್ರವಾರ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಮಹಿಳೆ ಕೋರಿದ ಸ್ಥಳವಾದ ಕಲಬುರಗಿ ತಹಸೀಲ್ದಾರ್​ ಕಚೇರಿಯ ಖಾಲಿಯಿದ್ದ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ನೇಮಕಾತಿಯ ಆದೇಶ ಪತ್ರ ನೀಡಿ ಮಾನವೀಯತೆ ಮೆರೆದಿದ್ದಾರೆ. ಜಿಲ್ಲಾಧಿಕಾರಿಯವರ ಕ್ಷಿಪ್ರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *