ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ: 50:50 ರೂಲ್ಸ್ ರದ್ದು?

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಕೊರೋನಾ ಮೂರನೇ ಅಲೆ ಸೋಂಕು ಕೊಂಚ ಕಡಿಮೆಯಾಗಿ ಉಳಿದ ಜಿಲ್ಲೆಗಳತ್ತ ಪಸರಿಸುತ್ತಿದೆ. ಕಳೆದೆರಡು ಕೊರೋನಾ ಅಲೆಗಳಿಗೆ ಹೋಲಿಸಿದರೆ ಮೂರನೇ ಅಲೆಯ ತೀವ್ರತೆ ಅಷ್ಟೊಂದು ಇಲ್ಲ, ಸೋಂಕಿತರು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ.

ಹೀಗಾಗಿ ವೀಕೆಂಡ್ ಕರ್ಫ್ಯೂ ರದ್ದುಪಡಿಸಿದ್ದ ಸರ್ಕಾರ ಇದೀಗ ಫೆಬ್ರವರಿ ಒಂದರಿಂದ ಮತ್ತಷ್ಟು ನಿರ್ಬಂಧ ಸಡಿಲಿಕೆ ಮಾಡಲಿದೆಯೇ ಎಂಬ ಮಾತುಗಳು ಕೇಳಿಬರುತ್ತಿದೆ. ಸದ್ಯ ಕಠಿಣ ನಿಯಮಗಳನ್ನ ಸರ್ಕಾರ ಜಾರಿಗೆ ತಂದಿಲ್ಲ. ಕೇವಲ ನೈಟ್ ಕರ್ಫ್ಯೂ (Night Curfew) ಮತ್ತು 50:50 ರೂಲ್ಸ್ (50:50 Rules) ಜಾರಿಯಲ್ಲಿದೆ.

ಈ ನಿಯಮವನ್ನು ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸದಸ್ಯರು ತಜ್ಞರೊಂದಿಗೆ ಚರ್ಚಿಸಿ ರದ್ದುಪಡಿಸುವ ತೀರ್ಮಾನಕ್ಕೆ ಬರಲಿದೆಯೇ ಎಂಬ ಮಾತುಗಳು ಕೇಳಿಬರುತ್ತಿದೆ. ರಾಜ್ಯದಲ್ಲಿ COVID ಸ್ಥಿತಿಗತಿ ಕುರಿತಂತೆ ಚರ್ಚಿಸಲು ಇಂದು ಮಧ್ಯಾಹ್ನ 1 ಗಂಟೆಗೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಭೆ ನಡೆಸಲಿದ್ದಾರೆ. ಕೋವಿಡ್ ನಿಯಂತ್ರಣಕ್ಕಾಗಿ ಹೊರಡಿಸಿರುವ ಮಾರ್ಗಸೂಚಿಗಳು ಇದೇ 31ರವರೆಗೆ ಜಾರಿಯಲ್ಲಿದ್ದು, ಅವುಗಳ ಮುಂದುವರಿಕೆ ಇಲ್ಲವೇ ಸಡಿಲಿಕೆ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ.

ಸಭೆಯಲ್ಲಿ ಆರೋಗ್ಯ ಸಚಿವರು, ಕಂದಾಯ ಸಚಿವರು, ಗೃಹ ಸಚಿವರು, ಉನ್ನತ ಶಿಕ್ಷಣ ಸಚಿವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಇಲಾಖಾ ಕಾರ್ಯದರ್ಶಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ, ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಕೂಡ ಭಾಗಿ: ಇಂದು ಮುಖ್ಯಮಂತ್ರಿಗಳು ಕರೆದಿರುವ ಸಭೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗುತ್ತಾರೆ. ಇಂದಿನ ಸಭೆಯಲ್ಲಿ ಸರ್ಕಾರ ಹೊಟೇಲ್, ಬಾರ್, ಪಬ್, ರೆಸ್ಟೋರೆಂಟ್, ಚಿತ್ರಮಂದಿರಗಳು,ಜಿಮ್, ಸ್ವಿಮ್ಮಿಂಗ್ ಪೂಲ್ ಗಳು ಸೇರಿದಂತೆ ಕೆಲವು ಸೇವೆಗಳಿಗೆ ವಿಧಿಸಿದ್ದ 50-50 ನಿಯಮ ಕೈ ಬಿಡುವ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.

ಮುಂದಿನ ವಾರ ಶಾಲೆ ಆರಂಭ?: ಕೊರೋನಾ ಸೋಂಕಿನ ಹೆಚ್ಚಳ ಹಿನ್ನೆಲೆಯಲ್ಲಿ ಜನವರಿ ಆರಂಭದಿಂದ ಬೆಂಗಳೂರಿನಲ್ಲಿ 9ನೇ ತರಗತಿಯವರೆಗೆ ಶಾಲೆಗಳಿಗೆ ರಜೆ ನೀಡಿ ಆನ್ ಲೈನ್ ನಲ್ಲಿ ತರಗತಿ ಮುಂದುವರಿಸುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಮುಂದಿನ ವಾರದಿಂದ 7,8ನೇ ತರಗತಿಗಳ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಬಹುದು ಎಂದು ಹೇಳಲಾಗುತ್ತಿದೆ.

ಉಳಿದಂತೆ ಪ್ರತಿಭಟನೆ, ಮೆರವಣಿಗೆಗೆ ನಿರ್ಬಂಧ ಮುಂದುವರಿಕೆ ಮಾಡುವ ಸಾಧ್ಯತೆಯಿದೆ. ಕೊರೋನಾ ಇನ್ನೂ ತಗ್ಗದ ಹಿನ್ನೆಲೆಯಲ್ಲಿ ಸಭೆ, ಸಮಾರಂಭಗಳು, ರ್ಯಾಲಿಗಳಿಗೆ ಸರ್ಕಾರ ನಿರ್ಬಂಧಗಳನ್ನು ಮುಂದುವರಿಸುವ ಸಾಧ್ಯತೆಯಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *