2023ರ ಚುನಾವಣೆಯಲ್ಲಿ ಪ್ರಾದೇಶಿಕ ಸಮಸ್ಯೆಗಳೇ ಜೆಡಿಎಸ್ ಅಜೆಂಡಾ: ಸುಳಿವು ನೀಡಿದ ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ಮುನ್ನ, ಕೇಂದ್ರ ಬಜೆಟ್ನಲ್ಲಿ ಪ್ರಸ್ತಾಪಿಸಲಾದ ನದಿ ಜೋಡಣೆ ಯೋಜನೆ ಸೇರಿದಂತೆ ರಾಜ್ಯದ ಜನರಿಗೆ ಮನವಿ ಮಾಡುವ ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಬಿಡದಿಯ ತಮ್ಮ ತೋಟದಲ್ಲಿ ಭೇಟಿಯಾದ ಕನ್ನಡ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು. “ರಾಜ್ಯವು ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ನಾವು ಅನೇಕ ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇವುಗಳನ್ನು ಪರಿಣಾಮಕಾರಿಯಾಗಿ ಎದುರಿಸಬೇಕಾದರೆ ಎಲ್ಲ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಚರ್ಚೆ ಮಾಡಲು ಸಭೆ ಕರೆದಿದ್ದೇನೆ” ಎಂದರು.
ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಜಾರಿಗೆ ತರಲು ಕೇಂದ್ರ ಬಜೆಟ್ನಲ್ಲಿ ಉಲ್ಲೇಖಿಸಿರುವ ನದಿ ಜೋಡಣೆ ಯೋಜನೆಗಳ ಕುರಿತು ನೀರಾವರಿ ತಜ್ಞರೊಂದಿಗೆ ಅಧ್ಯಯನ ನಡೆಸಿ ಕರ್ನಾಟಕದ ಮೇಲೆ ಯೋಜನೆಗಳ ಪ್ರಭಾವದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಗೆ ಮುನ್ನ ನದಿ ಜೋಡಣೆ ವಿಚಾರವನ್ನು ಪಕ್ಷದ ಚುನಾವಣಾ ಪ್ರಣಾಳಿಕೆಯಾಗಿ ರೂಪಿಸಬೇಕೆ ಎಂಬ ಚಿಂತನೆ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಪದಾಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಕನ್ನಡ ಸಂಘಟನೆಗಳ ಜತೆಗೆ ರೈತಪರ, ನೀರಾವರಿ ವಿಷಯಗಳನ್ನಿಟ್ಟುಕೊಂಡು ಹೋರಾಟ ನಡೆಸುತ್ತಿರುವ ಅನೇಕ ಸಂಘಟನೆಗಳದ್ದು, ಅವೆಲ್ಲವನ್ನೂ ಒಗ್ಗೂಡಿಸುವ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದರು.ನಮ್ಮ ಸಮಸ್ಯೆಗಳ ಬಗ್ಗೆ ನಾವೇ ಹೋರಾಟ ನಡೆಸಿ ಸಾಧಿಸಿಕೊಳ್ಳಬೇಕಿದೆ. ಆ ಗುರಿ ಸಾಧನೆಗಾಗಿ ಪ್ರಾದೇಶಿಕ ರಾಜಕೀಯ ಶಕ್ತಿಯ ಅಗತ್ಯವಿದೆ. ಆ ದಿಕ್ಕಿನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಇಂಥ ಸಂಘಟನೆಗಳನ್ನು ಒಗ್ಗೂಡಿಸಿ ಮುಂದಿನ ಕಾರ್ಯತಂತ್ರ ರೂಪಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ವಿವರಿಸಿದರು.
ಸುಮಾರು ನೂರೈವತ್ತಕ್ಕೂ ಹೆಚ್ಚು ಕನ್ನಡ ಮುಖಂಡರ ಜತೆ ಚರ್ಚೆ ನಡೆಸಿದ್ದೇನೆ. ಮುಂದಿನ ವಾರ ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಇವರೆಲ್ಲರ ಜತೆ ಮುಕ್ತವಾಗಿ ಮಾತುಕತೆ ನಡೆಸಲಿದ್ದೇನೆ. ಕನ್ನಡಿಗರ ನಿರುದ್ಯೋಗ ಸಮಸ್ಯೆ, ಖಾಸಗೀ ಹಾಗೂ ಕೇಂದ್ರ ಸರಕಾರದ ಮಟ್ಟದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಇತ್ಯಾದಿ ವಿಷಯಗಳ ಬಗ್ಗೆ ಮುಖಂಡರಿಂದ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ರಾಜ್ಯವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷದ ಸರಕಾರ ತರುವ ದಿಸೆಯಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.