ಶಾಲೆ- ಕಾಲೇಜುಗಳಲ್ಲಿ ಹೆಚ್ಚಾಗ್ತಿದೆ ಹಿಜಾಬ್, ಕೇಸರಿ ಶಾಲು ಸಮರ; ನೀಲಿ ಶಾಲ್ ಧರಿಸಿ ಬಂದ ಮತ್ತೊಂದು ಬಣ, ಪ್ರಾಂಶುಪಾಲರು ಹೈರಾಣ

ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಮವಸ್ತ್ರ ಸಂಹಿತೆ(Uniform) ಪಾಲಿಸುವಂತೆ ಕರ್ನಾಟಕ ಸರ್ಕಾರ(Karnataka Government) ಆದೇಶ ಹೊರಡಿಸಿದೆ. ಆದರೂ ಇಂದು ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ (Hijab) ಧರಿಸಿ ಬಂದಿದ್ದಾರೆ. ಹಾಗೂ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು(Kesari Shawl) ಧರಿಸಿ ಬಂದಿದ್ದಾರೆ. ಇದರಿಂದ ಕಾಲೇಜು ಆಡಳಿತ ಮಂಡಳಿಗೆ(College Administration) ತಲೆ ನೋವಾಗಿದ್ದು ಮುಂದೆ ಏನು ಎಂಬ ಭಯದಲ್ಲಿ ಕುಳಿತಿದ್ದಾರೆ. ಸದ್ಯ ಕೆಲ ಕಾಲೇಜುಗಳಲ್ಲಿ ರಜೆ ಘೋಷಿಸಲಾಗಿದೆ. ಕೆಲವು ಕಡೆ ವಿದ್ಯಾರ್ಥಿಗಳಿಗೆ ಕ್ಲಾಸ್ ರೂಂ ಪ್ರವೇಶಕ್ಕೆ ತಡೆ ಹಿಡಿಯಲಾಗಿದೆ. ಮತ್ತೇ ಕೆಲವು ಕಡೆ ಕಾಲೇಜುಗಳ ಮುಂದೆ ವಿದ್ಯಾರ್ಥಿಗಳು ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದಾರೆ.

ಹಿಜಾಬ್ ಧರಿಸಿಕೊಂಡು ಬಂದ್ರೆ ವೆಲ್ ಕಂ, ಯೂನಿಫಾರಂ ಹಾಕದಿದ್ರೆ ಗೇಟ್ ಪಾಸ್ ಚಿಕ್ಕಮಗಳೂರು ನಗರದ IDSG ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದಿದ್ದಾರೆ. ವಿದ್ಯಾರ್ಥಿನಿಯರು ರಾಜ್ಯ ಸರ್ಕಾರದ ಆದೇಶ ಧಿಕ್ಕರಿಸಿದ್ದಾರೆ. ಆದ್ರೆ ಇಲ್ಲಿ ಹಿಜಾಬ್ ಧರಿಸಿ ಬಂದರೂ ಕಾಲೇಜು ಆಡಳಿತ ಮಂಡಳಿ ಸುಮ್ಮನಿದೆ. ಹಾಗೂ ಸಮವಸ್ತ್ರ ಧರಿಸದೆ ಬಂದ ವಿದ್ಯಾರ್ಥಿಗಳಿಗೆ ಗೇಟ್‌ಪಾಸ್ ನೀಡಲಾಗುತ್ತಿದೆ. ಹೀಗಾಗಿ ಕಾಲೇಜಿನ ದ್ವಂದ್ವ ನೀತಿಗೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಜಾಬ್, ಕೇಸರಿ ಶಾಲು ಧರಿಸಿ ಕಾಲೇಜಿಗೆ ವಿದ್ಯಾರ್ಥಿಗಳ ಎಂಟ್ರಿ ಚಿಕ್ಕಬಳ್ಳಾಪುರ ಜಿಲ್ಲೆಗೂ ಹಿಜಾಬ್ ವಿವಾದ ಎಂಟ್ರಿ ಕೊಟ್ಟಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್, ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಎಂಟ್ರಿ ಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಜೊತೆ ಪ್ರಾಂಶುಪಾಲರು ಸಮಾಲೋಚನೆ ನಡೆಸುತ್ತಿದ್ದಾರೆ. ಅಲ್ಲದೆ ಹಾಸನದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲೂ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಧರಿಸಿ ಬಂದಿದ್ದಾರೆ. ಆದ್ರೆ ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹಾಗೂ ಸಮವಸ್ತ್ರ ಧರಿಸಿ ಬರುವಂತೆಯೂ ಹೇಳಿಲ್ಲ. ಇನ್ನು ಮಂಡ್ಯದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದಾರೆ. ವಿದ್ಯಾರ್ಥಿಗಳ ಜೊತೆ ಕಾಲೇಜು ಆಡಳಿತ ಮಂಡಳಿ ಚರ್ಚೆ ನಡೆಸಿ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಮಂಡ್ಯದ ಸರ್ಕಾರಿ ಬಾಲಕರ ಕಾಲೇಜಿಗೆ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸಿದ್ದು ವಿದ್ಯಾರ್ಥಿಗಳ ಮನವೊಲಿಸಲು ಆಡಳಿತ ಮಂಡಳಿ ಪ್ರಯತ್ನಿಸುತ್ತಿದೆ. ಶಾಲು ತೆಗೆದು ಕ್ಲಾಸ್‌ಗೆ ಹೋಗಲು ಆಡಳಿತ ಮಂಡಳಿ ಹೇಳಿದೆ. ಆದ್ರೆ ಹಿಜಾಬ್ ತೆಗೆದು ಬರುವವರೆಗೆ ನಾವು ಶಾಲು ತೆಗೆಯಲ್ಲ ಎಂದು ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಇವತ್ತು ತೆಗೆದು ನಡೆಯಿರಿ ನಾಳೆ ನಿಯಮ ಮಾಡುತ್ತೇವೆ ಎಂದು ಆಡಳಿತ ಮಂಡಳಿ ತಿಳಿಸಿದರೂ ನಾವು ತೆಗೆಯಲ್ಲ ಶಾಲು ಧರಿಸಿರುತ್ತೇವೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ನಾಳೆ ಅವರು ಹಾಕಿ ಬರಲಿಲ್ಲ ಅಂದ್ರೆ ನಾವು ಹಾಕಿ‌ ಬರಲ್ಲ ಎಂದಿದ್ದಾರೆ.

ವಿದ್ಯಾರ್ಥಿಗಳನ್ನು ವಾಪಸ್ ಕಳಿಸಿದ ಆಡಳಿತ ಮಂಡಳಿ ಕುಂದಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಹಿಜಾಬ್, ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ವಾಪಸ್ ಕಳಿಸಿದೆ. ಜೊತೆಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲೂ ಸಮವಸ್ತ್ರ ಗಲಾಟೆ ಶುರುವಾಗಿದೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶಕ್ಕೆ ಅಡ್ಡಿ ಪಡಿಸಲಾಗಿದೆ. ಹಾಗೂ ಮತ್ತೊಂದೆಡೆ ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದಾರೆ. ಹೀಗಾಗಿ ಧ್ವನಿವರ್ಧಕದ ಮೂಲಕ ಪ್ರಾಂಶುಪಾಲರು ಮಕ್ಕಳಿಗೆ ಸರ್ಕಾರದ ಆದೇಶ ತಿಳಿಸಿದ್ದಾರೆ. ಸದ್ಯ ಕೇಸರಿ ಶಾಲು ತೆಗೆದು ವಿದ್ಯಾರ್ಥಿಗಳು ತರಗತಿಗೆ ಹೋಗಿದ್ದಾರೆ.

ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳನ್ನು ಹೊರಗೆ ಕಳಿಸಿ ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಕಾಲೇಜಿನಲ್ಲಿ ಕೇಸರಿ ಶಾಲು ಹಾಕಿಕೊಂಡು ಬಂದ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳನ್ನು ಹೊರಗೆ ಕಳಿಸಿ ಎಂದು ಆಗ್ರಹಿಸಿದ್ದು ವಿದ್ಯಾರ್ಥಿಗಳನ್ನು ಮನವೊಲಿಸಲು ಪ್ರಾಂಶುಪಾಲರು ಯತ್ನಿಸುತ್ತಿರುವ ಘಟನೆ ನಡೆದಿದೆ.

ಹಿಜಾಬ್, ಕೇಸರಿ ಶಾಲು ಬಳಿಕ ನೀಲಿ ಶಾಲು ಎಂಟ್ರಿ ಚಿಕ್ಕಮಗಳೂರಿನ IDSG ಕಾಲೇಜಿನಲ್ಲಿ ಹಿಜಾಬ್ ತೆಗೆಸಬಾರದೆಂದು ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ ಧರಣಿ ನಡೆಸುತ್ತಿದ್ದಾರೆ. ಈ ವೇಳೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ.

ಹಿಜಾಬ್ ವಿವಾದದ ಹಿಂದೆ ದೊಡ್ಡ ಪಿತೂರಿ ಇದೆ ಇದೆಲ್ಲದರ ನಡುವೆ ಮೈಸೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿದ್ದು ಹಿಜಾಬ್ ವಿವಾದದ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಆರೋಪ ಮಾಡಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಪ್ರಚೋದನೆಗೆ ಒಳಗಾಗಬೇಡಿ. ಶಾಲೆಗೆ ಬರುವಾಗ ಸಮವಸ್ತ್ರವನ್ನು ಧರಿಸಿ ಬನ್ನಿ. ನಾಯಕರ ದಾಳಕ್ಕೆ ವಿದ್ಯಾರ್ಥಿಗಳು ಬಲಿಯಾಗಬಾರದು. ಹಿಜಾಬ್ ಹಾಕಿಕೊಂಡು ಬಂದವರಿಗೂ ತರಗತಿ ಇಲ್ಲ. ಕೇಸರಿ ಶಾಲು ಹಾಕಿಕೊಂಡು ಬಂದವರಿಗೂ ತರಗತಿ ಇಲ್ಲ. ಹಸಿರು ಶಾಲು ಹಾಕಿಕೊಂಡು ಬಂದರೂ ತರಗತಿ ಇರಲ್ಲ. ಎಲ್ಲರೂ ಕಡ್ಡಾಯವಾಗಿ ಸಮವಸ್ತ್ರ ಧರಿಸಿಕೊಂಡು ಬರಬೇಕು. ಕಾಲೇಜಿನ ಗೇಟ್‌ವರೆಗೆ ನಿಮಗೆ ಬೇಕಾದ ಬಟ್ಟೆ ಹಾಕಿಕೊಳ್ಳಿ. ಕಾಲೇಜಿನೊಳಗೆ ಬರುವಾಗ ನಿಯಮವನ್ನು ಪಾಲಿಸಬೇಕು. ನಾಳೆ ಕೋರ್ಟ್ ಆದೇಶ ಬರುತ್ತೆ. ಕೋರ್ಟ್ ಆದೇಶ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತೆ ಎಂದರು. ಇನ್ನು ಕೆಲ ಕಾಲೇಜುಗಳಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಇದಕ್ಕೆ ಸಮರ್ಥನೆ ಮಾಡಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ರಸ್ತೆ ಮೇಲೆ ಕೂರಿಸಬಾರದು. ಹೀಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದ್ದಾರೆ ಎಂದರು.

ತೀರ್ಪು ಬಂದ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವೆ ಇನ್ನು ಹಿಜಾಬ್ ವಿವಾದದ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ಸುತ್ತೋಲೆಯನ್ನು ಎಲ್ಲರೂ ಪಾಲಿಸಬೇಕು. ವಿದ್ಯಾರ್ಥಿಗಳು ಶಾಂತಿ ಕದಡುವ ಕೆಲಸ ಮಾಡಬಾರದು. ನಾಳೆ ನ್ಯಾಯಾಲಯದಿಂದ ತೀರ್ಪು ಬರುತ್ತದೆ. ತೀರ್ಪು ಬಂದ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವೆ. ಹಿಜಾಬ್ ವಿವಾದದ ಹಿಂದೆ ಕೆಲ ಶಕ್ತಿಗಳು ಕೆಲಸ ಮಾಡುತ್ತಿವೆ. ಸದ್ಯ ಕೋರ್ಟ್‌ನಲ್ಲಿ ಪ್ರಕರಣ ಇರುವ ಹಿನ್ನೆಲೆ ಮಾತಾಡಲ್ಲ ಎಂದರು.

ಹಿಜಾಬ್ ನಿರಾಕರಿಸಿರುವುದು ಅಸಂವಿಧಾನಿಕ ಸ್ಕಾರ್ಫ್ ನೆಪದಲ್ಲಿ ವಿದ್ಯಾರ್ಥಿಗಳ ಮೇಲೆ ದಾಳಿಯಾಗುತ್ತಿದೆ. ಹಿಜಾಬ್ ನಿರಾಕರಿಸಿರುವುದು ಅಸಂವಿಧಾನಿಕ. ಹಿಜಾಬ್ ಎಂಬುದು ಮುಸ್ಲಿಂ ಮಹಿಳೆಯರ ಅಸ್ಮಿತೆ. ಅದನ್ನು ಹೀಗೆ ಕಿತ್ತುಕೊಳ್ಳುವುದು ಸಂವಿಧಾನಬಾಹಿರ. ಇದು ಮಕ್ಕಳ ನಡುವೆ ದ್ವೇಷ ಬಿತ್ತುವ ಕೆಲಸವಾಗಿದೆ. ಕೂಡಲೇ ಈ ವಿವಾದವನ್ನು ಬಗೆಹರಿಸಬೇಕಾಗಿದೆ. ಸಂಘಪರಿವಾರ ಇದಕ್ಕೆ ಹಿಂದಿನಿಂದ ಕುಮ್ಮಕ್ಕು ನೀಡುತ್ತಿದೆ. ಮುಸ್ಲಿಂ ವಿದ್ಯಾರ್ಥಿಗಳ ಜತೆ NWF ನಿಲ್ಲಲಿದೆ ಎಂದು ಬೆಂಗಳೂರಿನಲ್ಲಿ ನ್ಯಾಷನಲ್ ವುಮೆನ್ಸ್ ಫ್ರಂಟ್‌ (NWF) ಕಾರ್ಯದರ್ಶಿ ನೌಶೀರ್ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *