ದೆಹಲಿಯಲ್ಲಿ ರಾಜ್ಯದ ಸಂಸದರು, ಸಚಿವರೊಂದಿಗೆ ಸಿಎಂ ಬೊಮ್ಮಾಯಿ ಸಭೆ; ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕದ ಸಂಸದರು ಹಾಗೂ ಸಚಿವರೊಂದಿಗೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸಿದರು.
ಕರ್ನಾಟಕದ ಸಂಸದರು ಮತ್ತು ಸಚಿವರೊಂದಿಗೆ ಸಭೆ ನಡೆಸಿ ರಾಜ್ಯದ ಅಭಿವೃದ್ಧಿ ಮತ್ತು ಇತರ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ್ ಖೂಬಾ, ರಾಜೀವ್ ಚಂದ್ರಶೇಖರ್, ಎ.ನಾರಾಯಣಸ್ವಾಮಿ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಸಿಎಂ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ.
ಶಾಂತಿ ಕದಡುವ ಕೆಲಸ ಮಾಡಬೇಡಿ: ಬೊಮ್ಮಾಯಿ ಮನವಿ
ಇದಕ್ಕು ಮುನ್ನ ದೆಹಲಿಯಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬೊಮ್ಮಾಯಿ ಅವರು, ರಾಜ್ಯ ಸರ್ಕಾರ ಹೈಕೋರ್ಟ್ ನಿರ್ದೇಶನದಂತೆ ಕಾರ್ಯನಿರ್ವಹಿಸಲಿದೆ. ಅಲ್ಲಿಯವರಿಗೆ ಶಾಂತಿ ಕದಡುವ ಕೆಲಸ ಮಾಡಬೇಡಿ ಎಂದು ರಾಜ್ಯದ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ವಿದ್ಯಾರ್ಥಿಗಳು ಶಾಂತಿ ಕದಡುವ ಕೆಲಸ ಮಾಡಬಾರದು. ನಾಳೆ ನ್ಯಾಯಾಲಯದಿಂದ ತೀರ್ಪು ಬರುತ್ತದೆ. ತೀರ್ಪು ಬಂದ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವೆ. ಹಿಜಾಬ್ ವಿವಾದದ ಹಿಂದೆ ಕೆಲ ಶಕ್ತಿಗಳು ಕೆಲಸ ಮಾಡುತ್ತಿವೆ. ಕೇರಳ ಮಹಾರಾಷ್ಟ್ರದಲ್ಲೂ ಈ ಹಿಂದೆ ವಿವಾದ ನಡೆದಿತ್ತು. ಸದ್ಯ ಪ್ರಕರಣ ಕೋರ್ಟ್ನಲ್ಲಿರುವುದರಿಂದ ಮಾತನಾಡಲ್ಲ ಎಂದರು.
ರಾಜ್ಯಕ್ಕೆ ನ್ಯಾಯಸಮ್ಮತವಾದ ನೀರಿನ ಪಾಲನ್ನು ಪಡೆದುಕೊಳ್ಳುತ್ತೇವೆ. ನೀರಿನ ವಿಚಾರದಲ್ಲಿ ಯಾವುದೇ ರಾಜಿಯಾಗುವುದಿಲ್ಲ. ನದಿ ಜೋಡಣೆ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ಸ್ಪಷ್ಟ ನಿಲುವಿನಲ್ಲಿ ಮುಂದುವರೆಯುತ್ತೇವೆ ಎಂದು ತಿಳಿಸಿದರು.
ಇಂದು ಬೆಳಗ್ಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿರುವ ಸಿಎಂ ಬೊಮ್ಮಾಯಿ ಅವರು ಎರಡು ದಿನಗಳ ಕಾಲ ದೆಹಲಿಯಲ್ಲಿರಲಿದ್ದಾರೆ.
ಈ ವೇಳೆ ಸಿಎಂ ಬೊಮ್ಮಾಯಿ ಅವರು ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಕೇಂದ್ರ ಬಜೆಟ್ ಹಾಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.