ಚೊಚ್ಚಲ ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ ತಯಾರಿ: ವಿವಿಧ ಸಚಿವರು, ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ
ಬೆಂಗಳೂರು: ನವದೆಹಲಿಯಿಂದ ವಾಪಸ್ಸಾದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ತಮ್ಮ ಚೊಚ್ಚಲ ರಾಜ್ಯ ಬಜೆಟ್ ಮಂಡನೆಗೆ ಸಿದ್ಧತೆಯನ್ನು ಆರಂಭಿಸಿದರು. ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಬಜೆಟ್ ಮಂಡನೆಯಾಗುವ ಸಾಧ್ಯತೆಯಿದೆ.
ಬುಧವಾರ ಮುಖ್ಯಮಂತ್ರಿ, ಕಂದಾಯ, ಉನ್ನತ ಶಿಕ್ಷಣ, ಐಟಿ/ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಲೋಕೋಪಯೋಗಿ, ವಿದ್ಯುತ್, ಮಾಹಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ವಿವಿಧ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಿದರು ಮತ್ತು ಬಜೆಟ್ ನಲ್ಲಿ ಸೇರಿಸಬೇಕಾದ ಯೋಜನೆಗಳ ಕುರಿತು ಚರ್ಚಿಸಿದರು.
ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಲ್ಲಿ ಸೌಕರ್ಯಗಳು ಮತ್ತು ಡಿಜಿಟಲೀಕರಣದತ್ತ ಗಮನಹರಿಸುತ್ತಿದೆ. ಉನ್ನತ ಶಿಕ್ಷಣ ಇಲಾಖೆಯು ಪ್ರಸ್ತುತ 4700 ರೂ. ಕೋಟಿ ಬಜೆಟ್ ಹೊಂದಿದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಬಜೆಟ್ ನಲ್ಲಿ ರೂ. 9,000 ಕೋಟಿ ಕೇಳಿದ್ದೇವೆ. ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಪದವಿ, ಎಂಜಿನಿಯರಿಂಗ್ ಕಾಲೇಜುಗಳಿಗೆ ಉತ್ತಮ ಮೂಲಭೂತ ಸೌಕರ್ಯಗಳೊಂದಿಗೆ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಉತ್ತಮ ಸೌಲಭ್ಯ ಕಲ್ಪಿಸುವಂತೆ ಗಮನ ಹರಿಸಬೇಕಾಗಿದೆ ಎಂದು ಅವರು ಹೇಳಿದರು.
ಸರ್ಕಾರಿ ಕಾಲೇಜುಗಳಲ್ಲಿ ಉತ್ತಮ ಪ್ರಯೋಗಾಲಯಗಳನ್ನು ಅಭಿವೃದ್ಧಿಸಬೇಕಾಗಿದೆ. ಈ ಬಾರಿ ಡಿಜಿಶಕ್ತಿಯತ್ತಲೂ ಗಮನ ಹರಿಸಲಾಗಿದ್ದು, ಸರ್ಕಾರಿ ಕಾಲೇಜುಗಳ ತರಗತಿ ಕೊಠಡಿಗಳಲ್ಲಿ ಹೆಚ್ಚಿನ ಡಿಜಿಟಲೀಕರಣವನ್ನು ತರಲು ಉತ್ಸುಕರಾಗಿರುವುದರಿಂದ ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಗಳಲ್ಲಿ ಓದುವವರಿಗೆ ಸಮಾನವಾಗಿ ಶಿಕ್ಷಣವನ್ನು ಪಡೆಯುತ್ತಾರೆ ಎಂದು ಅವರು ತಿಳಿಸಿದರು.
ಐಟಿ/ಬಿಟಿ ಕ್ಷೇತ್ರದಲ್ಲಿ ಇಲಾಖೆಯು ಬೆಂಗಳೂರಿನ ಆಚೆಗೆ ಒತ್ತು ನೀಡುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. “ಇದು ಇನ್ಸ್ಟಿಟ್ಯೂಟ್ ಆಫ್ ಬಯೋಇನ್ಫರ್ಮ್ಯಾಟಿಕ್ಸ್ ಮತ್ತು ಅಪ್ಲೈಡ್ ಬಯೋಟೆಕ್ನಾಲಜಿ (IBAB) ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ವ್ಯಾಕ್ಸಿನೇಷನ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಒಳಗೊಂಡಿದೆ. ಅದೇ ರೀತಿ, ನಾವು ಕೈಗಾರಿಕೆಗಳು ಮತ್ತು ಕಾಲೇಜುಗಳೊಂದಿಗೆ ಸಹಭಾಗಿತ್ವವನ್ನು ಹೊಂದಲು ಬಯಸುತ್ತೇವೆ ಎಂದು ಸಚಿವರು ವಿವರಿಸಿದರು.