ಹಿಜಾಬ್ ವಿವಾದ: ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ವರ್ಗಾಯಿಸಿದ ಏಕಸದಸ್ಯ ಪೀಠ

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದೆ. ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಇದೀಗ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗೆ ವರ್ಗಾಯಿಸಿದೆ.

ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಏಕಸದಸ್ಯ ಪೀಠ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಸಿಜೆಗೆ ವರ್ಗಾಹಿಸಿದ್ದು ವಿಸ್ತೃತ ಪೀಠ ರಚಿಸುವ ಬಗ್ಗೆ ಹೈಕೋರ್ಟ್ ಸಿಜೆ ತೀರ್ಮಾನಿಸಲಿ. ಈ ಪ್ರಕರಣ ವಿಸ್ತೃತ ಪೀಠದಲ್ಲಿ ವಿಚಾರಣೆಗೆ ಯೋಗವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಹೈಕೋರ್ಟ್ ಸಿಜೆ ಈ ಬಗ್ಗೆ ವಿವೇಚನಾಧಿಕಾರ ಹೊಂದಿದ್ದಾರೆ. ತಕ್ಷಣವೇ ಸಂಪೂರ್ಣ ಕಡತ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿ ಎಂದು ಹೈಕೋರ್ಟ್ ನ ರಿಜಿಸ್ಟ್ರಾರ್ ಗೆ ನ್ಯಾಯಮೂರ್ತಿ ನಿರ್ದೇಶನ ನೀಡಿದ್ದಾರೆ. ಮುಂದಿನ ವಿಚಾರಣೆ ವೇಳೆ ಅರ್ಜಿದಾರರು ಮನವಿ ಸಲ್ಲಿಸಬಹುದು. ಇನ್ನು ಮಧ್ಯಂತರ ಆದೇಶದ ಬಗ್ಗೆ ಮನವಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.

ನಿನ್ನೆ ನ್ಯಾಯಮೂರ್ತಿಗಳು ಅರ್ಜಿಯ ವಿಚಾರಣೆ ನಡೆಸಿದ್ದರು. ಅರ್ಜಿದಾರರ ಪರವಾಗಿ ದೇವದತ್ ಕಾಮತ್ ವಾದ ಮಂಡಿಸಿದ್ದರೆ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿದ್ದರು. ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಿದ್ದರು. ಇಂದು ಹಿರಿಯ ವಕೀಲ ಸಂಜಯ್ ಹೆಗಡೆ ವಾದ ಮಂಡನೆ ಮಾಡಿದ್ದರು.

ಇಂದು ಮಧ್ಯಾಹ್ನ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ದೀಕ್ಷಿತ್ ಅವರು ಸಮಸ್ಯೆ ಪರಿಗಣಿಸಿ ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸುವ ಸುಳಿವು ನೀಡಿದರು. ಆದರೆ, ಅರ್ಜಿದಾರರ ಪರ ವಕೀಲರು ಮಧ್ಯಂತರ ಆದೇಶ ನೀಡುವಂತೆ ಪೀಠವನ್ನು ಒತ್ತಾಯಿಸಿದರು.

ಮಧ್ಯಂತರ ಆದೇಶವನ್ನು ವಿರೋಧಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿ, ಮಧ್ಯಂತರ ಆದೇಶವನ್ನು ನೀಡುವುದು ಅರ್ಜಿದಾರರ ಪರವಾಗಿ ಅಂತಿಮ ಆದೇಶಕ್ಕೆ ಸಮಾನವಾಗಿರುತ್ತದೆ. ಈ ಸಮಸ್ಯೆ ಪ್ರತಿದಿನ ಒಂದು ತಿರುವು ಪಡೆಯುತ್ತಿದ್ದು, ಎಲ್ಲರ ಕಣ್ಣುಗಳು ನ್ಯಾಯಾಲಯದತ್ತ ನೆಟ್ಟಿದೆ. ಆದ್ದರಿಂದ ತೀರಾ ತುರ್ತು ಆದ್ದರಿಂದ ನ್ಯಾಯಾಲಯವು ಅಂತಿಮ ಆದೇಶವನ್ನು ಶೀಘ್ರವಾಗಿ ರವಾನಿಸಬೇಕು ಎಂದು ಅವರು ವಾದಿಸಿದರು.

2022ರ ಫೆ.5ರಂದು ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನಿಗದಿ ಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಉಡುಪಿ ಜಿಲ್ಲೆಯ ಅರ್ಜಿದಾರರು-ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಉಡುಪಿಯಲ್ಲಿ ಹಿಜಾಬ್ ಧರಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ. ನಂತರ ಬೇರೆ ಬೇರೆ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬರುವುದರೊಂದಿಗೆ ಈ ವಿಚಾರ ರಾಜ್ಯದ ವಿವಿಧೆಡೆ ಹಬ್ಬಿತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *