ರಾಜ್ಯಾದ್ಯಂತ ಹಿಜಾಬ್ ವಿವಾದ: ಮತ್ತೆ ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ಹಿನ್ನೆಲೆ ಪರಿಶೀಲನೆ
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ತಲೆದೋರಿರುವಂತೆ ಪೊಲೀಸರ ಸೂಚನೆ ಮೇರೆಗೆ ಬೆಂಗಳೂರಿನ ಕಾಲೇಜುಗಳಲ್ಲಿರುವ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳ ಹಿನ್ನೆಲೆಯನ್ನು ವಿಶ್ವವಿದ್ಯಾನಿಲಯಗಳು ಮತ್ತೆ ಪರಿಶೀಲನೆ ನಡೆಸುತ್ತಿವೆ.
ಫೆಬ್ರವರಿ 14, 2019 ರಂದು ನಡೆದ ಪುಲ್ವಾಮಾ ಭಯೋತ್ಪಾದನಾ ದಾಳಿಯ ನಂತರ ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ಹಿನ್ನೆಲೆಯನ್ನು ಕೊನೆಯದಾಗಿ ಪರಿಶೀಲನೆ ನಡೆಸಲಾಗಿತ್ತು.ಜಮ್ಮು, ಕಾಶ್ಮೀರ ಮತ್ತು ಲಡಾಖ್ನ ಸುಮಾರು 25,000 ವಿದ್ಯಾರ್ಥಿಗಳು ಕರ್ನಾಟಕದಲ್ಲಿ ನರ್ಸಿಂಗ್, ಎಂಜಿನಿಯರಿಂಗ್ ಮತ್ತು ಇತರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 10,000 ಕ್ಕೂ ಹೆಚ್ಚು ಮಂದಿ ಬೆಂಗಳೂರಿನಲ್ಲಿದ್ದಾರೆ.
ಇದೇ ಮೊದಲ ಬಾರಿಗೆ ಗೂಗಲ್ ಫಾರ್ಮ್ ಗಳಲ್ಲಿ ವಿವರ ನೀಡುವಂತೆ ಕೇಳಲಾಗಿದೆ. ಅದರಲ್ಲಿ ವಿದೇಶಿ ವಿದ್ಯಾರ್ಥಿಗಳು ಅಥವಾ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳೆಂಬ ಆಯ್ಕೆಗಳಿವೆ. ಆರಂಭದಲ್ಲಿ, ಇದು ಹೊಸ ಸೆಮಿಸ್ಟರ್ ದಾಖಲಾತಿಯ ಭಾಗ ಎಂದು ನಾವು ಭಾವಿಸಿದ್ದೇವೆ, ಆದರೆ ನಂತರ ಇದು ಕೆಲವು ಕಾಲೇಜುಗಳಿಗೆ ಸೀಮಿತವಾಗಿದೆ. ಹಲವು ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಇನ್ನೂ ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳ ಸಂಘದ ಸದಸ್ಯರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು.
ಕಾಶ್ಮೀರ ಕಣಿವೆಯಲ್ಲಿನ ಪ್ರಕ್ಷುಬ್ಧತೆಯ ಸಮಯದಲ್ಲಿ ಕೊನೆಯ ಬಾರಿಗೆ ನಮ್ಮ ವಿವರಗಳನ್ನು ಕೇಳಿದ್ದರಿಂದ ಸುರಕ್ಷತೆಯ ಸಮಸ್ಯೆಗಳಿಂದ ಹೊರಗಿದೆ ಎಂದು ನಾವು ಭಾವಿಸಿದ್ದೇವೆ. ಈಗ ನಡೆಯುತ್ತಿರುವ ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಈ ರೀತಿಯಲ್ಲಿ ನಮ್ಮನ್ನು ಕೇಳುತ್ತಿದ್ದಾರೆ ಎಂದು ಅವರು ಹೇಳಿದರು.
ಫೆಬ್ರವರಿ 3 ರಿಂದ ವಿಶ್ವವಿದ್ಯಾನಿಲಯಗಳು ಹಿನ್ನೆಲೆ ವಿವರಗಳು ಕೇಳುತ್ತಿವೆ ಎಂದು ಅನೇಕ ವಿದ್ಯಾರ್ಥಿಗಳು ಹೇಳಿದರು. ಕಾಲೇಜ್ ದಾಖಲಾತಿ ಸಂದರ್ಭದಲ್ಲಿ ಎಲ್ಲಾ ವಿವರ ನೀಡಿರುವಾಗ ಮತ್ತೆ ಕೇಳುತ್ತಿರುವುದು ಏಕೆ ಎಂದು ಅನೇಕ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಹೆಸರು, ಸಂಪರ್ಕದ ನಂಬರ್, ವಿಳಾಸ, ಅಧ್ಯಯನ ಮಾಡುತ್ತಿರುವ ಕೋರ್ಸ್, ಬೆಂಗಳೂರಿನಲ್ಲಿ ಯಾವಾಗ ಇದ್ದಾರೆ ಎಂಬಿತ್ಯಾದ ವಿವರಗಳನ್ನು ನೀಡುವಂತೆ ಕೇಳಲಾಗಿದೆ.
ವಾಡಿಕೆಯಂತೆ ಇದನ್ನು ಮಾಡಲಾಗುತ್ತಿದೆ ಎಂದು ವಿಶ್ವವಿದ್ಯಾನಿಲಯಗಳ ಅನೇಕ ಸಿಬ್ಬಂದಿ ಹೇಳುತ್ತಿದ್ದರೆ ಮತ್ತೆ ಕೆಲವರು ಏನನ್ನೂ ಹೇಳುತ್ತಿಲ್ಲ. ವಿವರ ಸಂಗ್ರಹಿಸುವಂತೆ ಗೋವಿಂದ ಪುರ ಪೊಲೀಸರು ಹೇಳಿದ್ದಾಗಿ ಹೆಚ್ ಕೆಬಿಕೆ ಎಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಹುಸೈನ್ ಹೇಳಿದರು. ವಿದೇಶಿ ವಿದ್ಯಾರ್ಥಿಗಳಿಂದ ಮಾತ್ರ ವಿವರಗಳನ್ನು ಪಡೆಯಲಾಗುತ್ತಿದೆ. ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳಿಂದಲೂ ವಿವರ ಪಡೆಯಬೇಕೆಂದು ತಪ್ಪಾಗಿ ಭಾವಿಸಲಾಗಿದೆ, ಇಂತಹ ವಿವರಗಳನ್ನು ನಾವು ಕೇಳಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಇಂತಹ ವಿವರ ಪಡೆಯುವಂತೆ ನಾವು ಯಾವುದೇ ನಿರ್ದೇಶನ ನೀಡಿಲ್ಲ, ಎಲ್ಲಾ ವಿದ್ಯಾರ್ಥಿಗಳ ವಿವರ ನಮ್ಮ ಬಳಿ ಇದೆ. ಇಂತಹ ವಿವರ ಪಡೆಯುವುದು ಸರಿಯಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.