ನಮ್ಮ ಸಂಸ್ಕೃತಿ ಪಾಲಿಸಲು ನಮಗೆ ಸ್ವಾತಂತ್ರ್ಯವಿಲ್ಲದಿದ್ದರೆ ಹೇಗೆ?: ಅಲ್ಲಾಹು ಅಕ್ಬರ್ ಕೂಗಿ ಸುದ್ದಿಯಾದ ಮಂಡ್ಯದ ವಿದ್ಯಾರ್ಥಿನಿ ವಾದ!
ಮೈಸೂರು: ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಘೋಷಣೆ ಮಾಡಿದ್ದಕ್ಕೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಎಂದು ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಹೇಳಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಹಿಂದೂ ವಿದ್ಯಾರ್ಥಿಗಳು ತಮಗೆ ಪ್ರಚೋದನೆ ನೀಡಿ ಜೈಶ್ರೀರಾಮ್ ಎಂದು ಹೇಳುತ್ತಾ ಭೀತಿಗೊಳಿಸಲು ಯತ್ನಿಸಿದರೂ ತಾವು ಭಯಭೀತರಾಗಿಲ್ಲ ಎಂದು ಬುರ್ಖಾ ಧರಿಸಿಕೊಂಡು ಕಾಲೇಜಿಗೆ ಬಂದ ವಿದ್ಯಾರ್ಥಿನಿ ಬಿಬಿ ಮುಸ್ಕಾನ್ ಖಾನ್ ಹೇಳಿದ್ದಾರೆ.
ಮಂಡ್ಯದ ಪಿಇಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಮುಸ್ಕಾನ್ ಈ ಬಗ್ಗೆ ಸುದ್ದಿಗಾರರಿಗೆ ಹೇಳಿದ್ದು ಹೀಗೆ: ನಾನು ಕಳೆದ ಮಂಗಳವಾರ ಅಸೈನ್ ಮೆಂಟ್ ಕಾಲೇಜಿಗೆ ಕೊಡಲೆಂದು ಹೋಗಿದ್ದೆ. ಕಾಲೇಜು ಕ್ಯಾಂಪಸ್ ಗೆ ಹೋಗುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಕೇಸರಿ ಶಾಲು ತೊಟ್ಟವರು ನನ್ನ ಬಳಿ ಬಂದು ಕಾಲೇಜಿನೊಳಗೆ ಬರಬೇಕೆಂದರೆ ಬುರ್ಖಾ ತೆಗೆದು ಬನ್ನಿ ಇಲ್ಲದಿದ್ದರೆ ಮನೆಗೆ ಹೋಗಿ ಎಂದು ಹೇಳಿದರು. ಆದರೆ ನಾನು ಕಾಲೇಜಿನೊಳಗೆ ಹೋದೆ, ನನ್ನ ವಾಹನ ನಿಲ್ಲಿಸಿ ತರಗತಿಯೊಳಗೆ ಹೋಗುತ್ತಿದ್ದೆ. ಆಗ ಕೆಲವು ಹುಡುಗರು ನನ್ನನ್ನು ಹಿಂಬಾಲಿಸಿ ಜೈ ಶ್ರೀರಾಮ್ ಎಂದು ಜೋರಾಗಿ ಕೂಗಿದರು. ಆಗ ನಾನು ಕೈ ಎತ್ತಿ ಅಲ್ಲಾಹು ಅಕ್ಬರ್ ಎಂದೆ ಎಂದು ಹೇಳಿದರು.
ನನಗಿಂತ ಮೊದಲು ಮೂರ್ನಾಲ್ಕು ಮಂದಿ ಬುರ್ಖಾ ಧರಿಸಿದ ಹುಡುಗಿಯರಿಗೆ ಈ ರೀತಿ ಹುಡುಗರು ಹೆದರಿಸಿದ್ದರಂತೆ. ಅದಕ್ಕವರು ಅಳುತ್ತಾ ಬರುತ್ತಿದ್ದರು, ಆದರೆ ನಾನು ಹೆದರಲಿಲ್ಲ. ಧೈರ್ಯದಿಂದ ಎದುರಿಸಿದೆ. ಕಾಲೇಜು ಸಿಬ್ಬಂದಿ ನನಗೆ ಸಹಕಾರ ನೀಡಿ ಬೆಂಬಲ ನೀಡಿದರು ಎಂದು ಮುಸ್ಕಾನ ವಿವರಿಸಿದಳು.
ಪ್ರತಿ ಧರ್ಮದಲ್ಲಿ ಕೆಲವು ಸಂಸ್ಕೃತಿಯಿದೆ. ಅದನ್ನು ಪಾಲಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ನಮ್ಮ ಧರ್ಮದಲ್ಲಿರುವ ಸಂಸ್ಕೃತಿಯನ್ನು ನಾವು ಪಾಲಿಸುತ್ತೇವೆ, ನಾನು ಹೈಕೋರ್ಟ್ ತೀರ್ಪಿಗೆ ಕಾಯುತ್ತಿದ್ದೇವೆ ಎಂದರು.
ಈ ಮಧ್ಯೆ ಹಲವು ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಮುಸ್ಕಾನಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಬಹುಜನ ಸಮಾಜ ಪಕ್ಷದ ಸದಸ್ಯರು ಮುಸ್ಕಾನ ಮನೆಗೆ ಭೇಟಿ ನೀಡಿ ಆಕೆಯನ್ನು ಸನ್ಮಾನಿಸಿದ್ದಾರೆ.
ಜಮೈತ್ ಉಲೆಮಾ-ಇ-ಹಿಂದ್ ಸಾಮಾಜಿಕ-ಧಾರ್ಮಿಕ ಸಂಘಟನೆ ಮುಸ್ಕಾನಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಈ ಬಗ್ಗೆ ಮುಸ್ಕಾನರನ್ನು ಕೇಳಿದರೆ ಆ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ. ಇನ್ನು ಸಂಘಟನೆ ನಗದು ಬಹುಮಾನ ಘೋಷಿಸಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರೆ ಇನ್ನು ಕೆಲವರು ಸ್ವಾಗತಿಸಿದ್ದಾರೆ.