ಕಲ್ಯಾಣ ಕರ್ನಾಟಕದ ಶೇ 59 ರಷ್ಟು ಶಾಲೆಗಳಲ್ಲಿ ಟಾಯ್ಲೆಟೇ ಇಲ್ಲ! ಶೇ.73 ರಷ್ಟು ಶಾಲೆಗಳು ಸೋರುತ್ತಿವೆ

ಹೈಲೈಟ್ಸ್‌:

  • ಕಲ್ಯಾಣ ಕರ್ನಾಟಕದಲ್ಲಿ ಸ್ವಲ್ಪ ಮಳೆ ಬಂದರೂ ಸಾಕು ಈ ಭಾಗದ ಶೇ 73 ರಷ್ಟು ಶಾಲಾ ಕೋಣೆಗಳು ಸೋರುತ್ತವೆ.
  • ಶೇ. 71ರಷ್ಟು ಶಾಲೆಗಳಲ್ಲಿ ಬೋಧನೆ ಮತ್ತು ಕಲಿಕಾ ಸಾಮಗ್ರಿಗಳೇ ಇಲ್ಲ.
  • 5,671 ಶಾಲೆಗಳಲ್ಲಿ ಡೆಸ್ಕ್‌ಗಳ ಕೊರತೆ ಇದ್ದು, ಮಕ್ಕಳು ನೆಲದ ಮೇಲೆಯೇ ಕುಳಿತು ಕಲಿಯುವುದು ಸಾಮಾನ್ಯವಾಗಿದೆ.

ಕಲಬುರಗಿ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಸದಾ ಕೊನೆ ಸ್ಥಾನದಲ್ಲಿರುವ ಇರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ಇದೊಂದು ಆಘಾತಕಾರಿ ಅಂಶ. ಸ್ವಲ್ಪ ಮಳೆ ಬಂದರೂ ಸಾಕು ಈ ಭಾಗದ ಶೇ 73 ರಷ್ಟು ಶಾಲಾ ಕೋಣೆಗಳು ಸೋರುತ್ತವೆ. ಶೇ 71ರಷ್ಟು ಶಾಲೆಗಳಲ್ಲಿ ಬೋಧನೆ ಮತ್ತು ಕಲಿಕಾ ಸಾಮಗ್ರಿಗಳೇ ಇಲ್ಲ, ಅರ್ಧದಷ್ಟು ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲದಿರುವ ಇರುವ ಬಗ್ಗೆ ಕಲಬುರಗಿ ಶಿಕ್ಷಣ ಅಪರ ಆಯುಕ್ತಾಲಯದ ನಡೆಸಿದ ಸಮೀಕ್ಷೆಯ ಅಂಕಿ ಅಂಶಗಳು ಶೈಕ್ಷಣಿಕ ಅವ್ಯವಸ್ಥೆಯನ್ನು ಅನಾವರಣಗೊಳಿಸಿದೆ.ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್‌, ಯಾದಗಿರಿ, ಬೀದರ್‌, ರಾಯಚೂರು, ಬಳ್ಳಾರಿ,ಕೊಪ್ಪಳ ಮತ್ತು ವಿಜಯ ನಗರ ಒಳಗೊಂಡ 7 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಕಲಬರಗಿ ಶಿಕ್ಷಣ ಅಪರ ಆಯುಕ್ತಾಲಯವು ಸರಕಾರಿ ಶಾಲೆಗಳ ಕೊರತೆ ಬಗ್ಗೆ ಸಮೀಕ್ಷೆ ನಡೆಸಿದ್ದು, ಶಾಲೆಗಳು ಸೌಲಭ್ಯಗಳು ಇಲ್ಲದೇ ನರಳುತ್ತಿರುವ ಆಘಾತಕಾರಿ ಅಂಶಗಳು ಬಯಲಿಗೆ ಬಂದಿವೆ. ಅಗತ್ಯ ಅನುದಾನ ನೀಡುವಂತೆ ಶಿಕ್ಷಣ ಇಲಾಖೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ಪ್ರಸ್ತಾವನೆಯೂ ಸಲ್ಲಿಸಿದೆ.

ಎಲ್ಲವೂ ಕೊರತೆ; 60 ರಷ್ಟು ಶಾಲೆಗಳಲ್ಲಿ ಶೌಚಾಲಯ ಇಲ್ಲ

ಕಲ್ಯಾಣ ಭಾಗದಲ್ಲಿಒಟ್ಟು 8,976 ಸರಕಾರಿ ಶಾಲೆಗಳಿವೆ. ಇವುಗಳ ಪೈಕಿ ಶೇ 18ರಷ್ಟು ಶಾಲೆಗಳಲ್ಲಿ ಕುಡಿವ ನೀರಿಲ್ಲ. ಶೇ 27ರಷ್ಟು ಕಡೆ ಅಡುಗೆ ಕೋಣೆಗಳೇ ಇಲ್ಲ. ಅಚ್ಚರಿ ಎಂದರೆ, ಶೇ 59ರಷ್ಟು ಶಾಲೆಗಳಲ್ಲಿ ಟಾಯ್ಲೆಟ್‌ ಇಲ್ಲ. ಶಾಲಾ ಮಕ್ಕಳು ಅದರಲ್ಲೂ ಬಾಲಕಿಯರ ಟಾಯ್ಲೆಟ್‌ ಸಮಸ್ಯೆಯ ಭೀಕರತೆಯನ್ನು ಇದು ಅನಾವರಣಗೊಳಿಸಿದೆ.

ಟಾಯ್ಲೆಟ್‌ ಸಮಸ್ಯೆ ಇರುವುದರಿಂದ ಸಹಸ್ರಾರು ಬಾಲಕಿಯರು ಹೆಚ್ಚು ನೀರು ಸೇವಿಸುತ್ತಿಲ್ಲ. ಅಗತ್ಯಕ್ಕೆ ತಕ್ಕಂತೆ ನೀರು ಸೇವನೆ ಮಾಡದೇ ಇರುವುದರಿಂದ ಹತ್ತಾರು ದೈಹಿಕ ಅನಾರೋಗ್ಯಕರ ಸಮಸ್ಯೆ ಎದುರಿಸುವಂತಾಗಿದೆ. ಋುತುಚಕ್ರದ ಸಮಯದಲ್ಲಿ ಶಾಲೆಗೇ ಬರುವುದಿಲ್ಲಎನ್ನುತ್ತಾರೆ ಸರಕಾರಿ ಶಾಲೆಯ ಶಿಕ್ಷಕರು.

5,671 ಶಾಲೆಗಳಲ್ಲಿ ಡೆಸ್ಕ್‌ಗಳ ಕೊರತೆ ಇದ್ದು, ಮಕ್ಕಳು ನೆಲದ ಮೇಲೆಯೇ ಕುಳಿತು ಕಲಿಯುವುದು ಸಾಮಾನ್ಯವಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ನೆಲದ ಮೇಲೆಯೇ ಕುಳಿತು ಬರೆಯುತ್ತಾರೆ. ಶೇ 43ರಷ್ಟು ಶಾಲೆಗಳಲ್ಲಿಬಿಸಿಯೂಟ ತಯಾರಿಸುವ ಸಾಮಗ್ರಿಗಳೇ ಇಲ್ಲ.ಹೀಗೆ ಇಲ್ಲಗಳ ನಡುವೆಯೇ ಕಲ್ಯಾಣದ ಶಿಕ್ಷಣ ಸಾಗಿದೆ.

ಫಲಿತಾಂಶ ಪಾತಾಳಕ್ಕೆ

ಪ್ರತಿ ಸಲದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿಕಲ್ಯಾಣದ ಜಿಲ್ಲೆಗಳು ಕೊನೆ ಸ್ಥಾನದಲ್ಲಿರುವುದು ಸಾಮಾನ್ಯವಾಗಿದೆ. ಕಳೆದ ವರ್ಷದ ಫಲಿತಾಂಶದಲ್ಲಿಬೀದರ್‌ 32, ಕಲಬುರಗಿ -28, ಯಾದಗಿರಿ-33, ರಾಯಚೂರು-26, ಬಳ್ಳಾರಿ 20ನೇ ಸ್ಥಾನದಲ್ಲಿವೆ. ಕಳೆದ ಹಲವು ವರ್ಷಗಳಿಂದಲೂ ಕಲ್ಯಾಣದ ಜಿಲ್ಲೆಗಳ ಫಲಿತಾಂಶ ಕಳಪೆಯಾಗಿಯೇ ಬರುತ್ತಿದೆ. ಸೌಲಭ್ಯಗಳು ಇಲ್ಲದೇ ಇರುವುದು ಫಲಿತಾಂಶ ಕುಸಿತಕ್ಕೆ ಪ್ರಮುಖ ಕಾರಣವೂ ಹೌದು ಎನ್ನುತ್ತಾರೆ ಶಿಕ್ಷಣ ತಜ್ಞರು.

 

ಶೇ 71ರಷ್ಟಿ ಟಿಎಲ್‌ಎಂ ಕೊರತೆ!

ಕಲ್ಯಾಣದ ಜಿಲ್ಲೆಗಳ ಶೇ 71ರಷ್ಟು ಶಾಲೆಗಳಲ್ಲಿಬೋಧನಾ-ಕಲಿಕಾ ಸಾಮಗ್ರಿ (ಟಿಎಲ್‌ಎಂ) ಕೊರತೆ ಇರುವುದು ಈ ಭಾಗದ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಪಠ್ಯಪುಸ್ತಕಗಳು, ಮಲ್ಟಿಮೀಡಿಯಾ, ಕಪ್ಪು ಹಲಗೆ, ಬೋಧನೋಪಕರಣಗಳು ಕೊರತೆ ಇದೆ. ಇದರಿಂದ ಬೋಧನೆ ಮತ್ತು ಕಲಿಕೆ ಫಲಪ್ರದವಾಗುತ್ತಿಲ್ಲಎನ್ನುತ್ತಾರೆ ಶಿಕ್ಷಣ ತಜ್ಞರು.

ಬೋಧನೋಪಕರಣಗಳನ್ನು ಬಳಸಿ ಪಾಠ ಮಾಡಿದರೆ ಪರಿಣಾಮಕಾರಿ ಬೋಧನೆಯಾಗುತ್ತದೆ. ಮಕ್ಕಳಿಗೆ ಕಲಿಕೆಯಲ್ಲಿಆಸಕ್ತಿ ಬರುತ್ತದೆ. ಶಾಲೆಗಳು ಆಕರ್ಷಣೆಯ ಕೇಂದ್ರಗಳಾದರೆ ಮಕ್ಕಳ ಕಲಿಕೆಗೆ ಪ್ರೋತ್ಸಾಹ ಸಿಗುತ್ತದೆ. ಆದರೆ ಇದು ಇಲ್ಲಿಇಲ್ಲದೇ ಇದ್ದರಿಂದ ಅದರ ಪರಿಣಾಮ ಡ್ರಾಪೌಟ್‌, ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತ ಎದ್ದು ಕಾಣುತ್ತಿದೆ.

ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಗಮನದಲ್ಲಿಇಟ್ಟುಕೊಂಡು ಈ ಬಾರಿ ಕೆಕೆಆರ್‌ಡಿಬಿಯ ಒಟ್ಟು ಅನುದಾನದಲ್ಲಿಶೇ 25ರಷ್ಟನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲು ಇಡಲು ನಿರ್ಧರಿಸಲಾಗಿದೆ. ಸರಕಾರಿ ಶಾಲೆಗಳಿಗೆ ಎಲ್ಲ ಮೂಲಸೌಲಭ್ಯಗಳನ್ನು ಸೇರಿದಂತೆ ಎಲ್ಲಸೌಲಭ್ಯ ಕಲ್ಪಿಸಲು ಅಕ್ಷರ ಆವಿಷ್ಕಾರ ಯೋಜನೆ ರೂಪಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿಎಲ್ಲ ಸೌಲಭ್ಯ ಸಿಗಲಿವೆ.
-ಡಾ. ಅಜಯಸಿಂಗ್‌, ಅಧ್ಯಕ್ಷ, ಕೆಕೆಆರ್‌ಡಿಬಿ, ಕಲಬುರಗಿ

 

ಕಲ್ಯಾಣದ ಶಾಲೆಗಳ ಕನ್ನಡಿ

  • ಒಟ್ಟು ಶಾಲೆಗಳು: 8,976
  • ಸೋರುವ ಶಾಲೆಗಳು: 6,538
  • ಟಾಯ್ಲೆಟ್‌ ಇಲ್ಲದ ಶಾಲೆಗಳು:5,310
  • ಕುಡಿವ ನೀರಿಲ್ಲದ ಶಾಲೆಗಳು: 1,624
  • ಅಡುಗೆ ಕೋಣೆ ಇಲ್ಲದ ಶಾಲೆಗಳು: 2,466
  • ಡೆಸ್ಕ್‌ಗಳ ಕೊರತೆ ಇರುವ ಶಾಲೆಗಳು: 5,671
  • ಟೀಚಿಂಗ್‌ ಲರ್ನಿಂಗ್‌ ಸಾಮಗ್ರಿಗಳ ಕೊರತೆ: 6,416
  • ಮಳೆ ಬಂದರೆ ಸೋರುತ್ತವೆ ಕಲ್ಯಾಣ ಶೇ 73ರಷ್ಟು ಶಾಲೆಗಳು.
  • ಕಲ್ಯಾಣದ ಶೇ 50ರಷ್ಟು ಶಾಲೆಗಳಲ್ಲಿಟಾಯ್ಲೆಟೇ ಇಲ್ಲ!

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *