ಬೆಳಗಾವಿ ಸ್ಮಾರ್ಟ್ ಸಿಟಿಯಲ್ಲಿ ‘ಕಟ್ಟೋಣು ಬಾ, ಕೆಡಿಸೋಣು ಬಾ’ ಆಟ!
ಹೈಲೈಟ್ಸ್:
- ಮೊದಲು ಗುಣಮಟ್ಟದ ರಸ್ತೆ ನಿರ್ಮಾಣ, ಆಮೇಲೆ ಧ್ವಂಸ
- ಅಧಿಕಾರಿಗಳ ಸಮನ್ವಯ ಕೊರತೆಯಿಂದ ಜನರಿಗೆ ಸಂಕಷ್ಟ
- ಜನಸಾಮಾನ್ಯರ ತೆರಿಗೆ ಹಣವೂ ವ್ಯರ್ಥ.
ಬೆಳಗಾವಿ: ಬೆಳಗಾವಿ ನಗರವನ್ನು ಸ್ಮಾರ್ಟ್ಗೊಳಿಸುವ ಹೊಣೆಗಾರಿಕೆ ಹೊತ್ತ ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ನಿರಂತರ ನೀರು ಪೂರೈಕೆ ಗುತ್ತಿಗೆ ಪಡೆದ ಕಂಪನಿಗಳ ಮಧ್ಯೆ ಪರಸ್ಪರ ಸಮನ್ವಯತೆಯ ಕೊರತೆ ಜನರಿಗೆ ಸಂಕಷ್ಟ ತಂದೊಡ್ಡುತ್ತಿದೆ.
ಸ್ಮಾರ್ಟ್ ಸಿಟಿಗಾಗಿ ಕೋಟಿಗಟ್ಟಲೆ ಹಣ ವ್ಯಯಿಸಿ, ರಸ್ತೆ, ಚರಂಡಿ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಕರ್ನಾಟಕ ನೀರಾವರಿ ನಿಗಮದಿಂದ ನಗರದ ಕುಡಿವ ನೀರಿನ ವ್ಯವಸ್ಥೆ ನಿರ್ವಹಣೆ ಗುತ್ತಿಗೆ ಪಡೆದಿರುವ ಕಂಪನಿ ಸುಂದರವಾಗಿ ರಸ್ತೆ ನಿರ್ಮಾಣ ಮಾಡಿದ ಮೇಲೆ ಬಂದು ಪೈಪ್ಲೈನ್ ಅಳವಡಿಕೆ ಹೆಸರಲ್ಲಿ ಅಗೆದು ಧ್ವಂಸಗೊಳಿಸುತ್ತಿದೆ. ಸ್ಮಾರ್ಟ್ ಸಿಟಿ ಹೆಸರಲ್ಲಿನಡೆಯುತ್ತಿರುವ ಈ ‘ಕಟ್ಟೋಣು ಬಾ, ಕೆಡಿಸೋಣು ಬಾ’ ಆಟ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದೆ.
ಸಂಚಾರಕ್ಕೂ ಸಂಕಷ್ಟ
ನಗರದ ಮಹಾಂತೇಶ ನಗರ, ಕಣಬರ್ಗಿ ರಸ್ತೆ, ಅಶೋಕ ನಗರ, ವಡಗಾಂವಿ, ಆಂಜನೇಯ ನಗರ, ರಾಮತೀರ್ಥ ನಗರ, ಕ್ಯಾಂಪ್ ಪ್ರದೇಶ ಸೇರಿದಂತೆ ಹಲವಾರು ಪ್ರದೇಶಗಳಲ್ಲಿರಸ್ತೆ ನಿರ್ಮಾಣದ ಬೆನ್ನಿಗೇ ಅದನ್ನು ಕುಡಿವ ನೀರಿನ ಪೈಪ್ಲೈನ್ ಅಳವಡಿಕೆಗಾಗಿ ಅಗೆದು ಹಾಳು ಮಾಡಲಾಗಿದೆ.
ಕಾಮಗಾರಿ ಮುಗಿದ ನಂತರ ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಮಣ್ಣು ಮುಚ್ಚಿ ಹೊಸ ರಸ್ತೆ ನಿರುಪಯುಕ್ತಗೊಳಿಸುತ್ತಿದ್ದಾರೆ. ಅಲ್ಲದೆ ನಿಧಾನ ಗತಿಯಲ್ಲಿ ಕಾಮಗಾರಿ ನಡೆಸಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳಿಸುತ್ತಿದ್ದಾರೆ. ಅಭಿವೃದ್ಧಿಯಂಥ ಗಂಭೀರ ವಿಷಯದಲ್ಲಿಇಂಥ ಬಾಲಿಶತನದ ನಿರ್ಧಾರದಿಂದ ಜನರ ತೆರಿಗೆ ಹಣ ಮಣ್ಣುಪಾಲಾಗುತ್ತಿದೆ. ಇದರ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಪಾಲಿಕೆಗೂ ಕಿರಿಕಿರಿ
ನೀರಿನ ಪೈಪ್ಲೈನ್ ಅಳವಡಿಸುವ ಖಾಸಗಿ ಕಂಪನಿಯ ಆಮೆಗತಿಯ ಕಾಮಗಾರಿಗೆ ಪಾಲಿಕೆ ಅಧಿಕಾರಿಗಳೂ ಬೇಸತ್ತಿದ್ದಾರೆ. ಇತ್ತೀಚೆಗಷ್ಟೇ ಈ ಖಾಸಗಿ ಕಂಪನಿಗೆ 21 ಕೋಟಿ ರೂ. ದಂಡ ವಿಧಿಸಿ, ಕಂಪನಿಯನ್ನು ಬ್ಲ್ಯಾಕ್ ಲೀಸ್ಟ್ಗೆ ಸೇರಿಸುವ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು. ಆದರೆ ಈ ಕಂಪನಿ ಮಾತ್ರ ನಿರ್ಮಾಣದ ಬೆನ್ನಿಗೆ ಧ್ವಂಸಕ್ಕೆಂದೇ ಮೀಸಲಾದಂತೆ ಕೆಲಸ ಮುಂದುವರಿಸಿದೆ.
ಯಾರು ಏನಂತಾರೆ?
ಪರಸ್ಪರ ಸಮನ್ವಯತೆಯೊಂದಿಗೆ ಕಾಮಗಾರಿಗಳನ್ನು ನಡೆಸಲು ಜಿಲ್ಲಾಡಳಿತ ಎಲ್ಲಇಲಾಖೆಗಳೊಂದಿಗೆ ಚರ್ಚಿಸಬೇಕು. ಅಗೆದು ಬಿಟ್ಟಿರುವ ರಸ್ತೆಗಳನ್ನು ಪುನಃ ನಿರ್ಮಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.
ರ್ಟ್ ಸಿಟಿ ಮತ್ತು ನಿರಂತರ ಕುಡಿಯುವ ಯೋಜನೆ ಇವೆರಡೂ ಕೆಯುಡಿಎಫ್ಸಿ ಅಡಿ ಬರುತ್ತವೆ. ಹಾಗಾಗಿಯೇ ಕೆಯುಡಿಎಫ್ಸಿ ಎಂಡಿ ದೀಪಾ ಚೋಳನ್ ಅವರ ಅಧ್ಯಕ್ಷತೆಯಲ್ಲಿಈಚೆಗೆ ಸಮನ್ವಯತೆ ಸಭೆ ನಡೆಸಲಾಗಿದೆ. ಹಾಳಾಗಿರುವ ರಸ್ತೆ ದುರಸ್ತಿ ಮಾಡಿಕೊಡಲು ಸೂಚಿಸಲಾಗಿದೆ.
- ಸೈದಾ ಆಫ್ರೀನ್ ಬಾನು, ಎಂಡಿ, ಬೆಳಗಾವಿ ಸ್ಮಾರ್ಟ್ ಸಿಟಿ
———–
ಕುಡಿವ ನೀರಿನ ಕಾಮಗಾರಿ ನಿಮಿತ್ತ ಹಾಳಾಗಿರುವ ರಸ್ತೆಗಳನ್ನು ಚಳಿಗಾಲದ ಅಧಿವೇಶನದೊಳಗೆ ದುರಸ್ತಿ ಮಾಡಿಕೊಡುವಂತೆ ಸಂಬಂಧಪಟ್ಟ ಕಂಪನಿಗೆ ಸೂಚಿಸಲಾಗಿದೆ.
- ಅಶೋಕ ದುಡಗುಂಟಿ, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ