ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಡಬಲ್ ಧಮಾಕಾ: ಖಾತೆ ಸೇರಲಿದೆ ಇಷ್ಟು ಹೆಚ್ಚುವರಿ ಮೊತ್ತ!
DA Arrears : ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಈಗಾಗಲೇ ಮಾತುಕತೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರ ಶೀಘ್ರದಲ್ಲೇ ಡಿಎ ಬಾಕಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.
ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಸರ್ಕಾರ ನೀಡಿರಲಿಲ್ಲ. ಪರಿಸ್ಥಿತಿ ಸ್ವಲ್ಪ ತಿಳಿಯಾದ ತಕ್ಷಣ ಡಿಎ ಫ್ರೀಜ್ ಅನ್ನು ತೆಗೆದುಹಾಕಲಾಯಿತು. ಇದೀಗ ಮೋದಿ ಸರ್ಕಾರವು 1 ಜನವರಿ 2020 ರಿಂದ 30 ಜೂನ್ 2021 ರವರೆಗಿನ ಡಿಎ ಬಾಕಿಯನ್ನು ನೌಕರರ ಖಾತೆಗಳಿಗೆ ಜಮಾ ಮಾಡಿಲ್ಲ. ಈ ಡಿಎ ಬಾಕಿಯನ್ನು ನೀಡುವಂತೆ ನೌಕರರು ಬಹಳ ದಿನಗಳಿಂದ ಮನವಿ ಮಾಡುತ್ತಿದ್ದಾರೆ. ಚುನಾವಣೆಗೂ ಮುನ್ನ ಸರ್ಕಾರಿ ನೌಕರರ ಈ ಬೇಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬಹುದು ಎನ್ನಲಾಗಿದೆ. ಸುಮಾರು 1 ಕೋಟಿ ಉದ್ಯೋಗಿಗಳು ಇದರ ಲಾಭ ಪಡೆಯಲಿದ್ದಾರೆ. ನೌಕರರ ಸಂಘಟನೆಗಳು ಡಿಎ ಬಾಕಿ ಕುರಿತು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅಧಿಕೃತವಾಗಿ ಈವರೆಗೆ ಏನೂ ಹೇಳಿಲ್ಲ.
ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ. ಕೊರೊನಾ ಅವಧಿಯ 18 ತಿಂಗಳ ಡಿಎ ಬಾಕಿಯನ್ನು ಸರ್ಕಾರಿ ನೌಕರರಿಗೆ ನೀಡಿದರೆ, ಉನ್ನತ ಹುದ್ದೆಯಲ್ಲಿರುವ ನೌಕರರ ಖಾತೆಗೆ ಸುಮಾರು 2 ಲಕ್ಷ 18 ಸಾವಿರ ರೂ. ಜಮಾ ಆಗಬಹುದು. ಇದರಿಂದ ಉದ್ಯೋಗಿಗಳಿಗೆ ಭಾರೀ ಲಾಭವಾಗಲಿದೆ. ಬೆಲೆ ಏರಿಕೆ ಮತ್ತು ಹಣದುಬ್ಬರದಿಂದ ನಲುಗುತ್ತಿರುವ ಜನರಿಗೆ ಇದು ಸಹಾಯವಾಗಲಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಕಾದಿದೆ. ಮೂಲವೇತನವನ್ನು ನಿರ್ಧರಿಸುವ ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಹೆಚ್ಚಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಇದಕ್ಕೆ ಈಗ ಸರ್ಕಾರ ಕಿವಿಗೊಡಬಹುದು ಎನ್ನಲಾಗಿದೆ. ಕೆಲವು ವರದಿಗಳು, ಫಿಟ್ಮೆಂಟ್ ಅಂಶವು 2.60 ರಿಂದ 3.0 ಪಟ್ಟು ಹೆಚ್ಚಾಗಬಹುದು ಎಂದು ಸೂಚಿಸುತ್ತದೆ. ಫಿಟ್ಮೆಂಟ್ ಅಂಶದ ಬಗ್ಗೆ ಸರ್ಕಾರ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ ಮಾಧ್ಯಮ ವರದಿಗಳು ಶೀಘ್ರದಲ್ಲೇ ಹೆಚ್ಚಳವಾಗಲಿದೆ ಎಂದು ಸೂಚಿಸುತ್ತದೆ.
ಮುಂದಿನ ವರ್ಷ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಪರಿಸ್ಥಿತಿಯಲ್ಲಿ, ಕೇಂದ್ರ ಸರ್ಕಾರಿ ನೌಕರರ ಬೆಂಬಲವನ್ನು ಪಡೆಯಲು ಸರ್ಕಾರವು ಅವರ ಬಹುಕಾಲದ ಬೇಡಿಕೆಗಳಾದ ಡಿಎ ಬಾಕಿ ಮೊತ್ತ, ಫಿಟ್ಮೆಂಟ್ ಅಂಶವನ್ನು ಈಡೇರಿಸಬಹುದು ಎಂದು ನಿರೀಕ್ಷಿಸಲಾಗಿದೆ. ಸರ್ಕಾರದ ಮೂಲಗಳ ಪ್ರಕಾರ ಹೊಸ ವರ್ಷಕ್ಕೂ ಮುನ್ನ ಸರ್ಕಾರ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.