ಅಡಕೆ ಅಬ್ಬರಕ್ಕೆ ನೆಲಕ್ಕೊರಗಿದ ಕೋಕೊ, ಬೆಳೆಯುವವರಿಗಿಂತ ಈಗ ಕಡಿಯುವವರೇ ಹೆಚ್ಚು
ಹೈಲೈಟ್ಸ್:
- ಪಶ್ಚಿಮ ಆಫ್ರಿಕಾದಲ್ಲಿ ಹವಾಮಾನ ಅಸಮತೋಲನದಿಂದ ಕೋಕೊ ಫಸಲು ಗಣನೀಯವಾಗಿ ಕುಸಿತ
- ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 45 ವರ್ಷಗಳ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ ಕೋಕೊ ಧಾರಣೆ
- ಆದರೆ ರಾಜ್ಯದಲ್ಲಿ ಮಾತ್ರ ಕೋಕೊ ಬೆಳೆಯೇ ಇಲ್ಲ, ಅಡಕೆ ಮಧ್ಯೆ ನೆಟ್ಟಿದ್ದ ಗಿಡಗಳಿಗೆ ಕೊಡಲಿಯೇಟು ನೀಡಿರುವ ರೈತರು
- ಅಡಕೆ ಮೌಲ್ಯ ಏರಿಕೆಯಾಗುತ್ತಿದ್ದಂತೆ ಇಳಿಮುಖವಾಗುತ್ತಿದೆ ತೋಟದ ಮಧ್ಯೆ ಅಂತರ ಬೆಳೆಯಾಗಿದ್ದ ಕೋಕೊ
ರಾಜ್ಯದಲ್ಲಿ ಅಡಕೆ ಬೆಲೆ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಿದೆ. ಅದರ ಮೌಲ್ಯ ಕೂಡ ಏರುತ್ತಿದೆ. ಆದರೆ ತೋಟದ ಮಧ್ಯೆ ಅಂತರ ಬೆಳೆಯಾಗಿದ್ದ ಕೋಕೊ ಇಳಿಮುಖವಾಗುತ್ತಿದೆ.
ಪಶ್ಚಿಮ ಆಫ್ರಿಕಾದಲ್ಲಿ ಹವಾಮಾನ ಅಸಮತೋಲನದಿಂದ ಕೋಕೊ ಫಸಲು ಗಣನೀಯವಾಗಿ ಕುಸಿದಿದೆ. ಇದರಿಂದ ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಕೊ ಧಾರಣೆ 45 ವರ್ಷಗಳ ಇತಿಹಾಸದಲ್ಲೇ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿಯೂ ಆರು ತಿಂಗಳಿಗೆ ಹೋಲಿಸಿದರೆ ಈಗ ಧಾರಣೆ ಏರುಗತಿಯಲ್ಲಿದ್ದರೂ ಫಸಲು ಮಾತ್ರ ಬೇಡಿಕೆಯನ್ನು ಪೂರೈಸುತ್ತಿಲ್ಲ. ಮುಂದಿನ ದಿನಗಳಲ್ಲಿ ಧಾರಣೆ ಇನ್ನೂ ಹೆಚ್ಚುವ ನಿರೀಕ್ಷೆಯೂ ಇದೆ.
ಬೆಳೆಯುವವರು ಕಡಿಮೆ ಕಡಿಯುವವರು ಹೆಚ್ಚು
ಕರಾವಳಿ, ಮಲೆನಾಡು ಸೇರಿದಂತೆ ಅಡಕೆ ಪ್ರಧಾನವಾಗಿ ಬೆಳೆಯುವ ಪ್ರದೇಶದಲ್ಲಿ ಅಂತರ ಬೇರೆಯಾಗಿರುವ ಕೋಕೊ ಈಗ ಗಣನೀಯವಾಗಿ ಕುಗ್ಗುತ್ತಿದೆ. ಪ್ರೀತಿಯಿಂದ ಕೋಕೊ ಬೆಳೆಸಿದ್ದ ರೈತರೇ ಈಗ ತೋಟದ ಮತ್ತೆ ಕೋಕೊ ಗಿಡಗಳನ್ನು ಕಡಿಯಲಾರಂಭಿಸಿದ್ದಾರೆ. “ನಾಲ್ಕೈದು ವರ್ಷಗಳಿಂದ ಕೋಕೊ ಗಿಡಗಳನ್ನು ಕಡಿಯುವ ಪ್ರಕ್ರಿಯ ಶುರುವಾಗಿದ್ದು, ವರ್ಷದಿಂದ ವರ್ಷಕ್ಕೆ ಇದು ಹೆಚ್ಚುತ್ತಲೇ ಇದೆ. ದಶಕಗಳ ಹಿಂದೆ ಕೋಕೊ ಬೆಳೆಸಲು ಆರಂಭಿಸುವಾಗ ಇದ್ದ ಉತ್ಸಾಹ ಅದೇ ರೀತಿ ಉಳಿದಿದ್ದಲ್ಲಿ ಈಗ ಕೋಕೊ ಉತ್ಪನ್ನದಲ್ಲಿ ರಾಜ್ಯ ಸ್ವಾವಲಂಬನೆ ಸಾಧಿಸುತ್ತಿತ್ತು,” ಎನ್ನುತ್ತಾರೆ ಪ್ರಗತಿರ ರೈತ ಪುತ್ತೂರಿನ ನವೀನ್ ರೈ.
ವೆಚ್ಚ ಹೆಚ್ಚು ಲಾಭ ಕಡಿಮೆ
ರಾಜ್ಯದ ಕರಾವಳಿ, ಮಲೆನಾಡುಗಳಲ್ಲಿ ಕೋಕೊ ಮೇಲಿನ ಆಕರ್ಷಣೆ ಕಡಿಮೆಯಾಗಲು ಅಡಕೆ ಮೇಲಿನ ಪ್ರೀತಿಯೇ ಕಾರಣ. ಅಡಕೆ ತೋಟದಲ್ಲಿ ಅಂತರ್ ಬೆಳೆಯಾಗಿರುವ ಕೋಕೊಗೆ ಅಡಕೆಯ ಜತೆಯಲ್ಲಿ ಗೊಬ್ಬರ ಕೊಡಬೇಕಾಗುತ್ತದೆ. ಕಾರ್ಮಿಕರ ಅಗತ್ಯವೂ ಇದೆ. ಇಷ್ಟಾದರೂ ಕೋಕೊಗಿರುವ ಧಾರಣೆ ಅಡಕೆಗೆ ಹೋಲಿಸಿದರೆ ಏನೇನೂ ಲಾಭದಾಯಕವಲ್ಲ. ಸಾಕಷ್ಟು ಗೊಬ್ಬರ ಹಾಕಿ ಸಾಕಿದರೂ ಮಂಗ, ಅಳಿಲು ಮುಂತಾದ ಪ್ರಾಣಿಗಳ ಹಾವಳಿಯಿಂದ ಅರ್ಧಕರ್ಧ ಬೆಳೆ ನಾಶವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ಚಾಲಿ ಅಡಕೆಗೆ ಉತ್ತಮ ಧಾರಣೆಯೂ ಇದದೆ. ಇದರಿಂದ ಅಡಕೆ ಬೆಳೆಗೆ ಹೆಚ್ಚು ಒತ್ತು ಕೊಟ್ಟಲ್ಲಿ ಅದೇ ಸಾಕಷ್ಟು ಲಾಭದಾಯಕ ಎಂಬ ಭಾವನೆ ರೈತರಲ್ಲಿ ಮೂಡಿದೆ. ಇದರಿಂದ ಕೋಕೊ ಬೆಳೆಯ ಉಸಾಬರಿಯೇ ಬೇಡ ಎಂದು ರೈತರು ನಂಬಿದಂತಿದೆ. ದೇಶದಲ್ಲಿ ಪ್ರಸ್ತುತ ವರ್ಷಕ್ಕೆ 30 ಸಾವಿರ ಮೆಟ್ರಿಕ್ ಟನ್ ಕೋಕೊ ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿ ಈ ಪೈಕಿ ಆರು ಸಾವಿರ ಮೆಟ್ರಿಕ್ ಟನ್ ಬೆಳೆಯಲಾಗುತ್ತಿದೆ. ಉಳಿದ ಪಾಲನ್ನು ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳು ಭರಿಸುತ್ತಿವೆ.
ದಾವಣಗೆರೆ, ತುಮಕೂರು ಟ್ರೆಂಡ್
”ಆಂಧ್ರ ಪ್ರದೇಶದಲ್ಲಿ ತೆಂಗಿನ ಮರಗಳ ಮಧ್ಯದಲ್ಲಿ ಅವಂತರ್ ಬೆಳೆಯಾಗಿ ಕೋಕೊ ಬೆಳೆಸುತ್ತಿದ್ದಾರೆ. ಅಲ್ಲಿ ಕೋಕೊ ಬೆಳೆ ವೃದ್ಧಿಸುತ್ತಿದೆ. ಕರ್ನಾಟಕದ ಅಡಕೆ ಬೆಳೆಯುವ ಪ್ರದೇಶದಲ್ಲಿ ವ್ಯಾಪಕವಾಗಿ ಕೋಕೊ ಬೆಳೆಯುತ್ತಿದ್ದು, ಈಗ ಕಡಿಮೆಯಾಗುತ್ತಿದೆ. ದಾವಣಗೆರೆ, ತುಮಕೂರು ಮುಂತಾದ ಕಡೆ ಕೋಕೊ ಬೆಳೆಯಲು ಎರಡು ವರ್ಷ ಹಿಂದ ಆರಂಭಿಸಿದ್ದಾರೆ. ಅಲ್ಲಿ ಫಸಲು ಬರಲು ಆರಂಭಗೊಂಡ ಮೇಲೆ ನಾವು ಆಂಧ್ರ ಪ್ರದೇಶದಿಂದ ತರಿಸುವ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ,” ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟಿದ್ದಾರೆ.
ಹತಾಶೆಯಲ್ಲಿ ಕ್ಯಾಂಪ್ಕೊ
ಕೋಕೊ ಕಚ್ಚಾವಸ್ತು ಅತ್ಯಧಿಕ ಪ್ರಮಾಣದಲ್ಲಿ ಬಳಸುವ ಏಷ್ಯಾದ ಅತಿ ದೊಡ್ಡ ಸಹಕಾರಿ ರಂಗದ ಚಾಕಲೇಟ್ ಕಾರ್ಖಾನೆ ಹೊ೦ದಿರುವ ಕ್ಯಾಂಪ್ಕೊ ಸಂಸ್ಥೆ ಈಗ ಕರ್ನಾಟಕದಲ್ಲಿ ತನಗೆ ಬೇಕಾದ ಕೋಕೊ ಸಿಗದಿರುವ ಕಾರಣ ಆಂಧ್ರ ಪ್ರದೇಶದಿಂದ ತರಿಸುತ್ತಿದೆ. “ವರ್ಷಕ್ಕೆ 2,500 ಟನ್ ಕೋಕೊ ಬೀಜವನನ್ನು ವಿಜಯವಾಡ ಸೇರಿದಂತೆ ಆಂಧ್ರ ಪ್ರದೇಶದಿಂದ ತರಿಸುತ್ತಿದ್ದೇವೆ. ಕರ್ನಾಟಕದಲ್ಲಿ ನಮಗೀಗ ಒಂದು ಸಾವಿರ ಟನ್ ಮಾತ್ರ ಕೋಕೋ ಬೇಜ ಸಿಗುತ್ತಿದೆ,” ಎನ್ನುತ್ತಾರೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ.