ಇಂದು ಸಪ್ತಪದಿ ತುಳಿಯುತ್ತಿರುವ ಮ್ಯೂಸಕ್ ಡೈರೆಕ್ಟರ್ ವಾಸುಕಿ ವೈಭವ್: ವಧು ಯಾರು ಗೊತ್ತೇ?
Vasuki Vaibhav Marriage: ಸಂಗೀತ ನಿರ್ದೇಶಕ, ಗಾಯಕ ಹಾಗೂ ಬಿಗ್‌ಬಾಸ್ ಮಾಜಿ ಸ್ಪರ್ಧಿ ವಾಸುಕಿ ವೈಭವ್ ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದು, ತಮ್ಮ ಬಹುಕಾಲದ ಗೆಳತಿ ಜೊತೆಗೆ ಸಪ್ತಪದಿ ತುಳಿಯುತ್ತಿದ್ದಾರೆ. ಇಂದು (ನವೆಂಬರ್ 16) ಮದುವೆ ನೆರವೇರುತ್ತಿದ್ದು, ತುಂಬ ಖಾಸಗಿಯಾಗಿ ಈ ವಿವಾಹವು ನಡೆಯುತ್ತಿದೆ. ಕುಟುಂಬ ಸದಸ್ಯರು ಮತ್ತು ಕೆಲವೇ ಕೆಲವು ಆಪ್ತರು ಮಾತ್ರ ಮದುವೆಗೆ ಸಾಕ್ಷಿ ಆಗಲಿದ್ದು, ಕಳೆದ ಎರಡ್ಮೂರು ದಿನಗಳಿಂದಲೇ ಮದುವೆ ಶಾಸ್ತ್ರಗಳು ಆರಂಭವಾಗಿದ್ದವು.
ಸಂದರ್ಶನದಲ್ಲಿ ವಾಸುಕಿ ವೈಭವ್, “ನಾನು ನನ್ನ ಜೀವನದ ಪ್ರೀತಿಯನ್ನು ಮದುವೆಯಾಗುತ್ತಿದ್ದೇನೆ. ರಂಗಭೂಮಿ ಹಿನ್ನೆಲೆಯ ಬೃಂದಾ ವಿಕ್ರಮ್, ಶಿಕ್ಷಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಖಾಸಗಿಯಾಗಿ ಮದುವೆ ಆಗಬೇಕು ಎಂದಿದ್ದೇವೆ. ಆದ್ದರಿಂದ ಮದುವೆಯ ವಿವರಗಳನ್ನು ನಾವು ಗೌಪ್ಯವಾಗಿಡಲು ಬಯಸಿದ್ದೇವೆ” ಎಂದು ವಾಸುಕಿ ಹೇಳಿದ್ದಾರೆ. ಕಳೆದ ವಾರ ಚಪ್ಪರ ಪೂಜೆಯೊಂದಿಗೆ ಮದುವೆಗೆ ಶಾಸ್ತ್ರಗಳು ಆರಂಭವಾಗಿವೆ. ಸದ್ಯ ಮದುವೆಗಾಗಿ ಕೆಲ ಸಮಯ ಸಿನಿಮಾ ಕೆಲಸಗಳಿಂದ ವಾಸುಕಿ ಬ್ರೇಕ್ ತೆಗೆದುಕೊಂಡಿದ್ದಾರಂತೆ.
ವಾಸುಕಿ ವೈಭವ್ “ನನ್ನ ಎಲ್ಲಾ ಸೋದರಸಂಬಂಧಿಗಳು ಮತ್ತು ಬಂಧುಗಳು ಮನೆಯಲ್ಲಿದ್ದಾರೆ. ಇಡೀ ಕುಟುಂಬವು ಸುತ್ತಲೂ ಇರುವುದು ತುಂಬಾ ಒಳ್ಳೆಯದು. ಮದುವೆಯ ನಂತರ ನಮಗೆ ಸಾಮಾನ್ಯ ಆರತಕ್ಷತೆ ಅಥವಾ ಅಂತಹ ಯಾವುದೇ ದೊಡ್ಡ ಕಾರ್ಯಕ್ರಮ ಇರುವುದಿಲ್ಲ. ಆದರೆ ಈ ನಮ್ಮ ಬಹುಮುಖ್ಯವಾದ ದಿನದಂದು ನಮ್ಮ ಹತ್ತಿರದವರು ಮತ್ತು ಆತ್ಮೀಯರು ನಮ್ಮನ್ನು ಸುತ್ತ ಇರುವುದು ನಮಗೆ ಸಂತೋಷವಾಗಿದೆ. ನಮ್ಮಿಬ್ಬರ ಇಷ್ಟದಂತೆ ನಮ್ಮ ಮದುವೆಯು ಸಾಂಪ್ರದಾಯಿಕವಾಗಿರುತ್ತದೆ” ಎಂದು ತಿಳಿಸಿದ್ದಾರೆ.
30 ವರ್ಷದ ವಾಸುಕಿ ವೈಭವ್ ಸದ್ಯ ಕನ್ನಡ ಚಿತ್ರರಂಗದ ಬೇಡಿಕೆಯ ಸಂಗೀತ ನಿರ್ದೇಶಕರಲ್ಲೊಬ್ಬರಾಗಿದ್ದು, 2016ರಲ್ಲಿ ತೆರೆಕಂಡ ‘ರಾಮಾ ರಾಮಾ ರೇ’ ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಅವರು ಕನ್ನಡ ಚಿತ್ರರಂಗಕ್ಕೆ ಪರಿಚಿತಗೊಂಡರು ವಾಸುಕಿ. ಆನಂತರ ‘ಸ ಹಿ ಪ್ರಾ ಶಾಲೆ, ಕಾಸರಗೋಡು’, ‘ಒಂದಲ್ಲಾ ಎರಡಲ್ಲಾ’, ‘ಬಡವ ರಾಸ್ಕಲ್’, ‘ಹರಿಕಥೆ ಅಲ್ಲ ಗಿರಿಕಥೆ’, ‘ಟಗರು ಪಲ್ಯ’, ‘ತತ್ಸಮ ತದ್ಭವ’ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.