ಶಾಂತಿ ಕದಡಬೇಡಿ: ಬಜರಂಗದಳಕ್ಕೆ ಸಚಿವ ಪರಮೇಶ್ವರ್‌ ಎಚ್ಚರಿಕೆ

ಬೆಂಗಳೂರು (ನ.18): ಬಜರಂಗದಳದವರು ಆಗಿರಲಿ ಯಾವುದೇ ಸಂಘ-ಸಂಸ್ಥೆಯಾಗಿರಲಿ ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನಗಳು ಮಾಡಬಾರದು. ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುವುದಾಗಿ ಪ್ರಣಾಳಿಕೆಯಲ್ಲೇ ಹೇಳಿದ್ದೇವೆ. ಇದರ ವಿರುದ್ಧ ನಡೆದುಕೊಳ್ಳುವವರ ವಿರುದ್ಧ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಪುತ್ತೂರಿನಲ್ಲಿ ಬಜರಂಗದಳದವರ ಗಡಿಪಾರಿಗೆ ನೋಟಿಸ್‌ ವಿಚಾರವಾಗಿ ಸಚಿವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.  ಬಜರಂಗದಳ ಆಗಲಿ ಯಾರೇ ಆಗಲಿ ಕಾನೂನಿನ ಚೌಕಟ್ಟಿನಲ್ಲಿ ತಮ್ಮ ಚಟುವಟಿಕೆ ನಡೆಸಿದರೆ ನಮ್ಮ ಸಹಕಾರ ಇರುತ್ತದೆ.

ಇಲ್ಲದಿದ್ದರೆ ಪೊಲೀಸ್‌ ಇಲಾಖೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ. ಯಾರೂ ಸಹ ಕಾನೂನನ್ನು ಹೊರತು ಪಡಿಸಿ ಕೆಲಸ ಮಾಡಲಾಗಲ್ಲ. ಇಲಾಖೆಯವರೂ ಸಹ ಅಷ್ಟೇ ಎಂದರು. ಕಾನೂನು ವಿರುದ್ಧವಾಗಿ ನಡೆದುಕೊಳ್ಳುವವರ ಬಗ್ಗೆ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆ ಇದೆ. ದುರುದ್ದೇಶದಿಂದ ಯಾವ ಪೊಲೀಸ್ ಕೂಡ ಕ್ರಮ ಕೈಗೊಳ್ಳುವುದಿಲ್ಲ. ನಮ್ಮ ಸರ್ಕಾರ ಇರುವುದು ಶಾಂತಿ ಕಾಪಾಡುವುದಕ್ಕಾಗಿದೆ. ಸರ್ವಜನಾಂಗದ ಶಾಂತಿಯ ತೋಟವನ್ನು ಕಾಪಾಡಬೇಕು ಎಂಬುದನ್ನು ನಮ್ಮ ಪ್ರಣಾಳಿಕೆಯಲ್ಲಿಯೇ ಹೇಳಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದರು. ಪರೀಕ್ಷೆಯಲ್ಲಿ ಹಿಜಾಬ್ ಧರಿಸಲು ಅವಕಾಶ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಜಾಬ್ ವಿಚಾರದಲ್ಲಿ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

 

ಸ್ವತಂತ್ರ ಸಂಸ್ಥೆಯಿಂದ ಆದಷ್ಟು ಬೇಗ ಪಿಎಸ್‌ಐ ಪರೀಕ್ಷೆ: ಪಿಎಸ್‌ಐ ನೇಮಕಾತಿ ಪರೀಕ್ಷೆ ಬಗೆಗಿನ ಹೈಕೋರ್ಟ್ ಆದೇಶ ಪ್ರತಿ ನನ್ನ ಕೈ ಸೇರಿಲ್ಲ. ಸ್ವತಂತ್ರ ಸಂಸ್ಥೆ ಮೂಲಕ ಮರು ಪರೀಕ್ಷೆ ನಡೆಸಲು ಸೂಚಿಸಿರುವುದಾಗಿ ತಿಳಿದುಬಂದಿದೆ. ಪರೀಕ್ಷೆ ಸಿದ್ಧತೆಗಾಗಿ ಓದಲು ಸಮಯಾವಕಾಶ ಕೊಡುವಂತೆ ಅಭ್ಯರ್ಥಿಗಳು ಕೇಳುತ್ತಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿ ಮರು ಪರೀಕ್ಷೆ ನಡೆಸುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ ಕೋರ್ಟ್ ಹೊರಡಿಸಿರುವ ಸಂಪೂರ್ಣ ಆದೇಶವನ್ನು ನಾನು ನೋಡಿಲ್ಲ. ಈ ಬಗ್ಗೆ ಅಡ್ವೊಕೇಟ್ ಜನರಲ್ ಜೊತೆ ಮಾತನಾಡಿದ್ದೇನೆ. ಸ್ವತಂತ್ರ ಸಂಸ್ಥೆಯಿಂದ ಆದಷ್ಟು ಬೇಗ ಪರೀಕ್ಷೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇನ್ನು ನಮಗೆ ಓದಲು ಸಮಯ ಕೊಡಿ ಎಂದು ಅಭ್ಯರ್ಥಿಗಳು ಕೇಳುತ್ತಿದ್ದಾರೆ. ಅದನ್ನೂ ಪರಿಗಣಿಸುತ್ತೇವೆ. ನೇಮಕಾತಿ ಬಳಿಕ ಅವರಿಗೆ ತರಬೇತಿ ನೀಡಬೇಕಾಗುತ್ತದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಯಾವ ರೀತಿ ಮಾಡಬೇಕೆಂದು ತೀರ್ಮಾನಿಸುತ್ತೇವೆ ಎಂದು ಮಾಹಿತಿ ನೀಡಿದರು. ತರಬೇತಿ ಮುಗಿಸಿಕೊಂಡು ನೂತನ ಪಿಎಸ್‌ಐಗಳು ಸೇವೆಗೆ ಲಭ್ಯವಾಗುವುದು ತಡವಾಗುತ್ತದೆ. ಹೀಗಾಗಿ 500-600 ಮಂದಿಗೆ ಬಡ್ತಿ ನೀಡಿ ಪಿಎಸ್ಐ ಸ್ಥಾನಕ್ಕೆ ನೇಮಿಸಿದ್ದೇವೆ. ಜತೆಗೆ ಈಗ ಪರೀಕ್ಷೆ ನಡೆಸಬೇಕಾದ 545 ಹುದ್ದೆ ಜತೆಗೆ ಇನ್ನೂ 400 ಹುದ್ದೆ ಖಾಲಿಯಿದ್ದು, ಆ ಹುದ್ದೆಗಳಿಗೆ ಒಟ್ಟಿಗೆ ಪರೀಕ್ಷೆ ನಡೆಸಬೇಕಾ? ಅಥವಾ ಪ್ರತ್ಯೇಕವಾಗಿ ಮಾಡಬೇಕಾ ಎಂಬ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *