ಉದ್ದು, ಹೆಸರು ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ
ಕಲಬುರಗಿ: ಸರ್ಕಾರ ಕೂಡಲೇ ರೈತರು ಬೆಳೆದಿರುವ ಉದ್ದು, ಹೆಸರು ಖರೀದಿ ಕೇಂದ್ರ ಆರಂಭಿಸಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಆಗ್ರಹಿಸಿದ್ದಾರೆ.
ಈಗಾಗಲೇ ಹೆಸರು, ಉದ್ದು ಮಾರುಕಟ್ಟೆಗೆ ಬಂದಿದ್ದು,ದಳ್ಳಾಳಿಗಳ ಹಾವಳಿಯಿಂದ ರೈತರಿಗೆ ಹೆಚ್ಚಿನ ಬೆಲೆ ಸಿಗುತ್ತಿಲ್ಲ.ಬೆಳೆ ಕಟಾವಿಗೆ ಮೊದಲೇ ಸರ್ಕಾರ ಖರೀದಿ ಕೇಂದ್ರ ಆರಂಭಿಸಬೇಕು.ಆದರೆ ಮಾರುಕಟ್ಟೆಗೆ ಬೆಳೆ ಬಂದು ದಿನಗಳೇ ಕಳೆದರೂ ಸರಕಾರ ಖರೀದಿ ಕೇಂದ್ರ ಆರಂಭಕ್ಕೆ ಮೀನಾ ಮೇಷ ಮಾಡುತ್ತಿದೆ.ಪ್ರತಿ ವರ್ಷವು ಖರೀದಿ ಕೇಂದ್ರ ಆರಂಭಕ್ಕೆ ವಿಳಂಬ ನೀತಿ ಅನುಸರಿಸುತ್ತಿದೆ.ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.ಹೆಸರಿನ ರಾಶಿ ಪ್ರಾರಂಭವಾಗಿ ಬೆಳೆದಷ್ಟು ಪ್ರಮಾಣದ ಬೆಳೆ ಸಂಗ್ರಹಿಸಿಡಲು ಸೌಲಭ್ಯವಿಲ್ಲದೆ ಮತ್ತು ತುರ್ತು ಅಗತ್ಯ ಇರುವುದರಿಂದ ರೈತರು ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.ಇದರಿಂದ ಅವರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.ಆದರೂ ಸರಕಾರಿ ಸಂಸ್ಥೆಗಳು ಮಾರುಕಟ್ಟೆ ಪ್ರವೇಶಿಸಿಲ್ಲ ಈ ಅತಿವೃಷ್ಟಿಯಿಂದ ಹೆಸರು ಮತ್ತು ಉದ್ದು ಬೆಳೆ ಕೆಲವೆಡೆ ಹಾಳಾಗಿವೆ.ಇದ್ದಬದ್ದ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಟ್ಟಿದ್ದಾರೆ.ಆದ್ದರಿಂದ.ಕೂಡಲೇ ಜಿಲ್ಲೆಯಾದ್ಯಂತ ಉದ್ದು ಹಾಗೂ ಹೆಸರು ಖರೀದಿ ಕೇಂದ್ರ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.