ಜಮ್ಮು & ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದು ಸರಿ: ಕೇಂದ್ರದ ನಿಲುವಿಗೆ ಸುಪ್ರೀಂ ಸಹಮತ

ಹೈಲೈಟ್ಸ್‌:

  • ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಲಾಗಿದ್ದ ಸಂವಿಧಾನದ ಆರ್ಟಿಕಲ್ 370 ವಿಧಿ
  • 2019ರಲ್ಲಿ ಆರ್ಟಿಕಲ್ 370 ವಿಧಿ ರದ್ದು ಮಾಡಿದ್ದ ಕೇಂದ್ರ ಸರ್ಕಾರ
  • ಆರ್ಟಿಕಲ್ 370 ಅಡಿ ವಿಶೇಷಾಧಿಕಾರ ನೀಡಿಕೆ ಕೇವಲ ತಾತ್ಕಾಲಿಕ ನಿರ್ಧಾರವಷ್ಟೇ ಆಗಿತ್ತು ಎಂದಿರುವ ಸುಪ್ರೀಂ ಕೋರ್ಟ್‌

ಹೊಸ ದಿಲ್ಲಿಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಲಾಗಿದ್ದ ಸಂವಿಧಾನದ ಆರ್ಟಿಕಲ್ 370 ವಿಧಿ ರದ್ದು ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ಸರಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆರ್ಟಿಕಲ್ 370 ಅಡಿ ವಿಶೇಷಾಧಿಕಾರ ನೀಡಿಕೆ ಕೇವಲ ತಾತ್ಕಾಲಿಕ ನಿರ್ಧಾರವಷ್ಟೇ ಆಗಿತ್ತು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಯುದ್ಧದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಲಾಗಿತ್ತು ಎಂದಿರುವ ಸುಪ್ರೀಂ ಕೋರ್ಟ್‌, ಆರ್ಟಿಕಲ್ 370 ರದ್ದತಿಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿದೆ.

ಇನ್ನು ಕೇಂದ್ರ ಸರ್ಕಾರಕ್ಕೆ, ರಾಷ್ಟ್ರಪತಿಗಳಿಗೆ ಆರ್ಟಿಕಲ್ 370 ರದ್ದತಿ ಅಧಿಕಾರ ಇದೆ. ರಾಷ್ಟ್ರಪತಿಗಳ ನಿರ್ಧಾರವೂ ಸುಪ್ರೀಂ ಕೋರ್ಟ್‌ನ ಪರಾಮರ್ಶೆಗೆ ಒಳಪಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಇದ್ದಾಗ ರಾಜ್ಯದಲ್ಲಿ ವಿಧಾನಸಭೆಯೇ ಇರಲಿಲ್ಲ ಎಂದು ಭಾವಿಸಬಾರದು ಎಂದಿರುವ ಸುಪ್ರೀಂ ಕೋರ್ಟ್‌, ಕರ್ನಾಟಕದ ಎಸ್‌. ಆರ್. ಬೊಮ್ಮಾಯಿ ಪ್ರಕರಣ ಉಲ್ಲೇಖಿಸಿದೆ. ಅಷ್ಟೇ ಅಲ್ಲ, ಸೆಪ್ಟೆಂಬರ್‌ 30ರ ಒಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಬೇಕು ಹಾಗೂ ಆದಷ್ಟು ಬೇಗ ರಾಜ್ಯದ ಸ್ಥಾನಮಾನ ನೀಡಬೇಕು ಎಂದೂ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಸಂವಿಧಾನದ ಆರ್ಟಿಕಲ್ 370 ವಿಧಿಯನ್ನು 2019ರಲ್ಲಿ ರದ್ದು ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಸರ್ವೋಚ್ಛ ನ್ಯಾಯಾಲಯ ಈ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕೃಷ್ಣ ಕೌಲ್, ಸಂಜೀವ್ ಖನ್ನಾ, ಬಿ. ಆರ್. ಗವಾಯಿ ಹಾಗೂ ಜಸ್ಟೀಸ್ ಸೂರ್ಯ ಕಾಂತ್ ಅವರಿದ್ದ ಪೀಠ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ರದ್ದು ಮಾಡಿದ್ದ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರಾಂತ್ಯಗಳನ್ನು ವಿಭಜಿಸಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿತ್ತು. ಈ ಭಾಹಗಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನಗಳನ್ನೂ ರದ್ದು ಮಾಡಿತ್ತು.

ಕೇಂದ್ರದ ಈ ನಿಲುವು ಪ್ರಶ್ನಿಸಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ರಚನೆ ಮಾಡಿತ್ತು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಸಾರಥ್ಯದ ಪೀಠವು ಪ್ರಕರಣದ ಕುರಿತಾಗಿ ಸಮಗ್ರ ವಿಚಾರಣೆ ನಡೆಸಿತ್ತು. 16 ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಸೆಪ್ಟೆಂಬರ್ 5 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ರದ್ದು ಮಾಡಲು ಸಾಧ್ಯವಿಲ್ಲ ಎಂದು ಪ್ರತಿವಾದಿಗಳು ವಾದಿಸಿದ್ದರು. 1957 ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ ವಿಧಿ 370 ಅಡಿ ವಿಶೇಷ ಅಧಿಕಾರ ಜಾರಿಯಲ್ಲಿತ್ತು. ಆದರೆ, 2019ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆಯೇ ಇಲ್ಲದ ವೇಳೆ ವಿಶೇಷಾಧಿಕಾರ ರದ್ದು ಪಡಿಸಿದ್ದು ಏಕೆ ಎಂದು ಪ್ರತಿವಾದಿಗಳು ಪ್ರಶ್ನಿಸಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *