Raichur: ಹಾಸ್ಟೆಲ್ ವಿದ್ಯಾರ್ಥಿನಿಯರ ವಿರುದ್ಧ ವಾರ್ಡನ್ ಅಶ್ಲೀಲ ವಿಡಿಯೋ ಆರೋಪ, ನೀರಿನ ಸಮಸ್ಯೆಗೆ ಬಿಗ್ ಟ್ವಿಸ್ಟ್!
ರಾಯಚೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯದಲ್ಲಿ ನೀರು ಇಲ್ಲದಿರುವುದನ್ನು ಖಂಡಿಸಿ ವಿದ್ಯಾರ್ಥಿನಿಯರು ಬುಧವಾರ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಂದು ಹಾಸ್ಟೆಲ್ ವಾರ್ಡನ್ ನಿನ್ನೆ ಪ್ರತಿಭಟನೆ ಮಾಡಿದ ವಿದ್ಯಾರ್ಥಿನಿಯರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಹಾಸ್ಟೆಲ್ ಗಿರಿಜಾ ವಿದ್ಯಾರ್ಥಿನಿಯರ ವಿರುದ್ಧ ಅಶ್ಲೀಲ ವಿಡಿಯೋ ಆರೋಪ ಮಾಡಿದ್ದಾರೆ. ‘ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರು ಡ್ರೆಸ್ ಚೇಂಜ್ ಮಾಡುವಾಗ ವಿಡಿಯೋ ಕಾಲ್ ಮಾಡುತ್ತಾರೆ. ಒಬ್ಬಳು ಡ್ರೆಸ್ ಚೇಂಜ್ ಮಾಡ್ತಾಯಿದ್ದರೆ ಇನ್ನೊಬ್ಬಳು ವಿಡಿಯೋ ಕಾಲ್ ಮಾಡುತ್ತಾಳೆ. ಅಶ್ಲೀಲ ವಿಡಿಯೋ ಕಾಲ್ ಮಾಡಲಿಕ್ಕಾ ವಿದ್ಯಾರ್ಥಿನಿಯರು ಬರೋದು?’ ಎಂದು ಗಿರಿಜಾ ವಿದ್ಯಾರ್ಥಿನಿಯರ ಮೇಲೆ ಪ್ರತ್ಯಾರೋಪ ಮಾಡಿದ್ದಾರೆ.
ಜೊತೆಗೆ ‘ವಿದ್ಯಾರ್ಥಿನಿಯರ ಬಾಯ್ ಫ್ರೆಮಡ್ಗಳಿಂದ ನನಗೆ ಧಮ್ಕಿ ಹಾಕಲಾಗುತ್ತಿದೆ. ನನ್ನೊಂದಿಗೆ ವಿದ್ಯಾರ್ಥಿನಿಯರ ಬಾಯ್ ಫ್ರೆಂಡ್ಗಳು ಜಗಳಕ್ಕೆ ಬಂದಿದ್ದಾರೆ’ ಎಂದು ವಾರ್ಡನ್ ಗಿರಿಜಾ ಆರೋಪ ಮಾಡಿದ್ದಾರೆ. ಆಶ್ಲೀಲ ವಿಡಿಯೋ ಕಾಲ್ ಆರೋಪಕ್ಕೆ ಕೆರಳಿದ ವಿದ್ಯಾರ್ಥಿನಿಯರು ಇಂದು ಮತ್ತೆ ವಾರ್ಡನ್ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.
ಅಷ್ಟಕ್ಕೂ ಏನಿದು ಘಟನೆ? ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿನಿಲಯದಲ್ಲಿ ಕಳೆದ ಒಂದು ತಿಂಗಳಿಂದ ವಾರ್ಡನ್ ಸಮರ್ಪಕ ನೀರು ಪೂರೈಕೆಗೆ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಅವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲಿ. ವಾರ್ಡನ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದರು. ಮಂಗಳವಾರ ಸಂಜೆ ಈ ಬಗ್ಗೆ ಮಾಧ್ಯಮದವರು ವಸತಿ ನಿಲಯಕ್ಕೆ ಭೇಟಿ ಣೀಡಿ ವರದಿಗೆ ಮುಂದಾಗಿದ್ದರು. ಮಾಧ್ಯಮದವರಿಗೆ ನೀವೇ ಮಾಹಿತಿ ನೀಡಿದ್ದೀರಿ ಎಂದು ವಾರ್ಡನ್ ಆರೋಪಿಸಿ ಕೆಲ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಅವರಿಗೆ ರಾತ್ರಿ ಊಟ ಮತ್ತು ಬೆಳಗಿನ ಉಪಾಹಾರ ಮತ್ತು ಊಟ ನೀಡದೆ ತೊಂದರೆ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ವಾರ್ಡನ್ ಬೇಕು ಎಂದು ಆಗ್ರಹ: ಪ್ರತಿಭಟನೆ ನಿರತ ವಿದ್ಯಾರ್ಥಿನಿಯರದು ವಾರ್ಡನ್ ಬೇಡ ಎನ್ನುವುದು ಒಂದು ಗುಂಪಾದರೆ. ನಮಗೂ ನೀರು ಬೇಕು. ಆದರೆ, ವಾರ್ಡನ್ ಸಹ ಇರಬೇಕು ಎನ್ನುವುದು ವಿದ್ಯಾರ್ಥಿನಿಯರ ಇನ್ನೊಂದು ಗುಂಪು ವಸತಿ ನಿಲಯದ ಬಾಗಿಲ ಬಳಿ ಕೂಳಿತುಕೊಂಡು ಪ್ರತಿಭಟನೆ ನಡೆಸಿ ಅವರೂ ಸಹ ಘೋಷಣೆಗಳನ್ನು ಕೂಗಿದ್ದು ಕಂಡುಬಂದಿತು. ಒಂದು ಹಂತದಲ್ಲಿ ವಾರ್ಡನ್ ಪರ ಮತ್ತು ವಿರೋಧ ಘೋಷಣೆಗಳನ್ನು ಕೇಳಿ ಬಂದಿವೆ.