ಸೂರತ್‌ನಲ್ಲಿಇಂದು ವಿಶ್ವದ ಬೃಹತ್ ಕಚೇರಿ ಉದ್ಘಾಟನೆ: ಡೈಮಂಡ್ ಬೋರ್ಸ್ ಕಟ್ಟಡ ಮೋದಿಯಿಂದ ಲೋಕಾರ್ಪಣೆ
ಸೂರತ್ (ಡಿಸೆಂಬರ್ 17, 2023): ವಜ್ರೋದ್ಯಮದಲ್ಲಿ ವಿಶ್ವದ ಮುಂಚೂಣಿ ನಗರಗಳ ಪೈಕಿ ಒಂದಾದ ಗುಜರಾತ್‌ನ ಸೂರತ್ ನಗರಕ್ಕೆ ಇದೀಗ ಮತ್ತೊಂದು ದಾಖಲೆಯ ಗರಿ ಸಿಕ್ಕಿದೆ. ಭಾನುವಾರ ವಿಶ್ವದ ಬೃಹತ್ ಕಚೇರಿ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಸೂರತ್‌ನ ವಜ್ರದ ಅಭ್ಯುದಯಕ್ಕೆಂದು ಮತ್ತು ಒಂದೇ ಸೂರಿನಲ್ಲಿ ವಜ್ರೋದ್ಯಮ ಸಂಬಂಧಿತ ಎಲ್ಲಾ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಬೇಕೆಂದು ನಿರ್ಮಿಸಲಾಗಿರುವ ‘ಡೈಮಂಡ್ ಬೋರ್ಸ್’ ಹೆಸರಿನ ಹೊಸ ಕಟ್ಟಡವು, ಈಗ ‘ವಿಶ್ವದಲ್ಲೇ ಅತ್ಯಂತ ದೊಡ್ಡ ಕಚೇರಿ ಸಮುಚ್ಚಯ’ ಎಂಬ ಹಿರಿಮೆಗೆ ಪಾತ್ರವಾಗಿದೆ. ಈ ಮೂಲಕ ಕಳೆದ 80 ವರ್ಷಗಳಿಂದ ಈ ಹಿರಿಮೆ ಹೊಂದಿದ್ದ ಅಮೆರಿಕ ರಕ್ಷಣಾ ಇಲಾಖೆಯ ‘ಪೆಂಟಗನ್’ ಕಚೇರಿಯ ದಾಖಲೆ ಮುರಿದಿದೆ.
ಕಟ್ಟಡವನ್ನು 35 ಎಕರೆ ಜಾಗದಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ 71 ಲಕ್ಷ ಚದರಡಿಯಷ್ಟು ಕಚೇರಿ ಬಳಕೆಗೆ ಲಭ್ಯವಾದ ಪ್ರದೇಶವಿದೆ. ಇದರಲ್ಲಿ 4 ಸಾವಿರಕ್ಕೂ ಹೆಚ್ಚು ಕಚೇರಿಗಳು ಇರಲಿವೆ. ಇದಲ್ಲದೇ ಮನರಂಜನೆ ಮತ್ತು ಆಹಾರ ತಾಣಗಳಿಗೂ ಪ್ರತ್ಯೇಕ ಸ್ಥಳಾವಕಾಶ ಒದಗಿಸಲಾಗಿದೆ. ಬ್ಯಾಂಕ್, ರೀಟೇಲ್ ಸ್ಟೋರ್ ಕಾನ್ಫರೆನ್ಸ್ ಹಾಲ್ ಸೇರಿದಂತೆ ವಿವಿಧ ಸೌಲಭ್ಯಗಳು ಸಿಗಲಿವೆ. ಈ ಕಟ್ಟಡದಲ್ಲಿ 65 ಸಾವಿರಕ್ಕೂ ಹೆಚ್ಚು ಜನರು ಕಾರ್ಯನಿರ್ವಹಿಸಬಹುದು.
- 35 ಎಕರೆ: ಸೂರತ್ ಕಟ್ಟಡ ತಲೆಯೆತ್ತಿದ ಜಾಗದ ವ್ಯಾಪ್ತಿ
- 71 ಲಕ್ಷ ಚದರಡಿ: ಸೂರತ್ ಕಟ್ಟಡ ಹೊಂದಿರುವ ಫ್ಲೋರ್ ಸ್ಪೇಸ್
- 65 ಸಾವಿರ ಜನ: ಈ ಕಟ್ಟಡದಲ್ಲಿ 65 ಸಾವಿರ ಜನರು ಒಟ್ಟಿಗೇ ಕೆಲಸ ಮಾಡುವಷ್ಟು ಜಾಗ
- 20 ಲಕ್ಷ ಚದರಡಿ: ವಾಹನ ನಿಲ್ಲಿಸಲು ಇರುವ ಪಾರ್ಕಿಂಗ್ ಸ್ಥಳಾವಕಾಶ