ಅಯೋಧ್ಯೆಗೆ ದೇಶದ ವಿವಿಧ ಕಡೆಯಿಂದ 1,000 ರೈಲು! ಮಂದಿರ ಉದ್ಘಾಟನೆ ಬಳಿಕ 100 ದಿನ ಸಂಚಾರ

ನವದೆಹಲಿ (ಡಿಸೆಂಬರ್ 17, 2023): ಶ್ರೀ ರಾಮಮಂದಿರ ಉದ್ಘಾಟನೆಯಾದ ಮೊದಲ 100 ದಿನ ಕಾಲ ಅಯೋಧ್ಯೆಗೆ ದೇಶದ ವಿವಿಧ ಭಾಗಗಳಿಂದ 1000 ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸಿದೆ.

ಜನವರಿ 22ರಂದು ಮಂದಿರದ ಉದ್ಘಾಟನೆ ನಡೆಯಲಿದ್ದು, ಜನವರಿ 23ರಿಂದ ಭಕ್ತರಿಗೆ ದೇವಾಲಯ ತೆರೆಯಲಿದೆ. ಅದಕ್ಕೂ 4 ದಿನ ಮುಂಚೆಯೇ ಅಂದರೆ ಜನವರಿ 19ರಿಂದ ಈ ರೈಲುಗಳ ಕಾರ್ಯಾಚರಣೆ ಆರಂಭವಾಗಲಿದೆ.

ರೈಲು ಎಲ್ಲಿಂದ?:
ಈ ರೈಲುಗಳು ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ, ಕೋಲ್ಕತಾ, ನಾಗ್ಪುರ, ಲಖನೌ ಮತ್ತು ಜಮ್ಮು ಸೇರಿದಂತೆ ವಿವಿಧ ನಗರಗಳಿಂದ ಅಯೋಧ್ಯೆಗೆ ರೈಲುಗಳು ಸಂಚರಿಸಲಿವೆ. ರಾಮನ ದರ್ಶನ ಮಾಡಿದ ಭಕ್ತರು ಇದೇ ರೈಲುಗಳಲ್ಲಿ ತಮ್ಮ ಸ್ವಂತ ಊರುಗಳಿಗೆ ಮರಳಬಹುದಾಗಿದೆ. ಬೇಡಿಕೆಗೆ ಅನುಗುಣವಾಗಿ ರೈಲು ಸಂಚರಿಸಲಿವೆ ಎಂದು ಮೂಲಗಳು ತಿಳಿಸಿವೆ.

ಅಯೋಧ್ಯೆ ರೈಲು ನಿಲ್ದಾಣವನ್ನು ನವೀಕರಿಸಲಾಗುತ್ತಿದ್ದು, ದಿನಕ್ಕೆ 50 ಸಾವಿರ ಜನರು ಸಂಚರಿಸುವ ಸಾಮರ್ಥ್ಯ ಹೊಂದಲಿದೆ. ಜನವರಿ 15ರಂದು ನವೀಕೃತ ರೈಲು ನಿಲ್ದಾಣ ಸೇವೆಗೆ ಲಭ್ಯವಾಗಲಿದೆ ಎಂದೂ ತಿಳಿದುಬಂದಿದೆ.

ಇದೇ ವೇಳೆ, ಯಾತ್ರಾರ್ಥಿಗಳು ಅಯೋಧ್ಯೆಗೆ ತಮ್ಮದೇ ಆದ ಬಾಡಿಗೆ ರೈಲನ್ನೂ ಬುಕ್‌ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಇನ್ನು ಉದ್ಘಾಟನೆಯ ಆಸುಪಾಸಿನಲ್ಲಿ ಅಯೋಧ್ಯೆಯಲ್ಲಿ ಭಾರಿ ಸಂಖ್ಯೆಯ ಭಕ್ತರು ಆಗಮಿಸಲಿರುವ ಕಾರಣ, ಭಕ್ತಾದಿಗಳಿಗೆ ಐಆರ್‌ಸಿಟಿಸಿ, ತಿಂಡಿ-ಊಟದ ಸೌಲಭ್ಯವನ್ನೂ ಕಲ್ಪಿಸಲಿದೆ.

ಇನ್ನು ರಾಮನ ಜನ್ಮಸ್ಥಳಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ಪವಿತ್ರ ಸರಯೂ ನದಿಯಲ್ಲಿ ವಿದ್ಯುತ್ ಕ್ಯಾಟಮರನ್‌ನಲ್ಲಿ (ವಿಲಾಸಿ ಹಡಗು) ಸಂಚರಿಸಬಹುದಾಗಿದೆ. ಕ್ಯಾಟಮರನ್ 100 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *