ಕೇರಳದಲ್ಲಿ JN.1 ಕೋವಿಡ್‌ ಹೊಸ ತಳಿಯ ಆತಂಕ: ಕರ್ನಾಟಕದಲ್ಲಿ ಮುನ್ನೆಚ್ಚರಿಕೆ ಕ್ರಮ

ಹೈಲೈಟ್ಸ್‌:

  • ಕೇರಳದಲ್ಲಿ 79 ವರ್ಷದ ವೃದ್ಧೆಗೆ ಒಮಿಕ್ರಾನ್‌ ರೂಪಾಂತರಿ ‘ಜೆಎನ್‌.1’ ಸೋಂಕು ಪತ್ತೆ
  • ವಿವಿಧ ದೇಶಗಳಲ್ಲಿ ಮತ್ತೆ ಆತಂಕ ಮೂಡಿಸಿರುವ ತಳಿಯ ಮೊದಲ ಪ್ರಕರಣ ಭಾರತದಲ್ಲಿ
  • ಕೋವಿಡ್ ಏರಿಕೆ ಸನ್ನಿವೇಶ ಎದುರಿಸಲು ಕರ್ನಾಟಕದ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆ

ಹೊಸದಿಲ್ಲಿ: ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಆತಂಕ ಮೂಡಿಸಿರುವ ಕೋವಿಡ್‌-19 ವೈರಾಣುವಿನ ಹೊಸ ರೂಪಾಂತರಿ ‘ಜೆಎನ್‌.1’ (ಒಮಿಕ್ರಾನ್‌ ಉಪತಳಿ) ಕೇರಳದ ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದೆ. ಇಂಥ ಪ್ರಕರಣವು ಭಾರತದಲ್ಲಿ ಮೊದಲ ಬಾರಿ ವರದಿಯಾಗಿದೆ. ಸೋಂಕಿನ ಲಕ್ಷಣಗಳು ಸೌಮ್ಯವಾಗಿದ್ದು, ಪ್ರಾಣಾಪಾಯವಿಲ್ಲ ಎಂದು ಸ್ಥಳೀಯ ವೈದ್ಯಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

”ಶೀತ, ಜ್ವರದ ಅನಾರೋಗ್ಯ (ಐಎಲ್‌ಐ) ಸೌಮ್ಯ ಲಕ್ಷಣಗಳನ್ನು ಹೊಂದಿದ್ದ ಸುಮಾರು 79 ವರ್ಷದ ಮಹಿಳೆಯ ಸ್ಯಾಂಪಲ್‌ ಅನ್ನು ನ. 18ರಂದು ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಹಿಳೆಯಲ್ಲಿ ಜೆಎನ್‌.1 ವೈರಾಣು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಮಹಿಳೆ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ,” ಎಂದು ವೈದ್ಯರು ತಿಳಿಸಿದ್ದಾರೆ.

ಈ ಹಿಂದೆ, ಸಿಂಗಾಪುರದಿಂದ ಬಂದ ಭಾರತೀಯ ಪ್ರಯಾಣಿಕರೊಬ್ಬರಲ್ಲಿ ‘ಜೆಎನ್‌.1’ ವೈರಾಣು ಪತ್ತೆಯಾಗಿತ್ತು. ಈ ವ್ಯಕ್ತಿ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯವರಾಗಿದ್ದರು.

ಕರ್ನಾಟಕದಲ್ಲಿ ಕಟ್ಟೆಚ್ಚರ

ಕೇರಳದಲ್ಲಿ ಹೊಸ ತಳಿ ಕೋವಿಡ್ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎಚ್ಚರಿಕೆ ವಹಿಸಲಾಗುತ್ತಿದೆ. ರಾಜ್ಯದಲ್ಲಿ ಸಾಂಕ್ರಾಮಿಕ ಹರಡುವ ಸಾಧ್ಯತೆ ಇರುವುದರಿಂದ ಸಿದ್ಧತೆಯನ್ನು ಪರಿಶೀಲಿಸಲು ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಲು ಸರ್ಕಾರ ನಿರ್ಧರಿಸಿದೆ. ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್, ಔಷಧಗಳ ಸಂಗ್ರಹ, ಐಸಿಯ ಮತ್ತು ಹಾಸಿಗೆ ಸಾಮರ್ಥ್ಯಗಳ ಲಭ್ಯತೆಯ ಮೌಲ್ಯಮಾಪನ ಮಾಡಲು ಉದ್ದೇಶಿಸಲಾಗಿದೆ.

ಈ ಸಂಬಂಧ ಚರ್ಚೆ ನಡೆಸಲು ಮಂಗಳವಾರ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯ (ಟಿಎಸಿ) ಸಭೆ ಕರೆದಿರುವುದಾಗಿ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಶನಿವಾರ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಚಿವರು ಸಭೆ ನಡೆಸಿದ್ದು, ಕರ್ನಾಟಕ ವೈದ್ಯಕೀಯ ಪೂರೈಕೆ ನಿಗಮದ ಮೂಲಕ ಪರೀಕ್ಷಾ ಕಿಟ್‌ಗಳನ್ನು ಖರೀದಿಸುವಂತೆ ನಿರ್ದೇಶನ ಹೊರಡಿಸಿದ್ದಾರೆ.

ಒಂದೇ ದಿನ 339 ಪ್ರಕರಣ

ದೇಶದಾದ್ಯಂತ ಕಳೆದ 24 ಗಂಟೆಯ (ಶನಿವಾರ) ಅವಧಿಯಲ್ಲಿ 339 ಕೋವಿಡ್‌-19 ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,492ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಬ್ಬರು ಸಾವು

ಕೋಯಿಕ್ಕೋಡ್‌ನ ವಟ್ಟೋಳಿ ನಿವಾಸಿ ಕುಮಾರನ್‌ (77) ಹಾಗೂ ಕಣ್ಣೂರು ಪಾಲಕಂಡಿ ನಿವಾಸಿ ಅಬ್ದುಲ್ಲಾ (82) ಕೋವಿಡ್‌-19 ಸೋಂಕಿಗೆ ಬಲಿಯಾಗಿದ್ದಾರೆ.

ಕುಮಾರನ್‌ ಅವರು ಜ್ವರದ ಹಿನ್ನೆಲೆಯಲ್ಲಿ ಕೋಝಿಕ್ಕೋಡ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ. ಅಬ್ದುಲ್ಲಾ ಅವರು ಕಣ್ಣೂರಿನ ಪಾನೂರಿನಲ್ಲಿ ನಿಧನರಾಗಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೇರಳ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *