ಬೆಂಕಿ ಹಚ್ಚಿಕೊಳ್ಳಲು ಯೋಜಿಸಿದ್ದ ದುಷ್ಕರ್ಮಿಗಳು: ಸಂಸತ್ ದಾಳಿಯ ಮತ್ತಷ್ಟು ರೋಚಕ ಸಂಗತಿ ಬಹಿರಂಗ

ಹೈಲೈಟ್ಸ್‌:

  • ತೀವ್ರಗೊಂಡ ಆರೋಪಿಗಳ ವಿಚಾರಣೆ, ಮತ್ತಷ್ಟು ಆಘಾತಕಾರಿ ಮಾಹಿತಿ ಬಯಲಿಗೆ
  • ಹಣದುಬ್ಬರ, ನಿರುದ್ಯೋಗದಿಂದ ಬೇಸತ್ತು ಕೃತ್ಯ, ರಾಜಕೀಯ ಪಕ್ಷ ಸ್ಥಾಪಿಸಲು ಪ್ಲ್ಯಾನ್
  • ಬೆಂಕಿ ನಿರೋಧಕ ಜೆಲ್‌ಗಾಗಿ ಆನ್‌ಲೈನ್‌ನಲ್ಲಿ ಹುಡುಕಾಡಿದ ಬಳಿಕ ಯೋಜನೆ ಬದಲು

ಳೆದ ಬುಧವಾರ (ಡಿ. 12) ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಆತಂಕ ಸೃಷ್ಟಿಸುವ ಮುನ್ನ ಸಂಸತ್ತಿನ ಹೊರಗೆ ಬೆಂಕಿ ಹಚ್ಚಿಕೊಂಡು ಮಾಧ್ಯಮಗಳ ಗಮನ ಸೆಳೆಯಲು ಹಾಗೂ ಸರಕಾರಕ್ಕೆ ಸಂದೇಶ ರವಾನಿಸಲು ಆರೋಪಿಗಳು ಯೋಜನೆ ರೂಪಿಸಿದ್ದರು. ಅಲ್ಲದೇ ವ್ಯವಸ್ಥೆ ಬದಲಿಸಬೇಕೆಂಬ ಕನಸಿನೊಂದಿಗೆ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಮುಂದಾಗಿದ್ದರು. ಜತೆಗೆ, ಸಂಸತ್ತಿನೊಳಗೆ ಭಿತ್ತಿಪತ್ರಗಳನ್ನು ಹಂಚಲು ಮುಂದಾಗಿದ್ದರು. ಆದರೆ ಇವುಗಳನ್ನು ಕೈಬಿಟ್ಟು, ಬುಧವಾರ ನಡೆದಂತೆ ಸಂಸತ್ ಒಳಗೆ ಬಣ್ಣದ ಹೊಗೆಯನ್ನು ಸಿಡಿಸುವ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

‘ಹಣದುಬ್ಬರ, ನಿರುದ್ಯೋಗ ಸಮಸ್ಯೆಯಿಂದ ಬೇಸತ್ತು ವ್ಯವಸ್ಥೆಯನ್ನು ಬದಲಿಸಲು ಕ್ರಾಂತಿಕಾರಕ ಹೆಜ್ಜೆ ಇಡಬೇಕೆಂಬುದು ನಮ್ಮ ಯೋಜನೆಯಾಗಿತ್ತು. ಮಾಧ್ಯಮಗಳ ಗಮನ ಸೆಳೆಯಲು ದೇಹಕ್ಕೆ ಬೆಂಕಿ ನಿರೋಧಕ ಜೆಲ್‌ ಬಳಿದುಕೊಂಡು, ಬೆಂಕಿ ಹಚ್ಚಿಕೊಳ್ಳಲು ಯೋಜನೆ ರೂಪಿಸಿದ್ದೆವು. ಫೈರ್‌ಪ್ರೂಫ್‌ ಜೆಲ್‌ ಖರೀದಿಗೆ ಆನ್‌ಲೈನ್‌ನಲ್ಲಿ ಸಾಕಷ್ಟು ತಡಕಾಡಿದ್ದೆವು. ಆದರೆ, ಇದು ಸಿಗದ ಕಾರಣ ಯೋಜನೆ ಕೈಬಿಟ್ಟೆವು,” ಎಂದು ಆರೋಪಿಗಳು ಪೊಲೀಸ್‌ ವಿಚಾರಣೆ ವೇಳೆ ಬಾಯಿಬಿಟ್ಟಿರುವ ಸಂಗತಿ ಹೊರಬಿದ್ದಿದೆ.

ಪ್ರತಾಪ್‌ ಸಿಂಹ ಹೇಳಿಕೆ ದಾಖಲು?

ಪ್ರಕರಣದ ತನಿಖೆ ನಡೆಸುತ್ತಿರುವ ದಿಲ್ಲಿ ಪೊಲೀಸ್‌ ವಿಶೇಷ ಘಟಕವು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರಿಂದ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿದೆ. ಆರೋಪಿಗಳಾದ ಮನೋರಂಜನ್‌ ಹಾಗೂ ಸಾಗರ್‌ ಶರ್ಮಾ ಪ್ರತಾಪ್‌ ಸಿಂಹ ಅವರ ಕಚೇರಿ ನೀಡಿದ ಸಂದರ್ಶಕ ಪಾಸ್‌ ಪಡೆದುಕೊಂಡು ಲೋಕಸಭೆ ಪ್ರವೇಶಿಸಿದ್ದರು.

ದಾಳಿಯ ಮರು ಸೃಷ್ಟಿ ಸಲುವಾಗಿ ಈ ಆರೋಪಿಗಳನ್ನು ಸಂಸತ್ ಒಳಗೆ ಕರೆದೊಯ್ಯಲು ಅನುಮತಿ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

6ನೇ ಆರೋಪಿ ಅರೆಸ್ಟ್‌

ಸಂಸತ್‌ ಭದ್ರತಾ ಲೋಪ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿ ಮಹೇಶ್‌ ಕುಮಾವತ್‌ನನ್ನು ಶನಿವಾರ ದಿಲ್ಲಿ ಪೊಲೀಸ್‌ ವಿಶೇಷ ಘಟಕ ಬಂಧಿಸಿದೆ. ಆರೋಪಿಯನ್ನು ಪಟಿಯಾಲ ಹೌಸ್‌ ಕೋರ್ಟ್‌ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು 7 ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 6ಕ್ಕೆ ಏರಿದೆ. ಮನೋರಂಜನ್‌, ಸಾಗರ್‌ ಶರ್ಮಾ, ನೀಲಂ ದೇವಿ, ಅಮೋಲ್‌ ಶಿಂಧೆ, ಲಲಿತ್‌ ಝಾ, ಮಹೇಶ್‌ ಕುಮಾವತ್‌ ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲರೂ ಈಗ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ.

7ನೇ ಆರೋಪಿ ಕೈಲಾಶ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆತನನ್ನು ಇನ್ನೂ ಬಂಧಿಸಿಲ್ಲ ಎಂದು ಮೂಲಗಳು ಹೇಳಿವೆ. ಗುರುವಾರ ರಾತ್ರಿ ಲಲಿತ್‌ ಝಾ ಪೊಲೀಸರಿಗೆ ಶರಣಾಗಿದ್ದ ಸಂದರ್ಭದಲ್ಲಿ ಆತನ ಜತೆಗೆ ಸ್ನೇಹಿತ ಮಹೇಶ್‌ ಕುಮಾವತ್‌ ಕೂಡ ಇದ್ದ. ಈತನನ್ನು ವಿಚಾರಣೆಗೊಳಪಡಿಸಿದ್ದ ಪೊಲೀಸರು, ಆತ ಸಂಪೂರ್ಣ ಸಂಚಿನಲ್ಲಿ ಭಾಗಿಯಾಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಶನಿವಾರ ಬಂಧಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *