ಚೊಚ್ಚಲ ಐದು ವಿಕೆಟ್ ಸಾಧನೆಯೊಂದಿಗೆ ಚರಿತ್ರೆ ಸೃಷ್ಟಿಸಿದ ಅರ್ಷದೀಪ್ ಸಿಂಗ್!

ಹೈಲೈಟ್ಸ್‌:

  • ದಕ್ಷಿಣ ಆಫ್ರಿಕಾ ವಿರುದ್ಧ 8 ವಿಕೆಟ್ ಗೆಲುವು ಸಾಧಿಸಿದ ಟೀಮ್ ಇಂಡಿಯಾ.
  • 37 ರನ್ ನೀಡಿ 5 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಅರ್ಷದೀಪ್ ಸಿಂಗ್.
  • ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಪಡೆದ ಮೊದಲ ಟೀಮ್ ಇಂಡಿಯಾ ವೇಗಿ ಎನಿಸಿಕೊಂಡ ಯುವ ತಾರೆ.

ಜೋಹಾನ್ಸ್‌ಬರ್ಗ್: ಹರಿಣಿಗಳ ನಾಡಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಪಡೆದ ಮೊದಲ ಟೀಮ್ ಇಂಡಿಯಾ ಫಾಸ್ಟ್ ಬೌಲರ್ ಎಂಬ ದಾಖಲೆಯನ್ನು ಟೀಮ್ ಇಂಡಿಯಾದ ಯುವ ವೇಗಿ ಅರ್ಷದೀಪ್ ಸಿಂಗ್ ಸೃಷ್ಟಿಸಿದ್ದಾರೆ. ಡಿಸೆಂಬರ್ 17( ಭಾನುವಾರ) ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ತಮ್ಮ ಪಾಲಿನ 10 ಓವರ್ ಗಳಲ್ಲಿ 37 ರನ್ ನೀಡಿದ ಅರ್ಷದೀಪ್ ಸಿಂಗ್ ತಮ್ಮ ವೃತ್ತಿ ಜೀವನದಲ್ಲಿ ಚೊಚ್ಚಲ 5 ವಿಕೆಟ್ ಸಾಧನೆ ಮಾಡಿದರು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡು ಬೃಹತ್ ಮೊತ್ತ ಕಲೆ ಹಾಕಿ ಟೀಮ್ ಇಂಡಿಯಾದ ಮೇಲೆ ಒತ್ತಡ ಹಾಕುವ ದಕ್ಷಿಣ ಆಫ್ರಿಕಾ ನಾಯಕ ಏಡೆನ್ ಮಾರ್ಕ್ರಮ್ ಅವರ ರಣತಂತ್ರವನ್ನು ಯುವ ಎಡಗೈ ವೇಗಿ ಅರ್ಷದೀಪ್ ಸಿಂಗ್ ತಮ್ಮ ಮೊದಲ ಓವರ್ ನಲ್ಲೇ ತಲೆಕೆಳಗೆ ಮಾಡಿದರು. ಆರಂಭಿಕ ಆಟಗಾರ ರೀಝಾ ಹೆಂಡ್ರಿಕ್ಸ್ ಹಾಗೂ ರಾಸಿ ವ್ಯಾನ್ ಡೆರ್ ಡುಸೆನ್ ಅವರನ್ನು 2 ಎಸೆತಗಳ ಅಂತರದಲ್ಲಿ ಔಟ್ ಮಾಡಿ ಹ್ಯಾಟ್ರಿಕ್ ವಿಕೆಟ್ ಹೊ‌ಸ್ತಿಲಲ್ಲಿ ನಿಂತಿದ್ದರಾದರೂ ನಾಯಕ ಏಡೆನ್ ಮಾರ್ಕ್ರಮ್ ಎಚ್ಚರಿಕೆಯ ಆಟವಾಡಿ ಆ ಅವಕಾಶ ತಪ್ಪಿಸಿದರು.

ಮೊದಲ ಓವರ್ ನ ನಂತರವೂ ತಮ್ಮ ವಿಕೆಟ್ ಬೇಟೆಯನ್ನು ಮುಂದುವರಿಸಿದ ಎಡಗೈ ವೇಗಿ ಅಪಾಯಕಾರಿ ಬ್ಯಾಟರ್ ಟೋನಿ ಡಿ ಜೋರ್ಜಿ(28 ರನ್), ಹೆನ್ರಿಚ್ ಕ್ಲಾಸೆನ್ (6 ರನ್) ಹಾಗೂ ಆಂಡಿಲ್ ಫೆಹ್ಲುಕ್ವಾಯೊ (33 ರನ್) ರ ವಿಕೆಟ್ ಪಡೆದು 37 ರನ್ ಗಳಿಗೆ 5 ವಿಕೆಟ್ ಸಾಧನೆ ಮೆರೆದರು. ಆ ಮೂಲಕ ಹರಿಣಿಗಳ ನಾಡಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಪಡೆದ ಟೀಮ್ ಇಂಡಿಯಾ ಮೊದಲ ವೇಗಿ ಎಂಬ ದಾಖಲೆ ಬರೆದಿದರು.

ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಸಾಧನೆ ಮಾಡಿದ ಟೀಮ್ ಇಂಡಿಯಾ ಬೌಲರ್ಸ್

* ಅರ್ಷದೀಪ್ ಸಿಂಗ್- 37ಕ್ಕೆ5- ಜೋಹಾನ್ಸ್ ಬರ್ಗ್- 2023
* ಯುಜ್ವೇಂದ್ರ ಚಹಲ್- 22ಕ್ಕೆ5- ಸೆಂಚುರಿಯನ್- 2018
* ರವೀಂದ್ರ ಜಡೇಜಾ- 33 ಕ್ಕೆ 5- ಕೋಲ್ಕತ್ತಾ- 2023
* ಸುನೀಲ್ ಜೋಶಿ- 5ಕ್ಕೆ5- ನೈರೋಬಿ- 1999

ಹರಿಣಿಗಳ ನಾಡಿನಲ್ಲಿ ಐದಕ್ಕಿಂತ ಹೆಚ್ಚು ವಿಕೆಟ್ ಪಡೆದ ಟೀಮ್ ಇಂಡಿಯಾ ಬೌಲರ್ಸ್

* ಆಶಿಶ್ ನೆಹ್ರಾ- 6 ವಿಕೆಟ್-2003
* ಯುಜ್ವೇಂದ್ರ ಚಹಲ್- 22ಕ್ಕೆ5- ಸೆಂಚುರಿಯನ್- 2018
* ಅರ್ಷದೀಪ್ ಸಿಂಗ್- 37ಕ್ಕೆ5- ಜೋಹಾನ್ಸ್ ಬರ್ಗ್- 2023

ದಕ್ಷಿಣ ಆಫ್ರಿಕಾಕ್ಕೆ 8 ವಿಕೆಟ್ ಸೋಲು

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ದಕ್ಷಿಣ ಆಫ್ರಿಕಾ, ಆರ್ಷದೀಪ್ ಸಿಂಗ್ (5 ವಿಕೆಟ್) ಹಾಗೂ ಆವೇಶ್ ಖಾನ್ (4 ರನ್) ಅವರ ವಿಧ್ವಂಸಕ ಬೌಲಿಂಗ್ ದಾಳಿಯಿಂದ 116 ರನ್ ಗಳಿಗೆ ಅಲೌಟ್ ಆಯಿತು. ಕುಲ್ದೀಪ್ ಯಾದವ್ ಒಂದು ವಿಕೆಟ್ ಪಡೆದರು. ಈ ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾ 16.4 ಓವರ್ ಗಳಲ್ಲೇ 117 ರನ್ ಗಳಿಸಿ ದಕ್ಷಿಣ ಆಫ್ರಿಕಾಕ್ಕೆ 8 ವಿಕೆಟ್ ಗಳ ಸೋಲು ತಂದಿಟ್ಟರು. ಟೀಮ್ ಇಂಡಿಯಾ ಪರ ಸಾಯ್ ಸುದರ್ಶನ್ (55* ರನ್) ಹಾಗೂ ಶ್ರೇಯಸ್ ಅಯ್ಯರ್ (52 ರನ್) ಅರ್ಧಶತಕ ಸಿಡಿಸಿದರು.

5 ವಿಕೆಟ್ ಸಾಧನೆ ಸಂತಸ ತಂದಿದೆ: ಅರ್ಷದೀಪ್ ಸಿಂಗ್

“ಪಂದ್ಯದಲ್ಲಿ ಬೌಲಿಂಗ್ ಅನ್ನು ಸರಳವಾಗಿರಿಸಿಕೊಳ್ಳಲು ಬಯಸಿದ್ದೆ. ಏಕದಿನ ಸ್ವರೂಪದಲ್ಲಿ ಇದುವರೆಗೂ ನಾನು ವಿಕೆಟ್ ಪಡೆದಿರಲಿಲ್ಲ, 5 ವಿಕೆಟ್ ಸಾಧನೆ ಮೂಲಕ ಖಾತೆ ತೆರೆದಿರುವುದು ಸಂತಸ ತಂದಿದೆ. ವಿಕೆಟ್ (ಪಿಚ್) ಬೌಲಿಂಗ್ ಗೆ ಹೆಚ್ಚು ಸಹಕರಿಸುತ್ತಿತ್ತು, ನಾವು ಪಂದ್ಯ ಆರಂಭಕ್ಕೂ ಮುನ್ನ ಪಿಚ್ ನಲ್ಲಿ ಹೆಚ್ಚು ಚಲನೆ ಇಲ್ಲ ಎಂದು ಭಾವಿಸಿದ್ದೆವು. ಆದರೆ ನಮ್ಮ ನಿರೀಕ್ಷೆಗೂ ಮೀರಿ ವಿಕೆಟ್ ವೇಗದ ಬೌಲರ್ ಗಳಿಗೆ ಸಹಕರಿಸುತ್ತಿತ್ತು. ಆದ್ದರಿಂದ ಎದುರಾಳಿ ಬ್ಯಾಟರ್ ಗಳ ವಿರುದ್ಧ ಉತ್ತಮ ಬೌಲಿಂಗ್ ಸಂಯೋಜನೆ ತೋರಿ ಎಲ್ ಬಿಡಬ್ಲ್ಯು ಹಾಗೂ ಬೌಲ್ಡ್ ಮೂಲಕ ವಿಕೆಟ್ ಪಡೆಯಲು ರಣತಂತ್ರ ರೂಪಿಸಿದ್ದೆವು,” ಎಂದು ಅರ್ಷದೀಪ್ ಸಿಂಗ್ ಅ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *