ಸೂರತ್‌ ಬೃಹತ್‌ ಕಟ್ಟಡ ಭಾರತದ ಆರ್ಥಿಕ ಶಕ್ತಿಯ ಚಿಹ್ನೆ; ನಮ್ಮ 3ನೇ ಅವಧೀಲಿ ಭಾರತ ವಿಶ್ವದ ನಂ. 3 ಆರ್ಥಿಕತೆ: ಮೋದಿ

ಸೂರತ್‌ (ಡಿಸೆಂಬರ್ 18, 2023): ಇಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣವಾದ ಡೈಮಂಡ್ ಬೋರ್ಸ್‌ ಭಾರತದ ಸಾಮರ್ಥ್ಯ ಮತ್ತು ದೃಢ ನಿಶ್ಚಯದ ಚಿಹ್ನೆ. ಇದು ದೇಶದ ಆರ್ಥಿಕತೆಯ ದಿಕ್ಕನ್ನೇ ಬದಲಿಸಬಲ್ಲದು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಸೂರತ್‌ನ ವಜ್ರೋದ್ಯಮ ಇದುವರೆಗೂ 8 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿದ್ದರೆ, ಹೊಸ ಕಟ್ಟಡದ ಉದ್ಘಾಟನೆ ಬಳಿಕ ಇನ್ನೂ 1.5 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಗುಜರಾತ್‌ನ ಸೂರತ್‌ನಲ್ಲಿ 35 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ವಜ್ರೋದ್ಯಮದ ಸಕಲ ಬೇಡಿಕೆಗಳನ್ನೂ ಪೂರೈಸುವ ಬೃಹತ್‌ ಕಟ್ಟಡ ಸಮುಚ್ಚಯ ಮತ್ತು ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್‌ ಟರ್ಮಿನಲ್‌ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು.

ಬಳಿಕ ಬೃಹತ್‌ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಸೂರತ್‌ನ ಕಿರಿಟಕ್ಕೆ ಇನ್ನೊಂದು ವಜ್ರ ಸೇರ್ಪಡೆಯಾಗಿದೆ. ಈ ವಜ್ರ ಚಿಕ್ಕದಲ್ಲ, ಬದಲಾಗಿ ವಿಶ್ವದಲ್ಲೇ ಅತ್ಯಮೂಲ್ಯವಾದುದು. ವಿಶ್ವದ ಅತ್ಯಂತ ದೊಡ್ಡ ಕಟ್ಟಡಗಳು ಕೂಡಾ ಈ ಬೃಹದಾಕಾರದ ವಜ್ರದ ಮುಂದೆ ಸಪ್ಪೆಯಾಗುತ್ತದೆ’ ಎಂದು ಹೊಸ ಕಟ್ಟಡವನ್ನು ಶ್ಲಾಘಿಸಿದರು.

‘ವಿಶ್ವದಲ್ಲಿ ಯಾರೇ ಆದರೂ ವಜ್ರದ ವ್ಯಾಪಾರದ ಬಗ್ಗೆ ಮಾತನಾಡಿದರೆ ಅವರು ಸೂರತ್‌ ಮತ್ತು ಭಾರತದ ಹೆಸರನ್ನು ಪ್ರಸ್ತಾಪಿಸಲೇಬೇಕು. ಸೂರತ್‌ನ ಡೈಮಂಡ್‌ ಬೋರ್ಸ್‌ ಭಾರತದ ವಿನ್ಯಾಸ, ವಿನ್ಯಾಸಕಾರರು, ಉತ್ಪನ್ನ ಮತ್ತು ಪರಿಕಲ್ಪನೆಯ ಸಾಮರ್ಥ್ಯವನ್ನು ತೋರಿಸುತ್ತದೆ. ಈ ಕಟ್ಟಡ ನವಭಾರತದ ಸಾಮರ್ಥ್ಯ ಮತ್ತು ದೃಢ ನಿಶ್ಚಯದ ಚಿಹ್ನೆ’ ಎಂದು ಪ್ರಧಾನಿ ಹೇಳಿದರು.

 

ಸೂರತ್‌ ನಗರದ ಸಮೀಪದ ಕಜೋಡ್‌ ಗ್ರಾಮದಲ್ಲಿ 35 ಎಕರೆ ಜಾಗದಲ್ಲಿ 67 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಡೈಮಂಡ್‌ ಬೋರ್ಸ್‌ ಕಟ್ಟಡವು ವಿಶ್ವದಲ್ಲೇ ಅತ್ಯಂತ ಬೃಹತ್‌ ಕಚೇರಿ ಸಂಕೀರ್ಣ ಎಂಬ ಹಿರಿಮೆಗೆ ಪಾತ್ರವಾಗಿದೆ. ಈ ಮೂಲಕ ಇದುವರೆಗೂ ಈ ದಾಖಲೆಗೆ ಪಾತ್ರವಾಗಿದ್ದ ಅಮೆರಿಕದ ರಕ್ಷಣಾ ಕಚೇರಿ ಸಂಕೀರ್ಣವಾದ ಪೆಂಟಗನ್‌ ಅನ್ನು ಹಿಂದಿಕ್ಕಿದೆ.

ಡೈಮಂಡ್‌ ಬೋರ್ಸ್‌ನಲ್ಲಿ ಪಾಲಿಷ್‌ ಮಾಡದ ಮತ್ತು ಪಾಲಿಷ್‌ ಮಾಡಿದ ವಜ್ರ ವ್ಯಾಪಾರ, ವಜ್ರ ಆಮದು ಸಂಬಂಧಿತ ಸೀಮಾ ಸುಂಕ ಕಚೇರಿ, ಆಭರಣ ಮಾಲ್‌, ಚಿಲ್ಲರೆ ಆಭರಣ ಮಳಿಗೆ, ಅಂತಾರಾಷ್ಟ್ರೀಯ ಬ್ಯಾಂಕಿಂಗ್‌ ಸೌಲಭ್ಯ, ಸುರಕ್ಷತಾ ಕಪಾಟು ಸೇರಿದಂತೆ ನಾನಾ ಸೌಲಭ್ಯಗಳನ್ನು ಹೊಂದಿದೆ. 4500ಕ್ಕೂ ಹೆಚ್ಚು ಕಚೇರಿಗಳಿಗೆ ಅವಕಾಶ ಇದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *