ಕುಖ್ಯಾತ ಕಳ್ಳನ ಬಂಧನ ಲ್ಯಾಪ್‍ಟಾಪ್, ದ್ವಿಚಕ್ರ ವಾಹನಗಳ ವಶ

ಬೆಂಗಳೂರು,ಡಿ.17- ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸಿರುವ ಕೆಂಗೇರಿ ಠಾಣೆ ಪೊಲೀಸರು ಆತನಿಂದ 1.30 ಲಕ್ಷ ಮೌಲ್ಯದ ಲ್ಯಾಪ್‍ಟಾಪ್ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಕೆಂಗೇರಿ ಮಲ್ಲಸಂದ್ರದ ನಿವಾಸಿ ದರ್ಪಣ್‍ಕುಮಾರ್ ಅಲಿಯಾಸ್ ದರ್ಪಣ್ ಅಲಿಯಾಸ್ ಸೂರ್ಯ (20) ಬಂಧಿತ ಆರೋಪಿ.

ಕಳೆದ ಸೆಪ್ಟೆಂಬರ್ 20ರಂದು ಮಲ್ಲಸಂದ್ರದ 2ನೇ ಕ್ರಾಸ್ ಮೂರನೇ ಮೇನ್‍ನಲ್ಲಿರುವ ಓಂ ಸಾಯಿರಾಮ್ ಪಿಜಿಯ 301ರ ಕೊಠಡಿಯಲ್ಲಿ ತಂಗಿದ್ದ ಶಂಕರಗೌಡ ಪಾಟೀಲ್ ಎಂಬುವರ ಲ್ಯಾಪ್‍ಟಾಪ್ ಹಾಗೂ ಮೊಬೈಲ್ ಫೋನ್‍ನ್ನು ಈತ ಕಳ್ಳತನ ಮಾಡಿ ಪರಾರಿಯಾಗಿದ್ದ. ಬಾಗಿಲು ತೆರೆದಿದ್ದನ್ನು ನೋಡಿ ಆತ ಒಳನುಗ್ಗಿ ಕೈಗೆ ಸಿಕ್ಕ ಈ ವಸ್ತುಗಳನ್ನು ದೋಚ್ಚಿದ್ದ. ಈ ಬಗ್ಗೆ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

 

ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಆರೋಪಿ ದರ್ಪಣ್ ಕುಮಾರ್ ಸಿಕ್ಕಿಬಿದ್ದಿದ್ದ. ನಂತರ ಆತನ ವಿಚಾರಣೆ ವೇಳೆ ಆತ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಒಂದು ಆಕ್ಟೀವ್ ಹೋಂಡಾ ಸ್ಕೂಟರ್, ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಹೋಂಡಾ ಡಿಯೋ ಸ್ಕೂಟರ್ ಕಳವು ಮಾಡಿರುವುದು ಗೊತ್ತಾಗಿದೆ.

ಆರೋಪಿಯಿಂದ ಎರಡು ವಾಹನಗಳ ಜೊತೆಗೆ ಪಿಜಿಯಲ್ಲಿ ಕಳವು ಮಾಡಿದ್ದ ಲಾಪ್‍ಟಾಪ್ ಸೇರಿ 1.30 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಡಿಸಿಪಿ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಕೆಂಗೇರಿ ಉಪವಿಭಾಗ ಎಸಿಪಿ ಪರಮೇಶ್ವರ್ ನೇತೃತ್ವದಲ್ಲಿ ಕೆಂಗೇರಿ ಠಾಣೆ ಇನ್‍ಸ್ಪೆಕ್ಟರ್ ಸಂಜೀವೇಗೌಡ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *