ನಾಯಿ, ನರಿ ಬೊಗಳಿದರೆ ಇತಿಹಾಸ ಬದಲಾಗುವುದೆ? ನಟ ಜಗ್ಗೇಶ್​ ಟ್ವೀಟ್​ ವೈರಲ್​

ಸದಾ ಸುದ್ದಿಯಲ್ಲಿರಬಯಸುವ ನಟ ಚೇತನ್​, ವಿವಾದಾತ್ಮಕ ಹೇಳಿಕೆ ನೀಡುವುದು ಹೊಸತೇನಲ್ಲ. ಹೀಗೆ ವಿವಾದಾತ್ಮಕ ಹೇಳಿಕೆ ನೀಡುವುದರಿಂದಲೇ ಭಾರಿ ಸದ್ದು ಮಾಡುವುದನ್ನು ಅರಿತಿರುವ ನಟ, ಇದೀಗ ಮತ್ತೊಮ್ಮೆ ಕನ್ನಡಿಗರನ್ನು ಕೆಣಕಿದ್ದಾರೆ. ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್​ನಲ್ಲಿ ನಾಡಪ್ರಭು ಕೆಂಪೇಗೌಡರ  ವಿರುದ್ಧ ಅವಹೇಳನಕಾರಿ ಪೋಸ್ಟ್​ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಇವರ ವಿರುದ್ಧ ಇದಾಗಲೇ  ವಕೀಲ ಆರ್.ಎಲ್.ಎನ್ ಮೂರ್ತಿ ಎನ್ನುವವರು ಬೆಂಗಳೂರಿನ ಶೇಷಾದ್ರಿಪುರಂ  ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದಾರೆ. ಕೆಂಪೇಗೌಡ ಉಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದ ಈಗ ಪ್ರಮುಖ ಕರ್ನಾಟಕದ ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ. ಟಿಪ್ಪು ಸುಲ್ತಾನ್ ಒಬ್ಬ ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ. ಅವರ ಜನ್ಮವು ಮುಸ್ಲಿಮರಾಗಿ ಅವರ ಇಂದಿನ ಮಾನ್ಯತೆಗೆ ಅಡ್ಡಿಯಾಗಿದೆ. ದುರಾದೃಷ್ಟವಶಾತ್ ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ/ಅವಳ ಸಾಮಾಜಿಕ ಕೊಡುಗೆಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಚೇತನ್ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಭಾರಿ ವಿವಾದ ಸೃಷ್ಟಿಸಿದ್ದಾರೆ.

ನಟ ಎಂದು ಹೇಳಿಕೊಳ್ಳುವ ವಿದೇಶಿ ಪ್ರಜೆಯಾದ ಚೇತನ್ ಅವರಿಂದ ನಾಡಪ್ರಭು ಕೆಂಪೇಗೌಡರಿಗೆ ಅವಹೇಳನ ಮಾಡಿದ್ದಾರೆ’ ಎಂದು ದೂರಿನಲ್ಲಿ ವಕೀಲರು ತಿಳಿಸಿದ್ದಾರೆ. ಚೇತನ್​ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ನವರಸ ನಾಯಕ ಜಗ್ಗೇಶ್​ ಅವರು ಕೂಡ ತಮ್ಮ ಎಕ್ಸ್​ ಖಾತೆಯಲ್ಲಿ ಚೇತನ್​ ಹೇಳಿಕೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಚೇತನ್​ ಅವರ ಹೆಸರನ್ನು ಉಲ್ಲೇಖಿಸದ ಜಗ್ಗೇಶ್​ ಅವರು, ‘ಕೆಂಪೇಗೌಡ ವಿಜಯನಗರ ಸಾಮ್ರಾಜ್ಯದ ಒಡೆಯನ ತೊಡೆಯ ಮೇಲೆ ಕೂತು ಬೆಳೆದ ಮಗು. ಮುಂದೆ ಸಾಮಾಜಿಕ ನ್ಯಾಯ ಎತ್ತಿ ಸಾರ್ವಭೌಮ. ಇಂದಿನ ನಾಯಿ ನರಿ ಬೊಗಳಿದರೆ ಅವರ ಇತಿಹಾಸ ಬದಲಾಗುವುದೆ? ಚಿತ್ರರಂಗದಲ್ಲಿ ನೆಲೆಕಾಣದೆ ಛಾಪು ಮೂಡಿಸಲು ಸಲಕರಣೆ ಸಿಗದ ಅಲೆಮಾರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತದೆ? ಕಾನೂನಿನಿದೆ ಎಚ್ಚರ  ಎಂದು  ಜಗ್ಗೇಶ್ ಬರೆದುಕೊಂಡಿದ್ದಾರೆ.

ಅದೇ ಇನ್ನೊಂದೆಡೆ, ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವ ಕುರಿತು ನಡೆಯುತ್ತಿರುವ ವಾದ-ಪ್ರತಿವಾದಗಳ ಕುರಿತೂ ನಟ ಚೇತನ್​ ಈಹಿಂದೆ ಟ್ವೀಟ್​ ಮಾಡಿ ಹಲವರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಮಾನ ನಿಲ್ದಾಣಗಳ ನಾಮಕರಣ ಮಾಡುವ ನಿರ್ಣಯವನ್ನು ಅಂಗೀಕರಿಸಿದ ಸಂದರ್ಭದಲ್ಲಿ  ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವಂತೆ ಹೇಳಿದ್ದರು.  ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ  ಬಿಜೆಪಿ ಶಾಸಕ ಬಸನಗೌಡ ಪಾಟೀಳ್ ಯತ್ನಾಳ್, ಮೈಸೂರಿನ ವಿಮಾನ ನಿಲ್ದಾಣಕ್ಕೆ ಮಹಾಪ್ರಭುಗಳಾದ ಶ್ರೀ ಮನ್ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಹೆಸರನ್ನು ಕರ್ನಾಟಕ ಸರ್ಕಾರ ಶಿಫಾರಸ್ಸು ಮಾಡಬೇಕು. ಅವರ ಕೊಡುಗೆ ಕರ್ನಾಟಕ ಹಾಗೂ ಭಾರತಕ್ಕೆ ಅಪಾರವಾದದ್ದು ಎಂದು ಹೇಳಿದ್ದರು.

ಇದೇ ವಿಷಯವಾಗಿ ಯತ್ನಾಳ್​ ಅವರಿಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದ ವೇಳೆ ಅವರು, ಟಿಪ್ಪು ಸುಲ್ತಾನ್​ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇಡುವುದು ಸರಿಯಲ್ಲ. ಅದಕ್ಕೆ ಮಹಾರಾಜರ ಹೆಸರು ಇಡಬೇಕು. ಟಿಪ್ಪು ಹೆಸರನ್ನು ಬೇಕಾದರೆ ಶೌಚಾಲಯಕ್ಕೆ ಇಡಲಿ ಎಂದಿದ್ದರು. ಇದನ್ನೇ ಮುಂದಿಟ್ಟುಕೊಂಡು ಚೇತನ್​, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಚಾರವಾಗಿ ಕಾಶ್ಮಿರಾಮ್ ನೀಡಿದ್ದ ಅವಹೇಳನಕಾರಿ ಹೇಳಿಕೆಯನ್ನು ಉಲ್ಲೇಖಿಸಿದ್ದರು. ಅಲ್ಲದೆ, ಶೌಚಾಲಯಗಳನ್ನು ಯಾವಾಗಲೂ ಸ್ವಚ್ಛಗೊಳಿಸಬಹುದು, ಯತ್ನಾಳ್ ಮನಸ್ಸಿನಲ್ಲಿರುವ ಕೋಮು ಕೊಳಕುತನವನ್ನು ಎಂದಿಗೂ ಸ್ವಚ್ಛಗೊಳಿಸಲಾಗುವುದಿಲ್ಲ ಎಂದಿದ್ದರು. ಸದ್ಯ ಕೆಂಪೇಗೌಡರ ವಿಷಯದಲ್ಲಿ ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ  ಕಾರಣವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *