ಭಾರತ ಚಂದ್ರನ ತಲುಪಿದ್ರೆ ನಾವಿನ್ನೂ ನೆಲದಿಂದ್ಲೇ ಎದ್ದಿಲ್ಲ: ಮತ್ತೆ ಭಾರತ ಹೊಗಳಿದ ಪಾಕ್ ಮಾಜಿ ಪ್ರಧಾನಿ

ಇಸ್ಲಾಮಾಬಾದ್‌ (ಡಿಸೆಂಬರ್ 21, 2023): ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಬುಧವಾರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದು, ಈ ವೇಳೆ ಮತ್ತೆ ಭಾರತವನ್ನು ಹೊಗಳಿದ್ದಾರೆ. ಭಾರತವು ಚಂದ್ರನನ್ನು ತಲುಪಿದೆ. ಆದರೆ, ಪಾಕಿಸ್ತಾನ ಇನ್ನೂ ನೆಲದಿಂದ ಎದ್ದಿಲ್ಲ.

ನವಾಜ್ ಷರೀಫ್ ಖೈಬರ್-ಪಖ್ತಿಂಕ್ವಾದ ಮನ್ಸೆಹ್ರಾ ಪ್ರದೇಶದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಮತ್ತೆ ಚುನಾವಣಾ ಅಖಾಡಕ್ಕೆ ಧುಮುಕುವ ಸಮಯದಲ್ಲಿ ಅವರು ಭಾರತದ ಬಗ್ಗೆ ಹಲವಾರು ಉಲ್ಲೇಖಗಳನ್ನು ಮಾಡಿದರು. ಅಲ್ಲದೆ, ಪಾಕಿಸ್ತಾನ ಎದುರಿಸುತ್ತಿರುವ ಆರ್ಥಿಕ ಸ್ಥಿತಿಗೆ ಭಾರತ ಅಥವಾ ಅಮೆರಿಕ ಹೊಣೆಯಲ್ಲ ಎಂದೂ ನವಾಜ್ ಷರೀಫ್ ಮಂಗಳವಾರ ಹೇಳಿದ್ದರು.

ಹಾಗೂ, ನಾವು ನಮ್ಮ ಕಾಲಿಗೆ ನಾವೇ ಗುಂಡು ಹಾರಿಸಿಕೊಂಡಿದ್ದೇವೆ ಎಂದು ನವಾಜ್ ಷರೀಫ್ ಹೇಳಿದ್ದರು. ನಮ್ಮ ನೆರೆಹೊರೆಯವರು ಚಂದ್ರನನ್ನು ತಲುಪಿದ್ದಾರೆ. ಆದರೆ ನಾವು ಇಲ್ಲಿಯವರೆಗೆ ನೆಲದಿಂದ ಮೇಲಕ್ಕೆ ಎದ್ದಿಲ್ಲ. ಇದು ಹೀಗೆ ಮುಂದುವರಿಯಲು ಸಾಧ್ಯವಿಲ್ಲ ಎಂದೂ ನವಾಜ್‌ ಷರೀಫ್ ಬುಧವಾರ ಹೇಳಿದರು.

ನವಾಜ್ ಷರೀಫ್ ನಾಲ್ಕನೇ ಬಾರಿಗೆ ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ. ಇನ್ನು, 1993, 1999 ಮತ್ತು 2017  – ಹೀಗೆ 3 ಬಾರಿ ಅವರನ್ನು ಅಧಿಕಾರದಿಂದ ಹೊರಹಾಕಲಾಯ್ತು. 2013 ರಲ್ಲಿ, ನಾವು ತೀವ್ರವಾದ ವಿದ್ಯುತ್ ಲೋಡ್ ಶೆಡ್ಡಿಂಗ್ ಎದುರಿಸುತ್ತಿದ್ದೆವು. ನಾವು ಬಂದು ಅದನ್ನು ಕೊನೆಗೊಳಿಸಿದ್ದೆವು. ದೇಶಾದ್ಯಂತ ಭಯೋತ್ಪಾದನೆಯನ್ನು ಕೊನೆಗೊಳಿಸಿದ್ದೆವು, ಕರಾಚಿಯ ಶಾಂತಿಯನ್ನು ಪುನಃಸ್ಥಾಪಿಸಿದ್ದೆವು. ಹೆದ್ದಾರಿಗಳನ್ನು ನಿರ್ಮಿಸಲಾಯಿತು, CPEC ಬಂತು ಮತ್ತು ಅಭಿವೃದ್ಧಿ ಹಾಗೂ ಸಮೃದ್ಧಿಯ ಹೊಸ ಯುಗ ಪ್ರಾರಂಭವಾಯಿತು ಎಂದು ನವಾಜ್ ಷರೀಫ್ ಹೇಳಿದ್ದಾರೆ.

 

2019 ರಲ್ಲಿ ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಲಂಡನ್‌ಗೆ ಹೋಗಿದ್ದ ಹಾಗೂ ರಾಜಕೀಯ ಗಡಿಪಾರಾಗಿದ್ದ ನವಾಜ್ ಷರೀಫ್, ಈ ವರ್ಷದ ಅಕ್ಟೋಬರ್‌ನಲ್ಲಿ ಪಾಕಿಸ್ತಾನಕ್ಕೆ ಮರಳಿದ್ದಾರೆ. ಭ್ರಷ್ಟಾಚಾರಕ್ಕಾಗಿ 7 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವಾಗ ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದರು. ಆದರೆ ನಂತರ ಅವರು ಹಿಂತಿರುಗಲಿಲ್ಲ. ಈಗ ಚುನಾವಣೆಯಲ್ಲಿ ನಿಲ್ಲಲು ಮತ್ತೆ ಪಾಕ್‌ಗೆ ಬಂದಿದ್ದಾರೆ.

ಇನ್ನೊಂದೆಡೆ, ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಲಾಹೋರ್, ಮಿಯಾನ್ವಾಲಿ ಮತ್ತು ಇಸ್ಲಾಮಾಬಾದ್ ಮೂರು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಆಗಸ್ಟ್ 5 ರಂದು, ಇಸ್ಲಾಮಾಬಾದ್‌ನ ವಿಚಾರಣಾ ನ್ಯಾಯಾಲಯವು ಪಾಕಿಸ್ತಾನದ ಚುನಾವಣಾ ಆಯೋಗವು ಸಲ್ಲಿಸಿದ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತು.

 

ಉಡುಗೊರೆಗಳನ್ನು ಮರೆಮಾಚಿದ್ದಕ್ಕೆ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪಿನ ಪ್ರಕಾರ ಅವರು 5 ವರ್ಷಗಳ ಕಾಲ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದಾರೆ. ಆದರೆ ಇಸ್ಲಾಮಾಬಾದ್ ಹೈಕೋರ್ಟ್ ಇಮ್ರಾನ್ ಖಾನ್ ಅವರ ಮೂರು ವರ್ಷಗಳ ಶಿಕ್ಷೆಯನ್ನು ಅಮಾನತುಗೊಳಿಸಿದೆ. ಆದರೆ ಅವರು ಇನ್ನೂ ಇತರ ಪ್ರಕರಣಗಳಲ್ಲಿ ಜೈಲಿನಲ್ಲಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *