ರಾಹುಲ್ ಗಾಂಧಿ ಭಾವಚಿತ್ರಕ್ಕೆ ಮಸಿ ಬಳಿದು ಬಿಜೆಪಿ ಪ್ರತಿಭಟನೆ
ಚಾಮರಾಜನಗರ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು ರಾಹುಲ್ ಗಾಂಧಿ ಭಾವಚಿತ್ರಕ್ಕೆ ಮಸಿ ಬಳಿದು ಪ್ರತಿಭಟನೆ ನಡೆಸಿದರು.
ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದಿಂದ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿ ರಾಹುಲ್ ಗಾಂಧಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಕೆಲಕಾಲ ರಸ್ತೆಯಲ್ಲಿ ಕುಳಿತು ಘೋಷಣೆ ಕೂಗಿದ ಪ್ರತಿಭಟನಾಕಾರರು, ರಾಹುಲ್ ಗಾಂಧಿ ಭಾವಚಿತ್ರಕ್ಕೆ ಮಸಿ ಬಳಿದು ಆಕ್ರೋಶ ಹೊರಹಾಕಿ ಕಾಂಗ್ರೆಸ್ ನಾಯಕ ರಾಗಾ ವಿರುದ್ಧ ಘೋಷಣೆ ಕೂಗಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾವಚಿತ್ರಕ್ಕೆ ಮಸಿ ಬಳಿಯುವ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು, ಪಟ್ಟು ಸಡಿಲಿಸದ ಪ್ರತಿಭಟನಾಕಾರರು ಮಸಿ ಬಳಿದು ಭಾವಚಿತ್ರ ಹರಿದು ಹಾಕಿದರು.