ಅತ್ತಿಗೆ-ನಾದಿನಿಯರ ಬಾಂಧವ್ಯ ಬೆಸೆಯುವ ಡಿಚ್ಚಿ ಹಬ್ಬ

ಹೈಲೈಟ್ಸ್‌:

  • ಅಹೋಬಲ ನರಸಿಂಹಸ್ವಾಮಿಯ ಕಾರ್ತಿಕ ಜಾತ್ರಾ ಮಹೋತ್ಸವದಲ್ಲಿ ಅತ್ತಿಗೆ ನಾದಿನಿಯರ ಡಿಚ್ಚಿ ಹಬ್ಬ
  • ಇದರಿಂದ ಸಂಬಂಧಗಳು ಉತ್ತಮವಾಗಿರುವುದಲ್ಲದೇ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಎಂಬ ನಂಬಿಕೆ ಇದೆ
  • ಮನೆ-ಮನ, ಊರುಗಳ ಬಾಂಧವ್ಯ ಬೆಸೆಯುವ ಜಾತ್ರೆ

ಚಿತ್ರದುರ್ಗ: ಮನೆ-ಮನ, ಊರುಗಳ ಬಾಂಧವ್ಯ ಬೆಸೆಯುವ ಸಂಪ್ರದಾಯಗಳನ್ನು ಹಲವೆಡೆ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಹಿರಿಯೂರು ತಾಲೂಕಿನ ಸಿ.ಎನ್‌. ಮಾಳಿಗೆ ಗ್ರಾಮದಲ್ಲಿ ಶ್ರೀ ಅಹೋಬಲ ನರಸಿಂಹಸ್ವಾಮಿಯ ಕಾರ್ತಿಕ ಜಾತ್ರಾ ಮಹೋತ್ಸವದಲ್ಲಿ ಬಾಂಧವ್ಯ ಬೆಸೆಯುವ ಅತ್ತಿಗೆ ನಾದಿನಿಯರ ಡಿಚ್ಚಿ ಹಬ್ಬ ಆಚರಿಲಾಯಿತು.

 

ಅತ್ತಿಗೆ ನಾದಿನಿಯರ ಡಿಚ್ಚಿ ಹಬ್ಬ:

ಈ ಜಾತ್ರೆಯಲ್ಲಿಅತ್ತಿಗೆ ನಾದಿನಿಯರು ಪರಸ್ಪರ ಡಿಚ್ಚಿ ಹೊಡೆಯುವುದು ವಿಶೇಷ. ಹೌದು, ಒಂದು ಬದಿ ಅತ್ತಿಗೆಯರು, ಇನ್ನೊಂದು ಬದಿ ನಾದಿನಿಯರು ಎದುರು-ಬದುರು ನಿಂತು ಓಡೋಡಿ ಬಂದು ತಮ್ಮ ಮುಂದಲೆಯಿಂದ ಡಿಚ್ಚಿ ಹೊಡೆದುಕೊಳ್ಳುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ವಿಶಿಷ್ಟ ಆಚರಣೆ. ಅತ್ತಿಗೆ ನಾದಿನಿಯರ ಡಿಚ್ಚಿ ಆಚರಣೆಯೊಂದಿಗೆ ಮೂರು ದಿನಗಳ ಕಾರ್ತಿಕ ಪೂಜಾ ಜಾತ್ರಾ ಮಹೋತ್ಸವಕ್ಕೆ ತೆರೆಬೀಳುತ್ತದೆ.

 

ಡಿಚ್ಚಿ ಹಬ್ಬದ ಉದ್ದೇಶವೇನು?

ಜಾತ್ರೆ ಆರಂಭದಲ್ಲಿ ಟಗರಿನ ಕಾಳಗ ನಡೆಸಲಾಗುತ್ತದೆ. ನಂತರ ಈ ಕಾರ್ಯಕ್ರಮಕ್ಕೆ ಮನೆ ಮಗಳನ್ನು ಗ್ರಾಮದ ಊರ ಹೆಬ್ಬಾಗಿಲಿನಿಂದ ಮೆರವಣಿಗೆ ಮೂಲಕ ದೇವಸ್ಥಾನದ ಆವರಣಕ್ಕೆ ಕರೆತರಲಾಗುತ್ತದೆ. ಅತ್ತಿಗೆ, ನಾದಿನಿಯರು ಪರಸ್ಪರ ಕಿತ್ತಾಡಿ ಮನಸ್ತಾಪಗಳು ಉಂಟಾಗಿ ತವರು ಮನೆಗೆ ಬರುವುದಿಲ್ಲ, ಇದರಿಂದ ಸಂಬಂಧಗಳ ಮಧ್ಯೆ ಬಿರುಕುಂಟಾಗಿ ಹಾಳಾಗುತ್ತವೆ.

ಇದನ್ನು ಮನಗಂಡ ನಮ್ಮ ಪೂರ್ವಿಕರು ಅತ್ತಿಗೆ ನಾದಿನಿಯರನ್ನು ದೇವಸ್ಥಾನದಲ್ಲಿರಾಜಿ ಮಾಡಿಸಿ ಪರಸ್ಪರ ಚೆನ್ನಾಗಿ ಇರಲೆಂಬ ಉದ್ದೇಶದಿಂದ ಮುಂದಲೆಯಿಂದ ಒಬ್ಬರಿಗೊಬ್ಬರು ಡಿಚ್ಚಿ ಹೊಡೆಸುತ್ತಾರೆ. ಇದರಿಂದ ಸಂಬಂಧಗಳು ಉತ್ತಮವಾಗಿರುವುದಲ್ಲದೇ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಎಂಬ ನಂಬಿಕೆ ಇದೆ ಎಂದು ಗ್ರಾಮಸ್ಥರಾದ ವಿ.ಸಿ.ರುದ್ರಪ್ಪ, ನಾಗೇಂದ್ರನಾಯ್ಕ, ವೀರೇಶ್‌, ತಿಪ್ಪೇಸ್ವಾಮಿ, ಶಿವರುದ್ರಪ್ಪ ಮಾಹಿತಿ ಹಂಚಿಕೊಂಡರು.

 

ಮೂರು ದಿನಗಳ ಉತ್ಸವ

ಅಹೋಬಲ ನರಸಿಂಹ ಸ್ವಾಮಿಯ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ನಡೆಸಲಾಗುತ್ತದೆ. ಶುಕ್ರವಾರ ಕುಂಟ ಹಳ್ಳದಲ್ಲಿಗಂಗೆ ತಂದು ಊರ ಮುಂದಿನ ಹೆಬ್ಬಾಗಿಲಿನಲ್ಲಿಗಂಗಾ ಪೂಜೆ ನೆರವೇರಿಸಿ ಸಂಜೆ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕರೆತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಶನಿವಾರ ಗುಡಿಕಟ್ಟಿನ ಅಣ್ಣತಮ್ಮಂದಿರಿಂದ ಅನ್ನ ಸಂತರ್ಪಣಾ ಮತ್ತು ಮನರಂಜನೆ ಕಾರ್ಯಕ್ರಮಗಳು ಜರುಗಿದವು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *