ಹಂಪಿಯಲ್ಲಿ‘ಪಾರ್ಕಿಂಗ್’ ಪರದಾಟ; ಪ್ರವಾಸಿಗರಿಗೆ ಧೂಳಿನ ಸ್ವಾಗತ!
ಹೈಲೈಟ್ಸ್:
- ಹಂಪಿಯಲ್ಲಿ ಪಾರ್ಕಿಂಗ್ ಅವ್ಯವಸ್ಥೆಯಿಂದ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ
- 3 ರಿಂದ 4 ಸಾವಿರ ವಾಹನಗಳನ್ನು ನಿಲುಗಡೆ ಮಾಡಲು ಪಾರ್ಕಿಂಗ್ ವ್ಯವಸ್ಥೆ ಇದೆ ಆದರೆ ಸರಿಯಾದ ಸೌಕರ್ಯಗಳಿಲ್ಲ
- ಪ್ರವಾಸಿಗರು ಸ್ಥಳ ದೊರೆಯದೇ ಸ್ಮಾರಕಗಳ ಬದಿಗೆ ವಾಹನ ನಿಲುಗಡೆ ಮಾಡುವ ಪರಿಸ್ಥಿತಿ ಇದೆ
ವಿಜಯನಗರ (ಹೊಸಪೇಟೆ): ವಿಶ್ವವಿಖ್ಯಾತ ಹಂಪಿಯಲ್ಲಿ ಪಾರ್ಕಿಂಗ್ ಅವ್ಯವಸ್ಥೆಯಿಂದ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ. ವಾರಾಂತ್ಯ ಮತ್ತು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬರುವುದರಿಂದ ವಾಹನಗಳ ನಿಲುಗಡೆಗೆ ಸ್ಥಳ ದೊರಕದೇ ಸಮಸ್ಯೆ ಅನುಭವಿಸುತ್ತಿದ್ದಾರೆ.
ಹಂಪಿಗೆ ವಾರ್ಷಿಕವಾಗಿ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ವಿಶೇಷ ಸಂದರ್ಭಗಳಲ್ಲಿ ದೇಶದ ನಾನಾ ರಾಜ್ಯಗಳು ಮತ್ತು ವಿದೇಶದಿಂದ ಎರಡ್ಮೂರು ದಿನಗಳಲ್ಲಿಯೇ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ವೇಳೆ ವಾಹನಗಳಿಗೆ ಪಾರ್ಕಿಂಗ್ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಸ್ಮಾರಕಗಳ ಸಮೀಪದಲ್ಲಿಯೇ ಪಾರ್ಕಿಂಗ್ ಸ್ಥಳ ಹುಡುಕಿಕೊಂಡು ಹೋಗುವ ಪ್ರವಾಸಿಗರು ಸ್ಥಳ ದೊರೆಯದೇ ಸ್ಮಾರಕಗಳ ಬದಿಗೆ ವಾಹನ ನಿಲುಗಡೆ ಮಾಡುವ ಪರಿಸ್ಥಿತಿ ಇದೆ. ಈ ವೇಳೆ ಪೊಲೀಸರು ಕಿಕ್ಕಿರಿದು ಬರುವ ವಾಹನಗಳನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.
ಪಾರ್ಕಿಂಗ್ ವ್ಯವಸ್ಥೆ:
ಪಾರ್ಕಿಂಗ್‌ಗೆ ಅವಕಾಶವಿರುವ ವಿಜಯವಿಠ್ಠಲ ದೇಗುಲದ ಸಮೀಪ ಗೆಜ್ಜಲ ಮಂಟಪ, ಗ್ರಾಮ ಪಂಚಾಯಿತಿ ಎದುರಿನ ಪ್ರದೇಶ, ಗಾಯತ್ರಿ ಪೀಠ, ಉಗ್ರ ನರಸಿಂಹ ದೇಗುಲದ ಬದಿ ಹಾಗೂ ಹೇಮಕೂಟದ ಸಮೀಪದಲ್ಲಿ ಸದ್ಯ ಪಾರ್ಕಿಂಗ್‌ಗೆ ಸ್ಥಳಾವಕಾಶವಿದೆ. ಆದರೆ, ಈ ಪ್ರದೇಶಗಳಲ್ಲಿ ವಾಹನಗಳು ಕಿಕ್ಕಿರಿದು ತುಂಬಿ ವಾಹನ ನಿಲುಗಡೆಗೆ ಸ್ಥಳವಿಲ್ಲದೇ ಪ್ರವಾಸಿಗರು ಪರದಾಡುತ್ತಿದ್ದಾರೆ.
ಉತ್ತರ ಭಾರತದ ನಾನಾ ರಾಜ್ಯಗಳಿಂದ ಬರುವ ಪ್ರವಾಸಿಗರು ತಮ್ಮ ವಾಹನಗಳ ಸಮೇತ ಪಾರ್ಕಿಂಗ್ ಸ್ಥಳದಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಈ ವೇಳೆ ಬೆಳಕಿನ ವ್ಯವಸ್ಥೆ ಇಲ್ಲದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಕುಡಿವ ನೀರು ಕೂಡ ಸಿಗದ ಪರಿಸ್ಥಿತಿ ಇದೆ. ಈ ಕುರಿತು ಸಮಸ್ಯೆ ಬಗೆಹರಿಸಬೇಕಾದ ನಾನಾ ಇಲಾಖೆಗಳು ಒಬ್ಬರತ್ತ ಮತ್ತೊಬ್ಬರು ಬೊಟ್ಟು ಮಾಡುತ್ತಿದ್ದಾರೆ.
ಪಾರ್ಕಿಂಗ್‌ಗೆ 12 ಎಕರೆ ಸ್ಥಳ:
ಹಂಪಿಯಲ್ಲಿಎಸ್ಪಿ ಮತ್ತು ಜಿಲ್ಲಾಧಿಕಾರಿ ಭೇಟಿ ನೀಡಿ 4 ಕಡೆ ಹೊಸ ಪಾರ್ಕಿಂಗ್‌ಗೆ 12 ಎಕರೆ ಸ್ಥಳ ನಿಗದಿಸಿದ್ದಾರೆ. ಸದ್ಯ 3 ರಿಂದ 4 ಸಾವಿರ ವಾಹನಗಳ ಪಾರ್ಕಿಂಗ್‌ಗೆ ಸ್ಥಳಾವಕಾಶವಿದೆ. ಆದರೆ, ವಿಶೇಷ ಸಂದರ್ಭಗಳಲ್ಲಿ7 ರಿಂದ 8 ಸಾವಿರಕ್ಕೂ ಹೆಚ್ಚಿನ ವಾಹನಗಳು ಬರುತ್ತಿವೆ. ಹಾಗಾಗಿ ತೊಂದರೆ ಉಂಟಾಗುತ್ತಿದ್ದು, ಪೊಲೀಸ್ ಇಲಾಖೆಯಿಂದ ಇನ್ನೂ 4 ಕಡೆ ಪಾರ್ಕಿಂಗ್‌ಗೆ ಸ್ಥಳ ನಿಗದಿಸಲಾಗಿದೆ.
ಹಂಪಿ ಉತ್ಸವದಲ್ಲೂ ಸಮಸ್ಯೆ?:
ಮುಂದಿನ ತಿಂಗಳ ಆರಂಭದಲ್ಲಿ ಹಂಪಿ ಉತ್ಸವ ಆಚರಣೆಗೆ ಸಿದ್ಧತೆ ನಡೆದಿದೆ. ಈ ಸಂದರ್ಭದಲ್ಲಿಯೂ ಹೆಚ್ಚಿನ ವಾಹನಗಳು ಬರುವುದರಿಂದ ಸಮಸ್ಯೆ ಇನ್ನೂ ತೀವ್ರವಾಗುವ ಸಾಧ್ಯತೆ ಇದೆ. ಅಷ್ಟರೊಳಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಲ್ಲಿಅನಗತ್ಯ ಕಿರಿಕಿರಿ ತಪ್ಪಿಸಬಹುದು.
ಹಂಪಿಯಲ್ಲಿ ಪ್ರತಿ ನಿತ್ಯ 7 ರಿಂದ 8 ಸಾವಿರ ವಾಹನಗಳು ಸಂಚರಿಸುತ್ತಿರುವುದರಿಂದ ವಿಶೇಷ ಸಂದರ್ಭಗಳಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಡಿಮೆ ಇರುವುದರಿಂದ ಸಮಸ್ಯೆ ಆಗಿದೆ. ಹಾಗಾಗಿ 4 ಹೊಸ ಪಾರ್ಕಿಂಗ್‌ಗೆ 12 ಎಕರೆ ಸ್ಥಳ ಗುರುತಿಸಲಾಗಿದೆ. ಬೆಳಕಿನ ವ್ಯವಸ್ಥೆ ಸೇರಿ ಅಗತ್ಯ ಸೌಕರ್ಯದೊಂದಿಗೆ ಪಾರ್ಕಿಂಗ್‌ಗೆ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುದು.