Maldives Row: ಭಾರತದಿಂದ ಮಾಲ್ಡೀವ್ಸ್‌ಗೆ ಫ್ಲೈಟ್ ಬುಕ್ಕಿಂಗ್ ರದ್ದು! ‘ನಿಂಗಿದು ಬೇಕಿತ್ತಾ ಮಗನೇ’ ಅಂತಿದ್ದಾರೆ ನೆಟ್ಟಿಗರು!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಲಕ್ಷದ್ವೀಪದ (Visit Lakshadweep) ಪ್ರವಾಸೋದ್ಯಮ ಪುಟಿದೇಳುತ್ತಿದೆ. ಆದರೆ ಇದೇ ಕಾರಣಕ್ಕೆ ಭಾರತದೊಂದಿಗೆ ಕಾಲ್ಕೆದರಿ ಜಗಳಕ್ಕೆ ಬಂದಿರುವ ಮಾಲ್ಡೀವ್ಸ್‌ಗೆ (Maldives) ಒಂದರ ಮೇಲೊಂದರಂತೆ ಶಾಕ್ ತಟ್ಟುತ್ತಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್ ಸಚಿವರು ಮಾಡಿದ ಅವಹೇಳನಕಾರಿ ಹೇಳಿಕೆಗಳ ನಂತರ ಸ್ವತಃ ಮಾಲ್ಡೀವ್ಸ್‌ನ ವಿರೋಧ ಪಕ್ಷಗಳ ನಾಯಕರೇ ಸಚಿವರುಗಳ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ. ಭಾರತ ನಮ್ಮ ಸ್ನೇಹ ರಾಷ್ಟ್ರ, ಅದರ ವಿರುದ್ಧ ಅಪಮಾನಕಾರಿ ಹೇಳಿಕೆಗಳನ್ನು ನೀಡೋದು ಸರಿಯಲ್ಲ ಅಂತಾನೂ ಹೇಳ್ತಿದ್ದಾರೆ.
ಈ ಮಧ್ಯೆ ನಿನ್ನೆ ಭಾರತದ ಸೆಲೆಬ್ರಿಟಿಗಳು ಕೂಡ ಮಾಲ್ಡೀವ್ಸ್‌ಗೆ ಠಕ್ಕರ್ ಕೊಟ್ಟು ಭಾರತದ ಪ್ರವಾಸಿ ಸ್ಥಳಗಳನ್ನು ಉತ್ತೇಜಿಸುವಂತೆ ನಿನ್ನೆ ಟ್ವಿಟ್ಟರ್ ಅಭಿಯಾನ ನಡೆಸಿದ್ದರು. ಇದರ ಜೊತೆಗೆ ಸಾವಿರಾರು ನೆಟ್ಟಿಗರು ಮಾಲ್ಡೀವ್ಸ್ ಅನ್ನು ಬಹಿಷ್ಕರಿಸುವಂತೆಯೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಮಾಲ್ಡೀವ್ಸ್‌ಗೆ ಮತ್ತೊಂದು ಶಾಕ್ ಬಿದ್ದಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್ ಸಚಿವರು ಮಾಡಿದ ಅವಹೇಳನಕಾರಿ ಹೇಳಿಕೆಗಳ ನಂತರ EaseMyTrip ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಕಂಪನಿಯ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ನಿಶಾಂತ್ ಪಿಟ್ಟಿ ಅವರು ಮಾಲ್ಡೀವ್ಸ್‌ಗೆ ಎಲ್ಲಾ ವಿಮಾನಗಳ ಬುಕಿಂಗ್ ಅನ್ನು ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಮಾಲ್ಡೀವ್ಸ್ ನಾಯಕರ ವಿವಾದಾತ್ಮಕ ಹೇಳಿಕೆಗಳ ನಂತರ ಸಾಮಾಜಿಕ ಮಾಧ್ಯಮದಲ್ಲಿ Boycott Maldives ಟ್ರೆಂಡಿಂಗ್ ಆಗುತ್ತಿದೆ. ಇಲ್ಲಿಯವರೆಗೆ ಸಾವಿರಾರು ಜನರು ಮಾಲ್ಡೀವ್ಸ್‌ಗೆ ಹೋಗುವ ತಮ್ಮ ಪ್ಲಾನ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ. ಸಾಮಾನ್ಯವಾಗಿ ಭಾರತದಿಂದ ಹೆಚ್ಚಿನ ಸಂಖ್ಯೆಯ ಜನರು ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ, ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬೀಳಬಹುದು ಎಂದು ನಂಬಲಾಗಿದೆ.
ಸುದ್ದಿ ಸಂಸ್ಥೆ ANI ಪ್ರಕಾರ, ಭಾರತವನ್ನು ಬೆಂಬಲಿಸಿ ನಿಶಾಂತ್ ಪಿಟ್ಟಿ ಅವರು ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನಲ್ಲಿನಲ್ಲಿ ‘ನಮ್ಮ ದೇಶದೊಂದಿಗೆ ಒಗ್ಗಟ್ಟು ಪ್ರದರ್ಶಿಸಿ, EaseMyTrip ಎಲ್ಲಾ ಮಾಲ್ಡೀವ್ಸ್ ವಿಮಾನ ಬುಕಿಂಗ್ ಅನ್ನು ರದ್ದುಗೊಳಿಸಿದೆ’ ಎಂದು ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ EaseMyTrip #ChaloLakshadweep ಅಭಿಯಾನವನ್ನು ಪ್ರಾರಂಭಿಸಿದೆ.
ಟ್ವಿಟ್ಟರ್‌ನಲ್ಲಿನ ತಮ್ಮ ಪೋಸ್ಟ್‌ನಲ್ಲಿ ನಿಶಾಂತ್ ಪಿಟ್ಟಿ ಅವರು ‘ಲಕ್ಷದ್ವೀಪದ ನೀರು ಮತ್ತು ಕಡಲತೀರಗಳು ಮಾಲ್ಡೀವ್ಸ್‌ನಂತೆಯೇ ಉತ್ತಮವಾಗಿವೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಭೇಟಿ ನೀಡಿದ ಈ ಪುರಾತನ ತಾಣವನ್ನು ಪ್ರಚಾರ ಮಾಡಲು ನಾವು EaseMyTrip ನಲ್ಲಿ ವಿಶೇಷ ಕೊಡುಗೆಗಳೊಂದಿಗೆ ಬರಲಿದ್ದೇವೆ!’ ಎಂದು ಬರೆದುಕೊಂಡಿದ್ದಾರೆ.