ಅಮೆರಿಕಾ ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲೂ ರಾಮ ಮಂದಿರ ಉದ್ಘಾಟನೆ ನೇರಪ್ರಸಾರ

ಅಯೋಧ್ಯೆ/ನ್ಯೂಯಾರ್ಕ್‌: ಜ.22ರಂದು ನಡೆಯಲಿರುವ ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಐತಿಹಾಸಿಕ ಸಮಾರಂಭವನ್ನು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಪ್ರಸಿದ್ಧ ಟೈಮ್ಸ್‌ ಸ್ಕ್ವೇರ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಭಾರತೀಯ ಕಚೇರಿಗಳು ಮತ್ತು ದೇವಸ್ಥಾನ ಸೇರಿದಂತೆ ವಿವಿಧೆಡೆ ಮಂದಿರದ ಮೊದಲ ಹಂತದ ಉದ್ಘಾಟನೆ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ಅಮೆರಿಕದ ದೇವಸ್ಥಾನಗಳಲ್ಲಿ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇನ್ನು ಬಿಜೆಪಿಯು ಬೂತ್‌ ಮಟ್ಟದಲ್ಲಿ ರಾಷ್ಟ್ರಾದ್ಯಂತ ಮಂದಿರ ಉದ್ಘಾಟನೆ ಸಮಾರಂಭವನ್ನು ನೇರ ಪ್ರಸಾರ ಮಾಡುವುದಾಗಿ ಘೋಷಿಸಿದೆ. ಪ್ರತಿ ಬೂತ್‌ ಮಟ್ಟದಲ್ಲಿ ಜನರು ಕಾರ್ಯಕ್ರಮ ವೀಕ್ಷಿಸಲು ದೊಡ್ಡ ಪರದೆಗಳನ್ನು ಅಳವಡಿಸುವಂತೆ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಇದೇ ವೇಳೆ, ಮಂದಿರ ಉದ್ಘಾಟನಾ ಪೂರ್ವಸಿದ್ಧತೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಖುದ್ದು ಉಸ್ತುವಾರಿ ವಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮಂದಿರ ಉದ್ಘಾಟನೆ ವೇಳೆ ಮುಸ್ಲಿಮರು ಪ್ರಯಾಣಿಸಬೇಡಿ: ಸಂಸದ ಬದ್ರುದ್ದೀನ್‌ ವಿವಾದ

ಗುವಾಹಟಿ: ಜನವರಿ 22ರಂದು ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜ.20ರಿಂದ 25ರವರೆಗೆ ಮುಸ್ಲಿಮರು ಯಾರೂ ಪ್ರಯಾಣಿಸಬೇಡಿ ಮತ್ತು ಬಿಜೆಪಿ ನಮ್ಮ ದೊಡ್ಡ ಶತ್ರುವಾಗಿದೆ ಎಂದು ಎಐಯುಡಿಎಫ್ ಮುಖ್ಯಸ್ಥ ಮತ್ತು ಸಂಸದ ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶನಿವಾರ ಅಸ್ಸಾಂನ ಬಾರ್‌ಪೇಟಾದಲ್ಲಿ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ಅವರು ಜ.22ರಂದು ಅಯೋಧ್ಯೆ ಮಂದಿರ ಉದ್ಘಾಟನೆ ನಡೆಯಲಿದೆ. ಆಗ ಕಾರು, ಬೈಕ್‌, ವಿಮಾನ, ರೈಲು ಮತ್ತು ಬಸ್‌ಗಳಲ್ಲಿ ಲಕ್ಷ ಲಕ್ಷ ಜನರು ಅಯೋಧ್ಯೆಗೆ ತೆರಳುತ್ತಾರೆ. ಈ ವೇಳೆ ಅಹಿತಕರ ಘಟನೆ ನಡೆಯಬಹುದು. ಹೀಗಾಗಿ ನಮ್ಮ ಮುಸ್ಲಿಂ ಸಹೋದರ ಸಹೋದರಿಯರು ಜ.20 ರಿಂದ 25ರವರೆಗೆ ಪ್ರಯಾಣಿಸಬಾರದು. ಮನೆಯಲ್ಲಿಯೇ ಇದ್ದು ಅಲ್ಲಾನಲ್ಲಿ ಪ್ರಾರ್ಥನೆ ಸಲ್ಲಿಸಿ. ಬಿಜೆಪಿಯು ನಮ್ಮ ದೊಡ್ಡ ಶತ್ರುವಾಗಿದೆ. ಅದು ಆಗ ದೊಡ್ಡ ಯೋಜನೆಗಳನ್ನು ಹೊಂದಿದ್ದು, ನಮ್ಮ ವಿರುದ್ಧ ಅಹಿತಕರ ಘಟನೆ ಸಂಭವಿಸುವ ಸಾಧ್ಯತೆ ಇದೆ ಎಂದಿದ್ದಾರೆ.

ಅಲ್ಲದೇ ಬಿಜೆಪಿಯು ಮುಸ್ಲಿಮರ ಜೀವನ, ನಂಬಿಕೆ, ಪ್ರಾರ್ಥನೆ, ಮದ್ರಸಾ, ಮಸೀದಿ ಮತ್ತು ನಮ್ಮ ಸಹೋದರಿಯರು ತಾಯಂದಿರ ಪರ್ಧಾ ಪದ್ಧತಿ, ತ್ರಿವಳಿ ತಲಾಖ್‌ ಮತ್ತು ಇಸ್ಲಾಮಿಕ್‌ ಕಾನೂನುಗಳ ಶತ್ರುವಾಗಿದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಆಕ್ರೋಶ

ಬದ್ರುದ್ದೀನ್‌ ಹೇಳಿಕೆಗೆ ಬಿಜೆಪಿ ನಾಯಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಬಿಜೆಪಿ ಮುಸ್ಲಿಮರನ್ನು ದ್ವೇಷಿಸುವುದಿಲ್ಲ. ನಾವು ಎಲ್ಲರೊಂದಿಗೆ, ಎಲ್ಲರ ಅಭೀವೃದ್ಧಿ ಮತ್ತು ಎಲ್ಲ ವಿಶ್ವಾಸ ಮಂತ್ರದೊಂದಿಗೆ ಕೆಲಸ ಮಾಡುತ್ತೇವೆ. ಅಯೋಧ್ಯೆ ಭೂ ವಿವಾದ ಪ್ರಕರಣದ ಮಾಜಿ ದಾವೆದಾರ ಇಕ್ಬಾಲ್ ಅನ್ಸಾರಿ ಅವರನ್ನು ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಮತ್ತು ಅವರು ಭಾಗವಹಿಸಲಿದ್ದಾರೆ. ಬದ್ರುದ್ದೀನ್ ಅಜ್ಮಲ್, ಓವೈಸಿಯಂತಹವರು ಸಮಾಜದಲ್ಲಿ ದ್ವೇಷವನ್ನು ಹರಡಿದರು. ಬಿಜೆಪಿ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಸ್ಲಿಂ ನಾಯಕ ಮತ್ತು ಮಾಜಿ ಸಚಿವ ಸಯ್ಯದ್‌ ಶಹನವಾಜ್ ಹುಸೇನ್ ರಾಮ ಮಂದಿರ ಉದ್ಘಾಟನೆ ಸಮಾರಂಭದ ಕುರಿತು ಮುಸ್ಲಿಮರಿಂದ ಯಾವುದೇ ನಕಾರಾತ್ಮಕ ಹೇಳಿಕೆಗಳು ಇಲ್ಲ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ಹೇಳಿಕೆ ನೀಡುತ್ತ ವಿಪಕ್ಷಗಳು ಶ್ರೀರಾಮನ ವಿರುದ್ಧವೂ ತಿರುಗಿ ಬಿದ್ದಿವೆ ಎಂದಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *