ಹಳೆಯ ಬ್ಲ್ಯಾಕ್ ಎಂಡ್ ವೈಟ್ ಫೋಟೋ ಹಾಕಿ ಕಾಂಗ್ರೆಸ್ ಶಾಸಕರೊಬ್ಬರ ಕಿವಿ ಹಿಂಡಿದ ಬಿ.ವೈ.ವಿಜಯೇಂದ್ರ
ಹೈಲೈಟ್ಸ್:
- ಬಜೆಟ್ ಅನುದಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎನ್ನುವ ಸರ್ಕಾರದ ಕೂಗು
- ರಾಜ್ಯ ಬಿಜೆಪಿ ಸಂಸದರು ’ಗಂಡಸರಾ’ ಎನ್ನುವ ಪ್ರಶ್ನೆಯನ್ನು ಎತ್ತಿದ ಶಾಸಕ ಎಚ್.ಸಿ.ಬಾಲಕೃಷ್ಣ
- ಹಳೆಯ ಇಂದಿರಾ ಗಾಂಧಿಯ ಫೋಟೋ ಹಾಕಿ ಗುಲಾಮಗಿರಿಯಿಂದ ಹೊರಬನ್ನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ
ಬೆಂಗಳೂರು : ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ನಾಯಕರುಗಳ ವಾಗ್ಯುದ್ದ ಮುಗಿಲು ಮುಟ್ಟುವುದು ಸಹಜ. ಅದೂ, ಕೇಂದ್ರದ ಬಜೆಟ್ ಮಂಡನೆಯ ನಂತರ ತೆರಿಗೆ ಪಾಲಿನ ವಿಚಾರದಲ್ಲಿ ಮೂರು ಪಕ್ಷಗಳ ನಾಯಕರ ಆರೋಪ/ಪ್ರತ್ಯಾರೋಪ ತಾರಕಕ್ಕೇರಿದೆ.
ಬಿಜೆಪಿ ಸಂಸದರು ಗಂಡಸರೇ ಅಲ್ಲ ಎನ್ನುವ ಮಾತನ್ನು ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಗುಲಾಮಗಿರಿಯಿಂದ ಇನ್ನೂ ಕಾಂಗ್ರೆಸ್ಸಿನವರು ಹೊರ ಬಂದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹಳೆಯ ಫೋಟೋ ಜೊತೆ ಟ್ವೀಟ್ ಮಾಡಿ ವಿಜಯೇಂದ್ರ, ” ಬ್ರಿಟಿಷರು ದೇಶಬಿಟ್ಟು ತೊಲಗಿದರೂ ನೆಹರೂ ಕುಟುಂಬದ ಗುಲಾಮಗಿರಿಯ ನೆರಳಲ್ಲೇ ಇರುವ ಶಾಸಕ ಬಾಲಕೃಷ್ಣನವರಂತಹ ಕಾಂಗ್ರೆಸ್ಸಿಗರು ಇಂದು ನಮ್ಮ ಪಕ್ಷದ ಸಂಸದರುಗಳನ್ನು ಕುರಿತು ನೀಡಿರುವ ಕೀಳುಮಟ್ಟದ ಹೇಳಿಕೆಗೆ ಈ ಚಿತ್ರವೇ ಉತ್ತರ ಹೇಳುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ.
ವಿಜಯೇಂದ್ರ ಟ್ವೀಟಿಗೆ ಪ್ರತಿಕ್ರಿಯಿಸಿರುವ ಬಾಲಕೃಷ್ಣ, ” ನಿಮ್ಮ ಸಂಸದರಿಗೆ ದೆಹಲಿಗೆ ಹೋಗಿ @narendramodi ಅವರ ಮುಂದೆ ನಿಂತು ಈ ರೀತಿ ಮಾತನಾಡುವ ತಾಕತ್ತು ಇದೆಯಾ..?! ಗುಜರಾತಿಗಳು ನಿಮ್ಮ ಪೂಜ್ಯ ತಂದೆಯವರನ್ನು ಹೀನಾಯವಾಗಿ ಸಿಎಂ ಕುರ್ಚಿಯಿಂದ ಇಳಿಸಿ ಕಣ್ಣೀರು ಹಾಕಿಸಿದ್ದು ಮರೆತುಹೋಯಿತೇ ವಿಜಯೇಂದ್ರರವರೇ..?!” ಎಂದು ಪ್ರತಿಕ್ರಿಯಿಸಿದ್ದಾರೆ.
ಬಾಲಕೃಷ್ಣ ಹೇಳಿದ್ದೇನು: “ದೇಶದಲ್ಲಿ ಅತ್ಯಂತ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ನಮಗೆ ಸಿಗಬೇಕಾಗಿರುವ ಅನುದಾನವನ್ನು ಕೇಂದ್ರ ಸರ್ಕಾರ ಕೊಡುತ್ತಿಲ್ಲ. ನಮ್ಮಿಂದ ಬರುವ ಹಣವನ್ನು ದೇಶದ ಇತರ ಭಾಗಗಳಿಗೆ ಹಂಚಲಾಗುತ್ತಿದೆ”.
ಸಂಸದರು ಪ್ರಧಾನಿ ಮೋದಿಯವರ ಮುಂದೆ ಎದ್ದೇಳುವುದೂ ಇಲ್ಲ
“ಹೆಚ್ಚು ಅನುದಾನ ಬರುತ್ತಿರುವ ರಾಜ್ಯಗಳಿಗೆ ಅದರ ಪಾಲನ್ನು ಕೊಡಬೇಕೆಂದು ನಾವು ಒತ್ತಾಯ ಮಾಡುತ್ತಿದ್ದೇವೆ. ಪಾಪ ನಮ್ಮ ಬಿಜೆಪಿ ಸಂಸದರು ಪ್ರಧಾನಿ ಮೋದಿಯವರ ಮುಂದೆ ಎದ್ದೇಳುವುದೂ ಇಲ್ಲ, ಕುಳಿತುಕೊಳ್ಳುವುದೂ ಇಲ್ಲ. ಇಂತಹ ಪರಿಸ್ಥಿಯಲ್ಲಿ ನಾವಿದ್ದೇವೆ, ಇವರೆಲ್ಲಾ ನರೇಂದ್ರ ಮೋದಿಯವರ ಹೆಸರಿನಲ್ಲಿ ಗೆಲ್ಲುತಾರೆಯೇ ವಿನಃ, ಯಾರಿಗೂ ವೈಯಕ್ತಿಕವಾದ ವರ್ಚ್ಚಸ್ಸು ಇಲ್ಲ”.
ಬಿಜೆಪಿಯವರಿಗೆ ತಕ್ಕ ಪಾಠವನ್ನು ಕಲಿಸಬೇಕು
“ಈಗಿನ ಪರಿಸ್ಥಿತಿಯನ್ನು ಅರಿತು, ಜನರು ಬಿಜೆಪಿಯವರಿಗೆ ತಕ್ಕ ಪಾಠವನ್ನು ಕಲಿಸಬೇಕು. ಹಾಲೀ ಸಂಸದರು ಶೋಪೀಸುಗಳು, ದೆಹಲಿಗೆ ಹೋಗಿ ಸೈನ್ ಟಿಎ – ಡಿಎ ಪಡೆದುಕೊಂಡು ವಾಪಸ್ ಬರುತ್ತಿದ್ದಾರೆ. ನಾನು ಗ್ಯಾರಂಟಿ ಬಗ್ಗೆ ಮಾತನಾಡಿದೆ, ಸರ್ಕಾರ ಗ್ಯಾರಂಟಿ ಸ್ಕೀಂ ಅನ್ನು ರದ್ದು ಮಾಡುತ್ತಾರೆ ಎಂದು ಸುದ್ದಿಯಾಯಿತು” ಎಂದು ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.
“ನಮ್ಮ ಹೋರಾಟಗಳನ್ನು ನೋಡಿ ಬಿಜೆಪಿಯಲ್ಲಿರುವ ಗಂಡಸರು ಧ್ವನಿ ಎತ್ತಬಹುದು ಎನ್ನುವುದು ನಮ್ಮ ಭಾವನೆ. ಇದಕ್ಕೆ ಬಿಜೆಪಿಯವರಿಂದ ಪ್ರತಿಕ್ರಿಯೆ ಬಂದಿಲ್ಲಾಂದರೆ ಅಲ್ಲಿ ಯಾರೂ ಗಂಡಸರು ಇಲ್ಲ ಎಂದರ್ಥ ” ಎನ್ನುವ ಮಾತನ್ನು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದರು.