ಮೊಹಮದ್ ನಲಪಾಡ್ ಆಪ್ತನಿಗೆ ಇಡಿ ಶಾಕ್! ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಜಪ್ತಿ, ಕಾರ್‌ನಲ್ಲಿತ್ತು ವಿಧಾನಸಭೆಯ ಅಧಿಕೃತ ಸ್ಟಿಕ್ಕರ್
ಹೈಲೈಟ್ಸ್:
- ಮೊಹಮದ್ ನಲಪಾಡ್ ಆಪ್ತನಿಗೆ ಶಾಕ್ ನೀಡಿದ ಜಾರಿ ನಿರ್ದೇಶನಾಲಯ
- ಕೇರಳದ ಚಿನ್ನದ ವ್ಯಾಪಾರಿ ಮೊಹಮದ್ ಹಫೀಜ್ ಮೇಲೆ ಇಡಿ ದಾಳಿ
- ಮೊಹಮದ್ ಹಫೀಜ್ ಬಳಸುತ್ತಿದ್ದ ಕಾರಿನಲ್ಲಿ ಶಾಸಕ ಎನ್‌ಎ ಹ್ಯಾರೀಸ್ ಸ್ಟಿಕ್ಕರ್
ಬೆಂಗಳೂರು : ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಹೆಸರಿನಲ್ಲಿ ಶಾಸನ ಸಭೆಯಿಂದ ನೀಡಿದ್ದ ಅಧಿಕೃತ ಸ್ಟಿಕ್ಕರ್ ಬಳಕೆ ಮಾಡುತ್ತಿದ್ದ ಕೇರಳದ ಚಿನ್ನದ ವ್ಯಾಪಾರಿ ಮೊಹಮದ್ ಹಫೀಜ್‌ಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನ ಜಪ್ತಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಮೊಹಮದ್ ಹಫೀಜ್‌ಗೆ ಸಂಬಂಧಿಸಿ ಕೇರಳ, ಕರ್ನಾಟಕ, ಗೋವಾ ಸೇರಿ 9 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ದಾಳಿ ವೇಳೆ 12.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಏಳು ಮೊಬೈಲ್ ಮತ್ತಿತರ ದಾಖಲೆ ಜಪ್ತಿ ಮಾಡಲಾಗಿದೆ.
ಜತೆಗೆ ಆರೋಪಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳಲ್ಲಿನ 4.4 ಕೋಟಿ ರೂ. ಫ್ರೀಜ್ ಮಾಡಿಸಲಾಗಿದೆ. ಶೋಧ ಕಾರ್ಯಾಚರಣೆ ವೇಳೆ ಆರೋಪಿ ಮೊಹಮದ್ ಹಫೀಜ್ ಬಳಸುತ್ತಿದ್ದ ಕಾರಿಗೆ ಶಾಸಕ ಎನ್.ಎ. ಹ್ಯಾರಿಸ್‌ಗೆ ನೀಡಿದ್ದ ಅಧಿಕೃತ ಪ್ರೋಟೋಕಾಲ್ ಸ್ಟಿಕ್ಕರ್ ಬಳಸುತ್ತಿದ್ದ ಸಂಗತಿ ಗೊತ್ತಾಗಿದೆ. ಹಫೀಜ್ ಬಳಸುತ್ತಿದ್ದ ಕಾರು ಮೊಹಮದ್ ನಲಪಾಡ್ ಹೆಸರಿನಲ್ಲಿ ಖರೀದಿಸಿದ್ದು, ಮೊಹಮದ್ ನಾಸೀರ್ ಹೆಸರಿನಲ್ಲಿ ನೋಂದಣಿ ಮಾಡಿಸಲಾಗಿದೆ.
ನಾಸೀರ್, ಹ್ಯಾರಿಸ್ ಅವರ ರಾಜಕೀಯ ಪರಮಾಪ್ತನಾಗಿದ್ದು, ನಲಪಾಡ್‌ಗೆ ಸಂಬಂಧಿಯಾಗಿದ್ದಾನೆ. ಅಷ್ಟೇ ಅಲ್ಲದೆ, ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್‌ಗೆ ಆರೋಪಿ ಮೊಹಮದ್ ಹಫೀಜ್ ಆತ್ಮೀಯ ಸ್ನೇಹಿತನಾಗಿದ್ದ ವಿಚಾರವೂ ತನಿಖೆಯಿಂದ ಗೊತ್ತಾಗಿದೆ ಎಂದು ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ, ಸಂಬಂಧಿಕರಿಗೆ ಮೋಸ ಹಾಗೂ 108.73 ಕೋಟಿ ರೂ. ಸುಲಿಗೆ, ಹೆಚ್ಚಿನ ವರದಕ್ಷಿಣೆ ಕಿರುಕುಳ ಆರೋಪದ ಮೇರೆಗೆ ಮೊಹಮದ್ ಹಫೀಜ್ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ವಂಚನೆ ಬಗ್ಗೆ ಕೇರಳ, ಕರ್ನಾಟಕ ಹಾಗೂ ಗೋವಾದ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಮೊಹಮ್ಮದ್ ಹಫೀಜ್ ಹಾಗೂ ಆತನ ಸಹಚರರ ವಿರುದ್ಧ ದೂರು ದಾಖಲಾಗಿತ್ತು.