Arvind Kejriwal: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅರೆಸ್ಟ್, ಅಬಕಾರಿ ನೀತಿ ಹಗರಣದಲ್ಲಿ ಇಡಿಯಿಂದ ಬಂಧನ!

ದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಸಿಎಂ (Delhi CM) ಅರವಿಂದ್ ಕೇಜ್ರಿವಾಲ್ (Arvind Kejriwal) ಅರೆಸ್ಟ್ ಆಗಿದ್ದಾರೆ. ಅಬಕಾರಿ ನೀತಿ ಹಗರಣದ (Excise policy scam) ತನಿಖೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು, ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಕೋರಿದ್ದರು. ಆದರೆ ತಮ್ಮನ್ನು ಬಂಧಿಸದಂತೆ ಇಡಿಗೆ ನಿರ್ದೇಶನ ನೀಡುವಂತೆ ಕೋರಿ ಕೇಜ್ರಿವಾಲ್ ದೆಹಲಿ ಹೈಕೋರ್ಟ್ (Delhi High Court) ಮೊರೆ ಹೋಗಿದ್ದರು. ಆದರೆ ಅರವಿಂದ್ ಕೇಜ್ರಿವಾಲ್ ಮನವಿ ತಿರಸ್ಕರಿಸಿದ್ದ ಹೈಕೋರ್ಟ್, ಅವರನ್ನು ಯಾಕೆ ಬಂಧಿಸಿಲ್ಲ ಅಂತ ಇಡಿ (ED) ಅಧಿಕಾರಿಗಳನ್ನು ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ನಿವಾಸಕ್ಕೆ ತೆರಳಿದ್ದ ಇಡಿ ಅಧಿಕಾರಿಗಳು, ವಿಚಾರಣೆ ನಡೆಸಿದರು. ಆದರೆ ಸಮರ್ಪಕ ಉತ್ತರ ಸಿಗದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿಯನ್ನು ಬಂಧಿಸಿದ್ದಾರೆ.

9 ಬಾರಿ ಸಮನ್ಸ್ ಜಾರಿ ಮಾಡಿದ್ದ ಇಡಿ!

ದೆಹಲಿ ಅಬಕಾರಿ ನೀತಿ ಹಗರಣದ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು, ಅರವಿಂದ್ ಕೇಜ್ರಿವಾಲ್‌ಗೆ ಸಮನ್ಸ್ ಜಾರಿ ಮಾಡಿದ್ದರು. ಅದೂ ಒಂದಲ್ಲ, ಎರಡಲ್ಲ… ಬರೋಬ್ಬರಿ 9 ಬಾರಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದಿಂದ ಕೇಜ್ರಿವಾಲ್‌ಗೆ ಸಮನ್ಸ್ ಜಾರಿ ಮಾಡಲಾಗಿತ್ತು.

ಇಡಿ ವಿಚಾರಣೆಗೆ ಹಾಜರಾಗದಿದ್ದ ಕೇಜ್ರಿವಾಲ್

ಇಡಿ ಅಧಿಕಾರಿಗಳು 9 ಬಾರಿ ಸಮನ್ಸ್ ನೀಡಿದ್ದರೂ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಲಿರಲಿಲ್ಲ.  ಪದೇ ಪದೇ ಇಡಿ ಮುಂದೆ ಹಾಜರಾಗಲು ನಿರಾಕರಿಸಿದ್ದ ದೆಹಲಿ ಸಿಎಂ, ಇಡಿ ಸಮನ್ಸ್‌ಗಳು ಕಾನೂನುಬಾಹಿರ ಎಂದು ಹೇಳಿದ್ದರು.

ಸಮನ್ಸ್ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ

ಇಡಿ ಸಮನ್ಸ್ ವಿರುದ್ಧ ಕೇಜ್ರಿವಾಲ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಇಡಿ ಬಂಧನದಿಂದ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು.

ಕೇಜ್ರಿವಾಲ್ ಅರ್ಜಿ ತಿರಸ್ಕರಿಸಿದ್ದ ಹೈಕೋರ್ಟ್

ಆದರೆ ಕೇಜ್ರಿವಾಲ್ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಈ ಹಂತದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡುವುದಿಲ್ಲ ಅಂತ ಸ್ಪಷ್ಟಪಡಿಸಿದ್ದ ನ್ಯಾಯಪೀಠ, ಕೇಜ್ರಿವಾಲ್ ಅವರ ಮನವಿಗೆ ಉತ್ತರಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದ ಹೈಕೋರ್ಟ್, ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿತ್ತು.

ಮನೆಯಲ್ಲಿ ವಿಚಾರಣೆ, ಬಳಿಕ ಅರೆಸ್ಟ್ ಮಾಡಿದ ಇಡಿ

ಕೇಜ್ರಿವಾಲ್ ಮನವಿಯನ್ನು ಹೈಕೋರ್ಟ್ ತಿರಸ್ಕರಿಸುತ್ತಿದ್ದಂತೆ ಇಡಿ ಅಧಿಕಾರಿಗಳು ಸಂಜೆ ದೆಹಲಿ ಸಿಎಂ ನಿವಾಸಕ್ಕೆ ಧಾವಿಸಿದರು. ಬಳಿಕ ಅರವಿಂದ್ ಕೇಜ್ರಿವಾಲ್‌ರನ್ನು ವಿಚಾರಣೆ ನಡೆಸಿದರು. ಆದರೆ ಸೂಕ್ತ ಉತ್ತರ ಸಿಗದ ಕಾರಣ ಇದೀಗ ಕೇಜ್ರಿವಾಲ್‌ರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ದೆಹಲಿ ಸಿಎಂ ನಿವಾಸಕ್ಕೆ ಬಿಗಿ ಭದ್ರತೆ

ಕೇಜ್ರಿವಾಲ್ ವಿಚಾರಣೆ ಹಿನ್ನೆಲೆಯಲ್ಲಿ ದೆಹಲಿ ಸಿಎಂ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು. ದೆಹಲಿ ಪೊಲೀಸರು ಹಾಗೂ ಕೇಂದ್ರ ಮೀಸಲು ಪಡೆಯ ಸಿಬ್ಬಂದಿ ಕೇಜ್ರಿವಾಲ್ ಮನೆ ಸುತ್ತ ಬಂದೋಬಸ್ತ್ ಕೈಗೊಂಡಿದ್ದರು.

ಕೇಜ್ರಿವಾಲ್ ನಿವಾಸದ ಎದುರು ಹೈಡ್ರಾಮಾ

ಇನ್ನು ಸಿಎಂ ಕೇಜ್ರಿವಾಲ್ ಮನೆಗೆ ಇಡಿ ಅಧಿಕಾರಿಗಳು ಆಗಮಿಸುತ್ತಿದ್‌ದಂತೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಜಮಾಯಿಸಿದರು. ಇಡಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ, ಕೇಜ್ರಿವಾಲ್ ಪರ ಜೈಕಾರ ಕೂಗಿದ್ರು. ಆಮ್ ಆದ್ಮಿಯ ಹಲವು ಶಾಸಕರು, ನಾಯಕರು ಆಗಮಿಸಿ, ಕೇಜ್ರಿವಾಲ್ ಭೇಟಿಗೆ ಅವಕಾಶ ಕೋರಿದರು.

ಏನಿದು ದೆಹಲಿ ಅಬಕಾರಿ ನೀತಿ ಹಗರಣ?

ಖಾಸಗಿ ಸಂಸ್ಥೆಗಳು ರೀಟೇಲ್ ಲಿಕ್ಕರ್ ವಲಯಕ್ಕೆ ಪ್ರವೇಶಿಸಲು ಅನುಕೂಲ ಮಾಡಿಕೊಡುವಂತೆ ದೆಹಲಿ ಅಬಕಾರಿ ನೀತಿ 2021-22 ಅನ್ನು ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಅನುಷ್ಠಾನಗೊಳಿಸಿದ್ದು, ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ.  ಪರವಾನಗಿ ನೀಡುವುದರಲ್ಲಿ, ಪರವಾನಗಿ ಶುಲ್ಕಗಳ ಮನ್ನಾ ಅಥವಾ ಕಡಿತಗೊಳಿಸುವಲ್ಲಿ, ಎಲ್-1 ಪರವಾನಗಿಯನ್ನು ಅನುಮೋದನೆ ಇಲ್ಲದೆಯೇ ವಿಸ್ತರಿಸುವಲ್ಲಿ ಲಂಚ ಪಡೆದು ಕಂಪೆನಿಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ ಎಂಬ ಗಂಭೀರ ಆರೋಪ ದೆಹಲಿ ಸರ್ಕಾರದ ಮೇಲಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *