ಇದು ಪಕ್ಕಾ ಫ್ಯಾಮಿಲಿ ಪಾಲಿಟಿಕ್ಸ್: ಟಿಕೆಟ್ ವಿಚಾರದಲ್ಲಿ ಕುಟುಂಬಕ್ಕೇ ಮಣೆ; ಕಾರ್ಯಕರ್ತರು ಕಾಣೆ!
ಹೈಲೈಟ್ಸ್:
- ಲೋಕಸಭೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕುಟುಂಬಗಳಿಗೇ ಮಣೆ
- ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಪಕ್ಷಗಳಲ್ಲೂ ಒಂದೇ ಪರಿಸ್ಥಿತಿ
- ಕಾರ್ಯಕರ್ತರು ಹಗಲು ರಾತ್ರಿ ಕಷ್ಟಪಟ್ಟು ದುಡಿದಿದ್ದಕ್ಕೆ ಏನು ಬೆಲೆ ಸಿಕ್ಕಿತು?
ಬೆಂಗಳೂರು : ಅಧಿಕಾರ ನನಗೆ ಸಿಕ್ಕಾಯಿತು, ಇನ್ನು ನನ್ನ ಪುತ್ರ ಅಥವಾ ಪುತ್ರಿಯ ಸರಣಿ. ಅವರಿಲ್ಲಾಂದ್ರೆ ಪತ್ನಿ ಅಥವಾ ಸಹೋದರ. ಕಾರ್ಯಕರ್ತರಿಗೆ, ಪಕ್ಷಕ್ಕಾಗಿ ತಳಮಟ್ಟದಲ್ಲಿ ದುಡಿದವರಿಗೆ ಏನಿದ್ದರೂ ಕೊನೆಯ ಸಾಲು. ಹೌದು, ಸದ್ಯ ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಕುಟುಂಬವೇ ಪ್ರಧಾನವಾಗುತ್ತಿದೆ ಎಂಬುವುದಕ್ಕೆ ಇದು ಸಾಕ್ಷಿಯಾಗುತ್ತಿದೆ. ಇದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಹೊರತಾಗಿಲ್ಲ.
ರಾಜ್ಯದಲ್ಲಿ ಆಡಳಿತ ರೂಢ ಕಾಂಗ್ರೆಸ್ 24 ಟಿಕೆಟ್ ಗಳನ್ನು ಎರಡು ಹಂತದಲ್ಲಿ ಘೋಷಣೆ ಮಾಡಿದೆ. ಈ ಪೈಕಿ 13 ಅಭ್ಯರ್ಥಿಗಳು ರಾಜಕೀಯ ಕುಟುಂಬದ ಹಿನ್ನಲೆಯಿಂದ ಬಂದವರು. ಅದರಲ್ಲೂ 5 ಮಂದಿ ಅಭ್ಯರ್ಥಿಗಳು ಸಚಿವರ ಮಕ್ಕಳು, ಮತ್ತೋರ್ವ ಅಭ್ಯರ್ಥಿ ಸಚಿವರೊಬ್ಬರ ಪತ್ನಿ, ಮತ್ತೋರ್ವ ಅಭ್ಯರ್ಥಿ ಸಚವರೊಬ್ಬರ ಸಹೋದರಿ.
ಕುಟುಂಬ ಹಿನ್ನೆಲೆ ಹೊಂದಿರುವ ಕೈ ಅಭ್ಯರ್ಥಿಗಳು ಯಾರೆಲ್ಲಾ?
- ಡಿಕೆ ಸುರೇಶ್ – ( ಡಿಕೆ ಶಿವಕುಮಾರ್ ಸಹೋದರ)
- ಗೀತಾ ಶಿವರಾಜ್ ಕುಮಾರ್ ( ಸಚಿವ ಮಧುಬಂಗಾರಪ್ಪ ಸಹೋದರಿ)
- ಶ್ರೇಯಸ್ ಪಟೇಲ್ ( ಮಾಜಿ ಸಂಸದ ಜಿ ಪುಟ್ಟಸ್ವಾಮಿ ಅವರ ಮೊಮ್ಮಗ)
- ಸ್ಟಾರ್ ಚಂದ್ರು ( ಗೌರಿಬಿದನೂರು ಶಾಸಕ ಕೆ.ಎಚ್ ಪುಟ್ಟಸ್ವಾಮಿ ಅವರ ಸಹೋದರ)
- ಸೌಮ್ಯ ರೆಡ್ಡಿ ( ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ)
- ಮನ್ಸೂರ್ ಅಲಿ ಖಾನ್ (ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಪುತ್ರ )
- ಮೃಣಾಲ್ ಹೆಬ್ಬಾಳ್ಕರ್ ( ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ)
- ಪ್ರಿಯಾಂಕಾ ಜಾರಕಿಹೊಳಿ ( ಸಚಿವ ಸತೀಶ್ ಜಾರಕಿಹೊಳಿ ಪುತ್ರಿ)
- ಸಂಯುಕ್ತಾ ಪಾಟೀಲ್ ( ಸಚಿವ ಶಿವರಾನಂದ ಪಾಟೀಲ್ ಪುತ್ರಿ)
- ಪ್ರಭಾ ಮಲ್ಲಿಕಾರ್ಜುನ ( ಸಚಿವ ಎಸ್ ಎಸ್ ಮಲ್ಲಿಕಾರ್ಜುಣ ಅವರ ಪತ್ನಿ)
- ಸಾಗರ್ ಖಂಡ್ರೆ ( ಸಚಿವ ಈಶ್ವರ್ ಖಂಡ್ರೆ ಪುತ್ರ)
- ರಾಧಾಕೃಷ್ಣ ದೊಡ್ಡಮನಿ ( ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ)
- ಕೆ ರಾಜಶೇಖರ್ ಹಿಟ್ನಾಳ್ ( ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ)
ಇನ್ನು ಬಳ್ಳಾರಿಯಲ್ಲಿ ಶಾಸಕ ತುಕರಾಮ್ ಪತ್ನಿ ಟಿಕೆಟ್ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಚಾಮರಾಜನಗರದಲ್ಲಿ ಎಚ್ಸಿ ಮಹದೇವಪ್ಪ ಪುತ್ರ ಸುನೀಲ್ ಬೋಸ್ಗೆ ಟಿಕೆಟ್ ಕೊಡಿಸುವ ಪ್ರಯತ್ನಗಳು ನಡೆಯುತ್ತಿವೆ.
ಬಿಜೆಪಿಯೂ ಹೊರತಾಗಿಲ್ಲ
ಪ್ರಧಾನಿ ನರೇಂದ್ರ ಮೋದಿ ಪರಿವಾರ ವಾದದ ವಿರುದ್ಧವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ರಾಜ್ಯ ಬಿಜೆಪಿಯಲ್ಲೂ ಪರಿವಾರ ವಾದಕ್ಕೆ ಮಣೆ ಹಾಕಲಾಗಿದೆ ಎಂಬುವುದು ವಾಸ್ತವ. ಪಕ್ಷದಲ್ಲೇ ಇದರ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ. ಟಿಕೆಟ್ ಹಂಚಿಕೆಯಲ್ಲೂ ಕುಟುಂಬಕ್ಕೆ ಮಣೆ ಹಾಕಿರುವುದು ಕಾಣಿಸುತ್ತಿದೆ.
- ಗಾಯತ್ರಿ ಸಿದ್ದೇಶ್ವರ ( ಜಿ ಎಂ ಸಿದ್ದೇಶ್ವರ ಪತ್ನಿ)
- ಬಿ ವೈ ರಾಘವೇಂದ್ರ ( ಬಿಎಸ್ ಯಡಿಯೂರಪ್ಪ ಪುತ್ರ)
- ತೇಜಸ್ವಿ ಸೂರ್ಯ ( ಶಾಸಕ ರವಿ ಸುಬ್ರಹ್ಣಣ್ಯ ಸಹೋದರನ ಪುತ್ರ)
- ಅಣ್ಣಾ ಸಾಹೇಬ್ ಜೊಲ್ಲೆ ( ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಪತಿ)
- ಡಾ. ಸಿಎನ್ ಮಂಜುನಾಥ್ ( ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಅಳಿಯ)
ಜೆಡಿಎಸ್ ನಲ್ಲಿ ಇದು ಸಹಜ!
ಇನ್ನು ಜೆಡಿಎಸ್ ಎಂಬುವುದು ಕುಟುಂಬ ಆಧರಿತ ಪಕ್ಷವಾಗಿದೆ. ಇಲ್ಲಿನ ನಾಯಕತ್ವವೂ ಕುಟುಂಬದ ಕೈಯಲ್ಲಿದೆ. ಸಹಜವಾಗಿ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯ ಸಂದರ್ಭದಲ್ಲೂ ಕುಟುಂಬಕ್ಕೆ ಆದ್ಯತೆ ಕೊಡುವುದು ಸಹಜ. ಸದ್ಯ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅಭ್ಯರ್ಥಿಯಾಗಿದ್ದಾರೆ. ಎನ್ಡಿಎ ಮೈತ್ರಿಯಾಗಿರುವ ಜೆಡಿಎಸ್ ಮಂಡ್ಯದಲ್ಲಿ ಎಚ್ಡಿ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಕಾರ್ಯಕರ್ತರು ಕಾಣೆ
ಲೋಕಸಭೆ ಇರಲಿ ವಿಧಾನಸಭೆ ಚುನಾವಣೆ ಇರಲಿ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಮೂರು ಪಕ್ಷಗಳಲ್ಲಿ ಕುಟುಂಬಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು, ಎರಡನೇ, ಮೂರನೇ ಹಂತದ ನಾಯಕರು ಟಿಕೆಟ್ಗಾಗಿ ಪ್ರಯತ್ನ ನಡೆಸಿದರೂ ಅದು ಅವರಿಗೆ ದಕ್ಕುವುದಿಲ್ಲ. ಆದರೆ ಸಚಿವರು, ಶಾಸಕರು, ಪ್ರಭಾವಿಗಳು ರಾಜಕೀಯ ಅನುಭವ ಇಲ್ಲದ ತಮ್ಮ ಪುತ್ರ ಪುತ್ರಿಯರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ತನ್ನ ನಂತರದ ಪುತ್ರ, ಪುತ್ರಿ, ಪತ್ನಿ, ಸಹೋದರ ಎಂಬ ನಿಲುವಿನ ಮೂಲಕ ಅಧಿಕಾರರವನ್ನು ತಮ್ಮ ಕುಟುಂಬದ ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ.