ಕೈತಪ್ಪಿದ ಲೋಕಸಭೆ ಟಿಕೆಟ್‌,ಬೆಂಬಲಿಗರ ಸಭೆ ಕರೆದ ವೀಣಾ ಕಾಶಪ್ಪನವರ್‌, ಕುತೂಹಲ ಕೆರಳಿಸಿದ ನಡೆ

ಹೈಲೈಟ್ಸ್‌:

  • ಬಾಗಲಕೋಟೆ ಲೋಕಸಭೆ ಕ್ಷೇತ್ರದ ಟಿಕೆಟ್‌ ಕೈತಪ್ಪಿರುವ ಬೆನ್ನಲ್ಲೇ ಶುಕ್ರವಾರ ಬೆಂಬಲಿಗರ ಸಭೆ ಕರೆದಿದ್ದಾರೆ ವೀಣಾ ಕಾಶಪ್ಪನವರ್‌
  • ಸಚಿವ ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತಾ ಪಾಟೀಲ್‌ ಅವರಿಗೆ ಬಾಗಲಕೋಟೆ ಟಿಕೆಟ್‌ ನೀಡಿರುವ ಹಿನ್ನಲೆ
  • ಜಿಲ್ಲೆಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ ಕಾಂಗ್ರೆಸ್‌ನ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಮುಂದಿನ ನಡೆ

ಬಾಗಲಕೋಟೆ: ಲೋಕಸಭೆ ಕ್ಷೇತ್ರದ ಟಿಕೆಟ್‌ ಕೈತಪ್ಪಿರುವ ಬೆನ್ನಲ್ಲೇ ಕಾಂಗ್ರೆಸ್‌ನ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್‌ ಮಾ.22 ರಂದು ಬೆಂಬಲಿಗರ ಸಭೆ ಕರೆದಿದ್ದಾರೆ. ಜಿಲ್ಲೆಯ ರಾಜಕೀಯ ವಲಯದಲ್ಲಿ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ನಿಂದ ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ಗುರುವಾರ ರಾತ್ರಿ ಟಿಕೆಟ್‌ ಘೋಷಣೆಯಾಗಿದ್ದು, ಸಚಿವ ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತಾ ಪಾಟೀಲ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಸಿ, ಈಗ ಕೈತಪ್ಪಿರುವ ಹಿನ್ನೆಲೆಯಲ್ಲಿ ವೀಣಾ ಸಭೆ ಮಹತ್ವ ಪಡೆದುಕೊಂಡಿದೆ. ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಸಭೆ ನಿಗದಿಯಾಗಿದೆ. ವೀಣಾ ಮತ್ತು ಅವರ ಪತಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಾಶಪ್ಪನವರ ಸಾವಿರಕ್ಕೂ ಹೆಚ್ಚು ಬೆಂಬಲಿಗರು ಸಭೆಗೆ ಆಗಮಿಸುವ ನಿರೀಕ್ಷೆಯಿದೆ.

ತಣ್ಣಗಾಗದ ಅಸಮಾಧಾನ

ಪಕ್ಕದ ಜಿಲ್ಲೆಯ ಬಸವನಬಾಗೇವಾಡಿ ಶಾಸಕ, ಜವಳಿ ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ್‌ ಅವರಿಗೆ ಹೈಕಮಾಂಡ್‌ ಮಣೆ ಹಾಕಿದೆ ಎನ್ನುವುದು ವೀಣಾ ಹಾಗೂ ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣ. ಹೀಗಾಗಿಯೇ ಬುಧವಾರ ವೀಣಾ ಬೆಂಬಲಿಗರು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಟಿಕೆಟ್‌ಗಾಗಿ ವೀಣಾ ಹಾಗೂ ಅವರ ಪತಿ ಹೊಸದಿಲ್ಲಿಯಲ್ಲಿ ಕೊನೆಯ ಹಂತದ ಯತ್ನ ನಡೆಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದರೂ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ. ಹೀಗಾಗಿ ಜಿಲ್ಲೆಗೆ ಮರಳಿದ್ದಾರೆ.

ಕೈ ನಿಷ್ಠ ಕುಟುಂಬದ ಶಕ್ತಿ ಪ್ರದರ್ಶನ

ಸಭೆ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡುವುದು ವೀಣಾ ಅವರ ಉದ್ದೇಶ ಎನ್ನಲಾಗುತ್ತಿದೆ. ಸ್ಥಳೀಯ ಮುಖಂಡರು ತಮ್ಮನ್ನು ಕಡೆಗಣಿಸಿದ್ದಾರೆ ಎಂಬ ಕೋಪವಿದೆ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಜಿಲ್ಲಾಧ್ಯಕ್ಷರು, ಮುಖಂಡರ ವಿರುದ್ಧ ಆರೋಪದ ಸುರಿಮಳೆ ಕೇಳಿಬರುವ ಸಾಧ್ಯತೆಯಿದೆ. ಆದರೆ ಕಾಂಗ್ರೆಸ್‌ ಪಕ್ಷಕ್ಕೆ ನಿಷ್ಠವಾಗಿರುವ ಕುಟುಂಬದಿಂದ ಆಯೋಜಿಸಿರುವ ಸಭೆ ಯಾವ ತಿರುವು ಪಡೆದುಕೊಳ್ಳುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಒಂದೇ ಹೆಸರು ?

ಜಿಲ್ಲೆಯಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಂಯುಕ್ತಾ ಹೆಸರು ಮಾತ್ರ ಇತ್ತು ಎನ್ನುವುದು ಕಾಶಪ್ಪನವರ ಕುಟುಂಬ ಹಾಗೂ ಬೆಂಬಲಗರಲ್ಲಿ ಅಸಮಾಧಾನ ಸ್ಫೋಟಕ್ಕೆ ಕಾರಣವಾಗಿದೆ. ಆದರೆ ಜಿಲ್ಲಾಧ್ಯಕ್ಷ ನಂಜಯ್ಯನಮಠ “ನಾನು ಒಬ್ಬರ ಹೆಸರು ಮಾತ್ರ ಕಳುಹಿಸಿಲ್ಲ, ಸಂಭಾವ್ಯರ ಹೆಸರು ಕಳಿಸಿರುವೆ,” ಎಂದು ಸ್ಪಷ್ಟಪಡಿಸಿದ್ದಾರೆ. ಟಿಕೆಟ್‌ ಹಂಚಿಕೆ ಕುರಿತು ನಡೆದಿರುವ ಅಸಮಾಧಾನವನ್ನು ಪಕ್ಷದ ನಾಯಕರು ತಣ್ಣಗಾಗಿಸಲು ಯಾವ ಪ್ರಯತ್ನ ಮಾಡುತ್ತಾರೆ ಎನ್ನುವುದನ್ನು ಕಾಯ್ದು ನೋಡಬೇಕಾಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಹೊಸಬೆಳಕು, ಹಳೆಬೆಳಕು ಸ್ಟ್ರೋಕ್‌

ಸಾಮಾಜಿಕ ಜಾಲತಾಣಗಳಲ್ಲಿ ವೀಣಾ ಅವರ ಬೆಂಬಲಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ‘ಬಾಗಲಕೋಟೆ ಗೌಡ್ರು ವರ್ಸಸ್‌ ಪಕ್ಕದ ಮನೆ ಕಾಕಾನ ಮಗಳು’, ‘ಬರ್ರೀ ಪಾಟೀಲರ ಉಂಡು ಹೋಗರಿ, ಬಾಗಲಕೋಟಿ ನಿಮ್ಮಂತವರಿಗೆ ಬಿಟ್ಟಿ ಬಿದ್ದೈತಿ’, ‘ಪಕ್ಷಕ್ಕೆ ಕಾರ್ಯಕರ್ತರೇ ಸುಪ್ರೀಂ’ ಎಂಬ ಬರಹಗಳು ವೈರಲ್‌ ಆಗಿವೆ. ‘ವೀಣಾ ಅಕ್ಕನ ಒಂದೊಂದು ಹನಿ ಕಣ್ಣೀರಿನ ಶಾಪ ನಿಮಗೆ ತಟ್ಟದೇ ಇರುವುದಿಲ್ಲ ನಾಯಕರೇ’ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಜತೆಗೆ ‘ಗೋ ಬ್ಯಾಕ್‌ ಸಂಯುಕ್ತಾ’ ಹ್ಯಾಶ್‌ ಟ್ಯಾಗ್‌ ಕೂಡ ವೈರಲ್‌ ಆಗುತ್ತಿದೆ.

ಇನ್ನು ಸಂಯುಕ್ತಾ ಪಾಟೀಲ್ ಬೆಂಬಲಿಗರು ‘ಎಂಎಲ್ಸಿ ಚುನಾವಣೆಯಲ್ಲಿ ಜಿಲ್ಲೆಗೆ ಅನ್ಯಾಯವಾದಾಗ ನೀವು ಧ್ವನಿ ಎತ್ತಲಿಲ್ಲ. ಈಗ ಸಂಯುಕ್ತಾ ಅವರಿಗೆ ಅವಕಾಶ ನೀಡೋಣ’ ಎಂದು ತಿರುಗೇಟು ನೀಡುತ್ತಿದ್ದಾರೆ. ಇನ್ನು ‘ಹೊಸಬೆಳಕು’ ಎಂದು ಸಂಯುಕ್ತಾ ಅವರನ್ನು ಬಣ್ಣಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *