ಕಾಂಗ್ರೆಸ್‌ ಟಾರ್ಗೆಟ್ 12 : ಗೆಲ್ಲುವ ಸಾಧ್ಯತೆ ಇರುವ ಈ ಕ್ಷೇತ್ರಗಳಿಗೆ ಕೈ ನಾಯಕರಿಂದ ಹೆಚ್ಚಿನ ಒತ್ತು !

ಹೈಲೈಟ್ಸ್‌:

  • ಗೆಲ್ಲುವ ಸಾಧ್ಯತೆಗಳು ಇರುವ ಕ್ಷೇತ್ರಗಳತ್ತ ಕಾಂಗ್ರೆಸ್ ನಾಯಕರ ಒತ್ತು
  • ಬಿಜೆಪಿ ಜೆಡಿಎಸ್ ಮೈತ್ರಿ ಗೊಂದಲ, ಕಮಲದಲ್ಲಿರುವ ಒಳಬೇಗುದಿಯ ಲಾಭ ಪಡೆಯಲು ಮುಂದಾಗಿದ್ದಾರೆ
  • ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ ಇಪ್ಪತ್ತು ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಹೇಳಿಕೊಳ್ಳುತ್ತಿದೆ. ಆದರೆ ಸದ್ಯದ ರಾಜ್ಯ, ರಾಷ್ಟ್ರದಲ್ಲಿರುವ ಪರಿಸ್ಥಿತಿಗೆ ಅನುಗುಣವಾಗಿ ವಾಸ್ತವದಲ್ಲಿ ಗೆಲ್ಲುವ ಸಾಧ್ಯತೆಗಳು ಇರುವ ಕ್ಷೇತ್ರಗಳತ್ತ ಕಾಂಗ್ರೆಸ್ ರಾಜ್ಯ ನಾಯಕರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅಭ್ಯರ್ಥಿ ಆಯ್ಕೆಯ ಜೊತೆಗೆ ತಂತ್ರಗಾರಿಕೆಯನ್ನು ಈ ಕ್ಷೇತ್ರಗಳಲ್ಲಿ ರೂಪಿಸಲಾಗುತ್ತಿದೆ.

28 ಲೋಕಸಭೆ ಕ್ಷೇತ್ರಗಳ ಪೈಕಿ ಕರಾವಳಿ, ಮಲೆನಾಡು ಕ್ಷೇತ್ರಗಳಲ್ಲಿ ಬಿಜೆಪಿ ಅತ್ಯಂತ ಪ್ರಬಲವಾಗಿದೆ. ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಬಿಜೆಪಿ ಪ್ರಬಲ ಅಖಾಡವಾಗಿದೆ. ಈ ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡುವ ಕಾಂಗ್ರೆಸ್ ಅಭ್ಯರ್ಥಿಗಳು ಇದ್ದಾರೆ. ಆದರೆ ಪಕ್ಷ ಸಂಘಟನೆಯ ಕೊರತೆ ಇರುವುದು ವಾಸ್ತವ. ಇದರ ಜೊತೆಗೆ ಮೈಸೂರಿನಲ್ಲಿ ಬಿಜೆಪಿ ತಂತ್ರಗಾರಿಕೆಯ ಭಾಗವಾಗಿ ಯದುವೀರ್ ಅವರನ್ನು ಕಣಕ್ಕಿಳಿಸಿದೆ. ಆದರೆ ಅವರನ್ನು ಎದುರಿಸಲು ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಇರುವುದು ಕೂಡಾ ಗಮನಾರ್ಹ.

ಇದರ ಹೊರತಾಗಿ ಕಾಂಗ್ರೆಸ್ ನಾಯಕರು, ತುಮಕೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಿಕ್ಕೋಡಿ, ಚಾಮರಾಜನಗರ, ದಾವಣಗೆರೆ, ಬಾಗಲಕೋಟೆ, ಬೀದರ್, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅಭ್ಯರ್ಥಿ ಆಯ್ಕೆಯಲ್ಲೂ ಈ ಕ್ಷೇತ್ರಗಳಲ್ಲಿ ಪ್ರಭಾವಿಗಳನ್ನೇ ಕಣಕ್ಕಳಿಸುತ್ತಿದೆ.

ತುಮಕೂರಿನಲ್ಲಿ ಮುದ್ದಹನುಮೇಗೌಡ, ಮಂಡ್ಯದಲ್ಲಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಬೆಂಗಳೂರು ಗ್ರಾಮಾಂತರ – ಡಿಕೆ ಸುರೇಶ್, ಬೆಳಗಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿಯಲ್ಲಿ
ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ, ಬಾಗಲಕೋಟೆ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್, ದಾವಣಗೆರೆ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ, ಬೀದರ್‌ನಲ್ಲಿ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆಯನ್ನು ಕಣಕ್ಕಿಳಿಸಿದೆ.

ಇನ್ನು ಬಳ್ಳಾರಿಯಲ್ಲಿ ಈ ತುಕರಾಮ್, ಚಾಮರಾಜನಗರದಲ್ಲಿ ಸುನೀಲ್ ಬೋಸ್, ಕೋಲಾರದಲ್ಲಿ ಎನ್‌ ಹನುಮಂತಯ್ಯ ಹಾಗೂ ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ.

ಸಚಿವರನ್ನು ಸ್ಪರ್ಧೆ ನಡೆಸಲು ಎಐಸಿಸಿ ಸೂಚಿಸಿದರೂ ಅವರು ಹಿಂದೇಟು ಹಾಕಿದ್ದರು. ಈ ಕಾರಣಕ್ಕಾಗಿ ಅವರ ಕುಟುಂಬಸ್ಥರಿಗೆ ಅವಕಾಶ ನೀಡಲಾಗಿದೆ. ಅಲ್ಲದೆ, ಅವರನ್ನು ಗೆಲ್ಲಿಸಿಕೊಂಡು ಬರುವ ಶರತ್ತನ್ನು ಹಾಕಲಾಗಿದೆ. ಈ ನಿಟ್ಟಿನಲ್ಲಿ ಸಚಿವರಿಗೂ ಹೇಗಾದರೂ ಮಾಡಿ ತಮ್ಮ ಕುಟುಂಬಸ್ಥರನ್ನು ಗೆಲ್ಲಿಸ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *