ಸುಮಲತಾ ನಿವಾಸಕ್ಕೆ ಭೇಟಿ ನೀಡಿದ ಎಚ್ಡಿ ಕುಮಾರಸ್ವಾಮಿ
ಹೈಲೈಟ್ಸ್:
- ಸುಮಲತಾರವರ ಮನೆಗೆ ಭೇಟಿ ನೀಡಿದ ಮಂಡ್ಯ ಜಿಲ್ಲಾ ಜೆಡಿಎಸ್ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ.
- ಬೆಂಗಳೂರಿನಲ್ಲಿರುವ ಸುಮಲತಾರವರ ಮನೆಗೆ ಭೇಟಿ ನೀಡಿದ ಮಾಜಿ ಸಿಎಂ.
- ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಬೇಕೆಂದು ಮನವಿ.
ಬೆಂಗಳೂರು: ಪ್ರಮುಖ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರ ನಿವಾಸಕ್ಕೆ ಮಾ. 31ರಂದು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ, ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಕೂಡ ಇದ್ದರು.
ಅಭಿಷೇಕ್ ಅಂಬರೀಶ್, ರಾಕ್‌ಲೈನ್ ವೆಂಕಟೇಶ್ ಅವರು ಮನೆಯ ದ್ವಾರದಲ್ಲೇ ನಿಂತು ಎಚ್‌ಡಿಕೆ ಅವರನ್ನು ಬರಮಾಡಿಕೊಂಡು ಮನೆಯೊಳಗೆ ಕರೆದೊಯ್ದರು. ಈ ವೇಳೆ ಎಚ್‌ಡಿಕೆ ಅವರು ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಹೂಗುಚ್ಛ ನೀಡಿ, ಲೋಕಸಭೆ ಚುನಾವಣೆ ವಿಚಾರವಾಗಿ ಆರೋಗ್ಯಕರ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನೀವು ಗೆದ್ದಿರಿ, ನನ್ನ ಮಗ ಸೋತಿದ್ದಾನೆ. ಆದದ್ದು ಆಗಿ ಹೋಗಿದೆ. ಎಲ್ಲವನ್ನೂ ಮರೆಯೋಣ. ಮೋದಿಯನ್ನು ಪ್ರಧಾನಿ ಮಾಡಬೇಕು. ಎಲ್ಲರೂ ಒಟ್ಟಾಗಿ ದುಡಿಯೋಣ. ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ ಎಂದು ಎಚ್‌ಡಿಕೆ ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್, ಕರ‍್ಯಕರ್ತರು ಮತ್ತು ಬೆಂಬಲಿಗರ ಸಭೆ ನಡೆಸಿ, ಅವರೊಂದಿಗೆ ಸಮಾಲೋಚಿಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಆದಿಚುಂಚನಗಿರಿ ಕ್ಷೇತ್ರಕ್ಕೂ ಭೇಟಿ
ಸಂಸದೆ ಸುಮಲತಾರವರ ನಿವಾಸಕ್ಕೆ ಭೇಟಿ ನೀಡುವ ಮುನ್ನ, ಕುಮಾರಸ್ವಾಮಿಯವರು ಭಾನುವಾರ ಬೆಳಗ್ಗೆ ಒಕ್ಕಲಿಗರ ಸಮುದಾಯದ ಶಕ್ತಿಕೇಂದ್ರದ ಎನಿಸಿರುವ ನಾಗಮಂಗಲ ತಾಲೂಕು ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ, ಶ್ರೀಮಠದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಇದೇ ವೇಳೆ ಆದಿಚುಂಚನಗಿರಿಯ ಕ್ಷೇತ್ರ ದೇವತೆ ಶ್ರೀಕಾಲಭೈರವೇಶ್ವರಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.