ಕಾಂಗ್ರೆಸ್ಗೆ ಮುಗಿಯದ ‘ತೆರಿಗೆ’ ಶಾಕ್, ಮತ್ತೆ ₹1,745 ಕೋಟಿ ಟ್ಯಾಕ್ಸ್ ಪಾವತಿ ಮಾಡುವಂತೆ ಐಟಿ ನೋಟಿಸ್!
ಹೈಲೈಟ್ಸ್:
- ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ಗೆ ತೆರಿಗೆ ಬಾಕಿ ಸಂಕಟ ಮತ್ತಷ್ಟು ಹೆಚ್ಚಿಳ
- ತೆರಿಗೆ ಮರು ಮೌಲ್ಯಮಾಪನ ಕೋರಿದ್ದ ಅರ್ಜಿ ವಜಾಗೊಂಡ ಬೆನ್ನಲ್ಲೇ ಮತ್ತೊಂದು ನೋಟಿಸ್
- 2014 – 15 ಹಾಗೂ 2016 – 17ನೇ ಸಾಲಿನ ತೆರಿಗೆ 1,745 ಕೋಟಿ ರೂ. ಪಾವತಿ ಮಾಡುವಂತೆ ನೋಟಿಸ್
- ಇದರಿಂದ ಒಟ್ಟಾರೆ ತೆರಿಗೆ ಬಾಕಿ, ಮತ್ತದರ ಮೇಲಿನ ದಂಡದ ಮೊತ್ತವಾಗಿ 3,567 ಕೋಟಿ ರೂ. ಪಾವತಿಸಬೇಕಿದೆ ಪಕ್ಷ
ಹೊಸದಿಲ್ಲಿ: ಲೋಕಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ಗೆ ತೆರಿಗೆ ಬಾಕಿ ಸಂಕಟ ಮತ್ತಷ್ಟು ಹೆಚ್ಚಿದೆ. ತೆರಿಗೆ ಮರು ಮೌಲ್ಯಮಾಪನ ಕೋರಿದ್ದ ಅರ್ಜಿ ವಜಾಗೊಂಡ ಬೆನ್ನಿಗೆ 2014 – 15 ಹಾಗೂ 2016 – 17ನೇ ಸಾಲಿನ ತೆರಿಗೆ 1,745 ಕೋಟಿ ರೂ. ಪಾವತಿ ಮಾಡುವಂತೆ ಆದಾಯ ತೆರಿಗೆ ಇಲಾಖೆ ಹೊಸದಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಗೆ ನೋಟಿಸ್ ನೀಡಿದೆ.
ಈ ಹೊಸ ನೋಟಿಸ್ನಿಂದ ಒಟ್ಟಾರೆ ತೆರಿಗೆ ಬಾಕಿ, ಮತ್ತದರ ಮೇಲಿನ ದಂಡದ ಮೊತ್ತವಾಗಿ ಕಾಂಗ್ರೆಸ್ ಇದೀಗ 3,567 ಕೋಟಿ ರೂ. ಪಾವತಿ ಮಾಡುವ ಅನಿವಾರ್ಯತೆಗೆ ಸಿಲುಕಿದೆ.
2014 – 15ನೇ ಸಾಲಿನ 663 ಕೋಟಿ ರೂ., 2015 – 16ನೇ ಸಾಲಿನ 664 ಕೋಟಿ ರೂ., 2016 – 17ನೇ ಸಾಲಿನ 417 ಕೋಟಿ ರೂ. ತೆರಿಗೆ ಪಾವತಿ ಮಾಡುವಂತೆ ಹೊಸದಾಗಿ ನೋಟಿಸ್ ನೀಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ರಾಜಕೀಯ ಪಕ್ಷಗಳಿಗೆ ನೀಡಲಾಗಿರುವ ತೆರಿಗೆ ವಿನಾಯಿತಿ ರದ್ದುಗೊಳಿಸಿರುವ ಅಧಿಕಾರಿಗಳು, ದೇಣಿಗೆ ಪಡೆದಷ್ಟು ಹಣಕ್ಕೆ ಸಮಾನವಾಗಿ ತೆರಿಗೆ ವಿಧಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೆಲವು ನಾಯಕರ ಮನೆ ಮೇಲೆ ತನಿಖಾ ಸಂಸ್ಥೆಗಳು ನಡೆಸಿದ ದಾಳಿ ವೇಳೆ ಪತ್ತೆಯಾದ ಡೈರಿಯ ಮಾಹಿತಿ, ಲಭ್ಯವಾದ ಹಣ ಪಾವತಿಯ ರಶೀದಿಗಳನ್ನು ಆಧರಿಸಿ ತೆರಿಗೆ ಪಾವತಿಸಲು ಕಾಂಗ್ರೆಸ್ಗೆ ನೋಟಿಸ್ ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಹಿಂದಿನ ವರ್ಷಗಳ ತೆರಿಗೆ ಬಾಕಿಗೆ ಪಕ್ಷದ ಖಾತೆಯಲ್ಲಿದ್ದ 135 ಕೋಟಿ ರೂ. ಹಣವನ್ನು ಈಗಾಗಲೇ ಬ್ಯಾಂಕ್ ಖಾತೆಯಿಂದ ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ಇಲಾಖೆ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಕಾಂಗ್ರೆಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.
ಚುನಾವಣೆ ಸಮಯದಲ್ಲಿ ಪ್ರತಿಪಕ್ಷವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಕೇಂದ್ರ ಸರಕಾರ ನಡೆಸುತ್ತಿರುವ ಪ್ರಯತ್ನ ತಡೆಯಬೇಕು ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿಯನ್ನೂ ಮಾಡಿದೆ.