Bengaluru News: ಮೆಟ್ರೋ ಕಾಮಗಾರಿ ಹಿನ್ನೆಲೆ; ಬೆಂಗಳೂರಿನ ಈ ಪ್ರಮುಖ ರಸ್ತೆ ಒಂದು ವರ್ಷ ಬಂದ್!
ಬೆಂಗಳೂರು: ಲಕ್ಕಸಂದ್ರ ಸುರಂಗ ಮೆಟ್ರೋ (Namma Metro) ನಿಲ್ದಾಣದ ದಕ್ಷಿಣ ಭಾಗದಲ್ಲಿ ಪ್ರವೇಶ ದ್ವಾರದ ಕಾಮಗಾರಿ ನಡೆಯಲಿದೆ. ಪ್ರವೇಶ ಕಾಮಗಾರಿಯ ನಿರ್ಮಾಣಕ್ಕೆ ಅನುಕೂಲವಾಗುವಂತೆ, ಬನ್ನೇರುಘಟ್ಟ (Bannerghatta) ಮುಖ್ಯರಸ್ತೆಯಲ್ಲಿರುವ ಉತ್ತರ ದಿಕ್ಕಿನ ಪಥವನ್ನು ಒಂದು ವರ್ಷದ ಮಟ್ಟಿಗೆ ಮುಚ್ಚಲಿರುವುದಾಗಿ ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದಾಗಿ ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ ಸಂಚಾರವನ್ನು ದಿನಾಂಕ 01.04.2024 ರಿಂದ ಒಂದು ವರ್ಷದ ಅವಧಿಗೆ ಮುಚ್ಚಲಾಗುತ್ತದೆ.
ಪರ್ಯಾಯ ರಸ್ತೆ ಮಾರ್ಗ?
ಈ ಸಂಬಂಧ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಡೈರಿ ಸರ್ಕಲ್ ಕಡೆಯಿಂದ ಚಲಿಸುವ ವಾಹನಗಳು ಆನೆಪಾಳ್ಯ ಜಂಕ್ಷನ್ ಕಡೆಗೆ ಚಲಿಸಬೇಕಾದ ವಾಹನಗಳು ಮೈಕೋ ಸಿಗ್ನಲ್‌ನಲ್ಲಿ ಬಲಕ್ಕೆ ತಿರುಗಿ ಭೋಷ್ ಲಿಂಕ್ ರಸ್ತೆಯ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ ಎಡಕ್ಕೆ ತಿರುಗಿ ಚಲಿಸಬೇಕು. ಆನೆಪಾಳ್ಯ ಜಂಕ್ಷನ್‌ನಿಂದ ಡೈರಿ ಸರ್ಕಲ್ ಕಡೆಗೆ ಚಲಿಸುವ ವಾಹನ ಸಂಚಾರದಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ.
ಇನ್ನು ಡೈರಿ ಸರ್ಕಲ್‌ನಿಂದ ಶಾಂತಿನಗರ ಕಡೆಗೆ ಚಲಿಸುವ ವಾಹನಗಳು ವಿಲ್ಸನ್ ಗಾರ್ಡನ್‌ನ 7ನೇ ಮುಖ್ಯ ರಸ್ತೆಯಲ್ಲಿ ಎಡಕ್ಕೆ ತಿರುವು ತೆಗೆದುಕೊಳ್ಳಬೇಕಾಗುತ್ತದೆ.